ಈ ಪುಟವನ್ನು ಪ್ರಕಟಿಸಲಾಗಿದೆ
೧೧೦
ಕನ್ನಡಿಗರ ಕರ್ಮಕಥೆ

ಕೂಡಲೆ ರಾಮರಾಜನು ಕುಳಿತ ಸ್ಥಳ ಬಿಟ್ಟು ಏಳದೆ “ತಮ್ಮ ಪತ್ರದ ಬೆನ್ನಹಿಂದೆ ತಾವು ಬರುವ ಶ್ರಮ ತಕ್ಕೊಂಡಿರಲ್ಲ? ಇದೇ ಈಗ ನಾನು ತಮ್ಮ ಪತ್ರಕ್ಕೆ ಉತ್ತರವನ್ನು ಬರೆದು ಕಳಿಸಿದ್ದೆನು” ಎಂದು ನುಡಿದು ತನ್ನಿಂದ ಸ್ವಲ್ಪ ಅಂತರದ ಮೇಲೆ ಕುಳಿತುಕೊಳ್ಳುವದಕ್ಕಾಗಿ ಸನ್ನೆಯಿಂದ ರಣಮಸ್ತಖಾನನಿಗೆ ಸೂಚಿಸಿದನು. ಇದರಿಂದಂತು ರಣಮಸ್ತಖಾನನ ಪಿತ್ತವು ತಲೆಗೇರಿತು. ಆತನು ಕುಳಿತುಕೊಳ್ಳುದೆ, ನಿಂತುಕೊಂಡೇ ರಾಮರಾಜನಿಗೆ- “ನಾನು ಕುಳಿತುಕೊಳ್ಳುವದಕ್ಕಾಗಿ ಇಲ್ಲಿಗೆ ಬಂದಿರುವದಿಲ್ಲ. ನಾನು ಬಂದ ಕೆಲಸವಾದರೆ ಕುಳಿತುಕೊಂಡಂತೆ ಆಯಿತು. ಆ ಜನರು ಬಂದಿದ್ದಾರೆ. ಒಂದು ನಿಟ್ಟಿನ ಜನರ ವಿಚಾರವನ್ನಂತು ನೀವು ಕೇಳಿಕೊಂಡಿರುವಿರಿ. ಇನ್ನೊಂದು ನಿಟ್ಟಿನವರ ವಿಚಾರವನ್ನು ಸಾವಕಾಶ ಕೇಳಿಕೊಳ್ಳಿರಿ; ಆದರೆ ಆ ಸ್ತ್ರೀಯರ ವಿಡಂಬನೆ ಮಾಡಬೇಡಿರಿ, ಅವರನ್ನಷ್ಟು ನನಗೆ ಒಪ್ಪಿಸಿರಿ. ಉಳಿದವರ ಮುಖದಿಂದ ಕೇಳಿಕೊಳ್ಳತಕ್ಕದ್ದನ್ನು ಕೇಳಿಕೊಂಡು, ಅವರಿಗೆ ಮಾಡತಕ್ಕ ಶಿಕ್ಷೆಯನ್ನು ಮಾಡಿರಿ” ಎಂದನು.

ರಣಮಸ್ತಖಾನನು ಅತ್ಯಂತ ಆತುರದಿಂದ ಮನಃಪೂರ್ವಕವಾಗಿ ಮಾತಾಡುತ್ತಿದ್ದನು, ರಾಮರಾಜು ಅರ್ಧ ಆತನ ಕಡೆಗೆ ಅರ್ಧ ಬೇರೆ ಕಡೆಗೆ ನೋಡುತ್ತ, ಮುಗುಳುನಗೆ ನಗುತ್ತ, ಆತನ ಮಾತುಗಳನ್ನು ಕೇಳುತ್ತಿದ್ದನು. ರಣಮಸ್ತಖಾನನ ಮತುಗಳು ಮುಗಿದ ಕೂಡಲೆ ರಾಮರಾಜನು ಮೇಲಕ್ಕೆ ಮುಖವನ್ನೆತ್ತಿ ಆತನನ್ನು ಕುರಿತು- ಹಿಂದುಗಳ ರಾಜ್ಯದಲ್ಲಿ ಹೆಂಗಸರ ವಿಡಂಬನೆಯ ಹೆಸರು ಸಹ ತೆಗೆಯಬೇಡಿರಿ; ಆದರೆ ವಿಚಾರಮಾಡಿ, ಮಾಡತಕ್ಕದನ್ನು ಮಾಡೋಣ, “ಯಾರವರು ಅಲ್ಲಿ? ಬಂದ ಆ ಜನರನ್ನು ಕರೆಯಿರಿ ಇತ್ತ” ಎಂದು ಅಜ್ಞಾಪಿಸುವದರೊಳಗೆ, ಆ ಜನರು ಬಂದ ಸುದ್ದಿಯನ್ನು ಒಬ್ಬಸೇವಕನು ರಾಮರಾಜನಿಗೆ ಹೇಳಿದನು. ಆಗ ರಾಮರಾಜನು ಈಗಲೇ ಅವರನ್ನು ಇಲ್ಲಿ ನನ್ನ ಎದುರಿಗೆ ಕರೆದುಕೊಂಡು ಬರ್‍ರಿ ಎಂದು ಹೇಳುತ್ತಿರಲು, ರಣಮಸ್ತಖಾನನು “ತಾವು ಈ ಅಪ್ಪಣೆಯನ್ನು ಯಾರ ಸಲುವಾಗಿ ಮಾಡುವಿರಿ ? ಒಳಗೆ ತಮ್ಮ ಎದುರಿಗೆ ಯಾರನ್ನು ಕರಕೊಂಡು ಬರತಕ್ಕದ್ದು? ಆ ಸ್ತ್ರೀಯರನ್ನು ಕರಕೊಂಡು ಬರಬೇಕೆಂದು ತಮ್ಮ ಅಪ್ಪಣೆ ಇರುವದೋ ಏನು? ಹೀಗೆ ಅಜ್ಞಾಪಿಸಿ ಸ್ತ್ರೀಯರನ್ನು ದರ್ಬಾರದಲ್ಲಿ ಬರಮಾಡುವದು ತೀರ ಅಯೋಗ್ಯವು. ಈ ಮಾತನ್ನು ತಮಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ” ಅನ್ನಲು ರಾಮರಾಜನು ಹುಬ್ಬುಗಂಟಿಕ್ಕಿ, ರಣಮಸ್ತಖಾನನ ಕಡೆಗೆ ನೋಡಿದನು ಮಾತ್ರ, ಆಮೇಲೆ ಆತನು ಗಟ್ಟಿಯಾಗಿ ತನ್ನ ಸಿರಸ್ತೆದಾರರನ್ನು ಕುರಿತು- “ಎಲ್ಲರನ್ನು ಕರೆತಂದು ತನ್ನ ಮುಂದೆ ನಿಲ್ಲಿಸಿರಿ.