ಈ ಪುಟವನ್ನು ಪ್ರಕಟಿಸಲಾಗಿದೆ
ರಾಮರಾಜನ ಉತ್ಕರ್ಷ
೯೯

ಸಂತೋಷವಾಯಿತು. ಆದರೆ ಅವನು ವಿನಯದಿಂದ ಆ ಸರದಾರನನ್ನು ಕುರಿತು “ಬಾದಶಹನು ಕೈ ಹಿಡಿದರೆ ಬೇಕಾದವನು ಬೇಕಾದಂಥ ದೊಡ್ಡ ಪದವಿಗೇರಬಹುದು. ಈ ಅಧಿಕಾರದ ಮೇಲೆ ನನ್ನನ್ನು ಕಳಿಸುವಷ್ಟು ಯೋಗ್ಯತೆಯು ನನ್ನಲ್ಲಿಲ್ಲೆಂಬದು ನನಗೆ ಗೊತ್ತಿರುತ್ತದೆ. ಆದರೆ ಬಾದಶಹರ ಆಜ್ಞೆಯನ್ನು ಮೀರಲಿಕ್ಕೆ ಬರುವದಿಲ್ಲ. ನಮ್ಮ ಕೈಯಿಂದಾದಷ್ಟು ಯತ್ನಿಸಿ, ಬಾದಶಹರ ಹಿತಮಾಡಲು ಶಕ್ಯವಿದ್ದ ಮಟ್ಟಿಗೆ ಮಾಡಬೇಕು ಯಾಕೆ ಫಿದಾಹುಸೇನಖಾನ, ನನ್ನ ಮಾತು ಸರಿಯಾದದ್ದಷ್ಟೇ ? ನಿಮ್ಮ ಹಾಗು ಈ ಅಲೀ ಇಮಾಮಖಾನರ ಧೈರ್ಯದಿಂದ ನಾನು ಈ ಅಧಿಕಾರವನ್ನು ಪಡೆದಿರುತ್ತೇನೆ. ಇವರಿಬ್ಬರನ್ನು ನನ್ನ ಸಂಗಡ ಕಳಿಸಿದರೆ ಮಾತ್ರ ನಾನು ವಿಜಯನಗರದಲ್ಲಿ ಹೋಗಿ ನಿಂತುಕೊಳ್ಳುವೆನು, ಎಂದು ನಾನು ಬಾದಶಹರ ಮುಂದೆ ಸ್ಪಷ್ಟವಾಗಿ ಹೇಳಿದೆನು. ನಾನು ಸುಮ್ಮನೆ ಹೆಸರಿಗೆ ವಕೀಲನು. ನಿಜವಾದ ವಕೀಲರೂ, ಯೋಗ್ಯ ಆಲೋಚನೆಗಳನ್ನು ಹೇಳುವವರೂ ನೀವೇ ನಿಮ್ಮಿಬ್ಬರನ್ನು ನಾನು ಹಿರಿಯನೆಂದು ಭಾವಿಸಿರುವೆನು” ಎಂದು ಹೇಳಿದನು. ರಾತ್ರಿಯಾದ್ದರಿಂದ ಎಲ್ಲರೂ ಹೊರಟುಹೋದರು. ತರುಣ ರಣಮಸ್ತಖಾನನ ಮನಸಿನಲ್ಲಿ, ನಾನು ಬಾದಶಹನ ಕಾರ್ಯವನ್ನು ಸಾಧಿಸಿ ಹ್ಯಾಗೆ ಆತನ ಪ್ರೀತಿಗೆ ಪಾತ್ರನಾದೇನೆಂಬದೊಂದೇ ಮಾತು ಯಾವಾಗಲೂ ಕಟಿಯುತ್ತಿತ್ತು. ದರ್ಬಾರದಲ್ಲಿ ತಾನು ಉದ್ದಟತನದಿಂದ ನಡೆದದ್ದಕ್ಕಾಗಿ ತನ್ನ ಜನರು ಶ್ಲಾಘಿಸಿದ್ದರಿಂದ, ಇಂದು ಆತನಿಗೆ ಬಹಳ ಸಂತೋಷವಾಗಿತ್ತು, ತಾನು ಕಡೆತನಕ ಹೀಗೆಯೇ ಶ್ಲಾಘನೆಗೆ ಹ್ಯಾಗೆ ಪಾತ್ರನಾಗುತ್ತ ಹೋದೇನೆಂಬ ಚಿಂತೆಯಿಂದ ಆತನಿಗೆ ನಿದ್ದೆ ಬರಲೊಲ್ಲದು. ಆತನ ಮನಸ್ಸಿನಲ್ಲಿ ಒಂದರ ಹಿಂದೊಂದು ಕಲ್ಪನಾತರಂಗಗಳು ಉತ್ಪನ್ನವಾಗಹತ್ತಿದವು. ಈ ಕಲ್ಪನಾ ತರಂಗಗಳ ಅಲೆದಾಟದಿಂದ, ಅಂದು ಬೆಳತನಕ ಅತನಿಗೆ ನಿದ್ದೆ ಬರಲಿಲ್ಲವೆಂದು ಹೇಳಬಹುದು. ಬೆಳಗು ಹರಿಯುತ್ತಿರಲು, ಆತನು ಸ್ವಲ್ಪ ಕಣ್ಣಿಗೆ ಕಣ್ಣು ಹಚ್ಚಿದನು. ನಿದ್ದೆ ಹತ್ತಿ ಇನ್ನೂ ಎರಡು ತಾಸು ಪೂರ್ಣವಾಗಿದ್ದಿಲ್ಲ; ಅಷ್ಟರಲ್ಲಿ ಯಾರೋ ದೊಡ್ಡ ಧ್ವನಿಯಿಂದ ತನ್ನನ್ನು ಕೂಗಿ ಎಬ್ಬಿಸುವಂತೆ ಆತನಿಗೆ ಭಾಸವಾಗಿ ಆತನು ಎಚ್ಚತ್ತು ಲಗುಬಗೆಯಿಂದ ಹೋಗಿ ಬಾಗಿಲು ತೆರೆದನು, ಆಗ ಆತನ ಸಿಪಾಯಿಯು ಸಾಷ್ಟಾಂಗ ನಮಸ್ಕಾರ ಹಾಕಿ, ಕೈಯನ್ನು ರುಮಾಲದಿಂದ ಕಟ್ಟಿಕೊಂಡು ಬಾಗಿ ವಂದಿಸಿ-"ಗರೀಬ ಪರವರ, ತಮ್ಮನ್ನು ಸುಖ ನಿದ್ರೆಯಿಂದ ಎಚ್ಚರಗೊಳಿಸಿದ ಉದ್ಧಟತನಕ್ಕಾಗಿ ಈ ದಾಸನನ್ನು ಕ್ಷಮಿಸುವದಾಗಬೇಕು. ತಮ್ಮ ಪರಮ ಪೂಜ್ಯ ಮಾತೃಶ್ರೀಯವರ ಅಪ್ಪಣೆಯಿಂದ ಹೀಗೆ ಮಾಡಿದೆವು. ಅವರು ತಮ್ಮನ್ನು ಬೇಗನೆ