೧೧ ನೆಯ ಪ್ರಕರಣ
ಜಾಜ್ವಲ್ಯವೃತ್ತಿಯು
ರಣಮಸ್ತಖಾನನ ತಾಯಿಯು ಕುಂಜವನದ ಬಂಗಲೆಯೊಳಗಿನ ಒಂದು ಕೋಣೆಯಲ್ಲಿ ಒತ್ತಟ್ಟಿಗೆ ಇದ್ದ ಹಾಗೆ ಇದ್ದಳು. ಆಕೆಯ ವಯಸ್ಸು ಸರಾಸರಿ ಐವತ್ತು ವರ್ಷದ್ದಿರಬಹುದು; ಆಕೆಯು ಒಬ್ಬ ಸಾಧು ಸ್ತ್ರೀಯಂತೆ ಕಾಲಹರಣ ಮಾಡುತ್ತಿದ್ದಳು. ಒಬ್ಬ ಬಡ ಫಕೀರಿಯು ಮಸೀದೆಯ ಮುತವಲ್ಲಿಯು ದಯಮಾಡಿ ಕೊಟ್ಟಿದ್ದ ಮಸೀದೆಯ ಒಂದು ಕೋಣೆಯಲ್ಲಿ ಇರುವಂತೆ, ಆಕೆಯು ತನ್ನ ಮಗನ ಬಂಗಲೆಯ ಒಂದು ಕೋಣೆಯಲ್ಲಿ ಇರುತ್ತಿದ್ದಳೆಂದು ಹೇಳಬಹುದು. ಆ ಕೋಣೆಯಲ್ಲಿ ಒಂದು ನವಾರದ ಹೊರಸು. ಆ ಹೊರಸಿನ ಮೇಲೆ ಏನೋ ಒಂದು ಚವ್ವಾಳಿಯ ಹಾಗೆ ಒಗೆದದ್ದು ; ತಲೆಗಿಂಬಿನ ನಿಟ್ಟಿಗೆ ಚೌರಂಗದ ಮೇಲೆ ಕುರಾಣ, ಹಾಗು ಸಾಧುಸುತ್ಪುರುಷರ ಚರಿತ್ರದ ನಾಲ್ಕಾರು ಪುಸ್ತಕಗಳು; ಅಲ್ಲಿಯೇ ಸಮೀಪದಲ್ಲಿ ಒಂದು ಸರ್ವಸಾಧಾರಣವಾದ ಸಮೆಯು ; ಕೆಲವು ಹಸರು-ಹಳದಿ ಮಣಿಗಳು ಪೋಣಿಸಿದ ಜಪಮಾಲೆಯು ; ನೀರಿನಿಂದ ತುಂಬಿದ ಕೆಲವು ಪಾತ್ರೆಗಳು, ಇವಿಷ್ಟು ಒಡವೆಗಳು ಇದ್ದವು. ಕೋಣೆಯಲ್ಲಿ ಲೋಬಾನವು (ಊದು) ವಿಶೇಷವಾಗಿ ಸುಡಲ್ಪಟ್ಟಿದ್ದರಿಂದ, ಅದರ ವಾಸನೆಯು ಕೋಣೆಯ ತುಂಬ ಇಡಿಗಿತ್ತು. ಕೋಣೆಯ ಹೊರಗೆ ಮೂರು ನಾಲ್ಕು ಜನ ಮುದುಕ-ಮುದುಕಿ ದಾಸಿಯರು ಕುಳಿತಿದ್ದರು. ಹಾಗಲ ಹಣ್ಣಿನಂತೆ ತೀರ ಮುದುಕಿಯಾದ ಒಬ್ಬ ಸ್ತ್ರೀಯು ಕೋಣೆಯೊಳಗೆ ಚೌರಂಗದ ಹತ್ತಿರ ಕುಳಿತಿದ್ದು, ರಣಮಸ್ತಖಾನನ ತಾಯಿಯು ಪುಸ್ತಕವನ್ನು ಅರ್ಧ ತೆರೆದು ಗಟ್ಟಿಯಾಗಿ ಓದಿ, ಆಕೆಗೆ ಅರ್ಥಮಾಡಿ ಹೇಳುತ್ತಿದ್ದಳು. ಹೀಗಿರುವಾಗ ರಣಮಸ್ತಖಾನನು ಒಳಗೆ ಹೋಗಿ, ಕೂಡಲೆ ಮಾಸಾಹೇಬರನ್ನು ವಿನಯದಿಂದ ನಮಸ್ಕರಿಸಿ-
ರಣಮಸ್ತಖಾನ-ತಮ್ಮ ಅಪ್ಪಣೆಯಂತೆ ಬಂದಿದ್ದೇನೆ. ತಮ್ಮ ಪ್ರಕೃತಿಯು ನೆಟ್ಟಗಿರುವದಷ್ಟೇ ನಿನ್ನೆ ದರ್ಬಾರದಲ್ಲಿ ನಡೆದ ಸಂಗತಿಯನ್ನು ನಿನ್ನೆ ರಾತ್ರಿಯೇ ಬಂದು ನಿವೇದಿಸತಕ್ಕವನಿದ್ದನು; ಆದರೆ ಶೋಧ ಮಾಡಲಾಗಿ ತಾವು ಜಪಮಾಡುತ್ತ ಕುಳಿತಿರುವಿರೆಂದು ಸುದ್ದಿ ಬಂದದ್ದರಿಂದ, ತಮಗೆ ಉಪದ್ರವ ಕೊಡಲಿಕ್ಕೆ ಬರಲಿಲ್ಲ.