ಪಕ್ಷದಲ್ಲಿ, ಯಾರ ಮುಲಾಜನ್ನೂ ಹಿಡಿಯದೆ ಮಾಡತಕ್ಕದ್ದನ್ನು ನಾವು ಮಾಡುವೆವು.
ರಾಮರಾಜನ ಈ ಮಾತುಗಳನ್ನು ಕೇಳಿ ಹಿಡಿದುತಂದ ಮನುಷ್ಯರಲ್ಲಿಯೊಬ್ಬನು ಧೀರ ಗಂಭೀರ ಸ್ವರದಿಂದ- “ಕಾಗದಪತ್ರಗಳೇನೂ ನಮ್ಮ ಬಳಿಯಲ್ಲಿ ಇರುವದಿಲ್ಲ. ನಿಮ್ಮ ಸೀಮೆಯೊಳಗಿಂದ ಹಾದು ಹೋಗಲಿಕ್ಕೆ, ನಮ್ಮ ಒಡೆಯನ ಮಗಳಾದ ಈ ಹೆಣ್ಣು ಮಗಳಿಗೆ ಸಂಗನಪಲ್ಲಿಯ ದರ್ಗೆಯ ದರ್ಶನ ಮಾಡಿಸಬೇಕೆಂದು ನಮ್ಮ ಒಡೆಯನು ಇಚ್ಚಿಸಿದ್ದೇ ಕಾರಣವು” ಎಂದು ಹೇಳದನು. ದರಗೆಯ ಹೆಸರು ಕಿವಿಗೆ ಬಿದ್ದ ಕೂಡಲೆ ರಾಮರಾಜನು ಉಪಹಾಸದಿಂದ ನಕ್ಕು- ಸರಿ ಸರಿ. ಈ ದಂಗೆಯು, ನಮ್ಮ ರಾಜ್ಯದ ಸ್ಥಿತಿಗತಿಗಳನ್ನು ನೋಡಿ ಹೋಗಲಿಕ್ಕೂ ಗುಪ್ತ ಒಳಸಂಚುಗಳನ್ನು ಮಾಡಲಿಕ್ಕೂ ನಿಮಗೆ ತಕ್ಕ ಸ್ಥಳವಾಗಿರುತ್ತದೆ. ಆ ದರಗೆಯು ಇಲ್ಲದ ಹಾಗೆ ಆದ ದಿನವೇ ಸುದಿನವು. ಈಗಂತು ನಮ್ಮ ಸಂಶಯವು ಮತ್ತಷ್ಟು ಹೆಚ್ಚಾಯಿತು. ನೀವು ನಮ್ಮ ರಾಜ್ಯದೊಳಗಿನ ಗುಪ್ತ ಸಂಗತಿಗಳನ್ನು ತಿಳಕೊಳ್ಳಲಿಕ್ಕೆ ಬಂದಂತೆ ತೋರುತ್ತದೆ. ಈ ಗೋಷೆಯಲ್ಲಿದ್ದವರು ಹೆಣ್ಣುಮಕ್ಕಳೇ ಇರುವರೋ ಎಂಬ ಬಗ್ಗೆ ನಮಗೆ ಸಂಶಯ ಬರಹತ್ತಿದೆ. ತರುಣರು, ವೃದ್ಧರು, ಗೋಷೆಯ ಹೆಂಗಸರ ಸೋಗಿನಿಂದ ಗುಪ್ತಚಾರರ ಕೆಲಸಗಳನ್ನು ಮಾಡುತ್ತಿರುವರು. ಹಿಂದೂ ಜನರು ಸ್ತ್ರೀಯರನ್ನು ತಡವುದಿಲ್ಲೆಂಬುದು ಎಲ್ಲರಿಗೂ ಗೊತ್ತಿರುವದು. ಯಾರಾದರೂ ಹೆಂಗಸರ ಅಪಮಾನ ಮಾಡಿದರೆ, ನಮಗೆ ಸಂತಾಪವಾಗುವದು, ನಮ್ಮ ಈ ಉದಾರಗುಣದ ಲಾಭ ಮಾಡಿಕೊಂಡು, ಹೆಂಗಸರ ಸೋಗಿನಿಂದ ಕಾಗದ ಪತ್ರಗಳನ್ನು ಬಚ್ಚಿಟ್ಟುಕೊಂಡಿಟ್ಟರೆ ನಾವು ಮಾಡುವದೇನು? ಆದ್ದರಿಂದ ಈ ಮೂವರೂ ಹೆಂಗಸರು ತಮ್ಮ ತಮ್ಮ ಬುರುಕಿಗಳನ್ನು ತೆಗೆದು, ತಮ್ಮ ಮೋರೆಗಳನ್ನು ತೋರಿಸಿದರೆ ಅವರ ಬಿಡುಗಡೆ ಯಾಗುವದು. ಇಲ್ಲದಿದ್ದರೆ ಇಲ್ಲ ಎಂದು ನುಡಿಯಲು, ಮೊದಲೇ ಸಂತಪ್ತನಾಗಿದ್ದ ರಣಮಸ್ತಖಾನನು, ರಾಮರಾಜನ ಈ ಮಾತುಗಳನ್ನು ಕೇಳಿ ಕ್ರೋಧ ಪರವಶವಾಗಿ ಕಂಪಿತ ಸ್ವರದಿಂದ- “ಈ ಸ್ತ್ರೀಯರ ಬುರುಕಿಗಳನ್ನು ನಾನು ಕಾಲತ್ರಯದಲ್ಲಿಯೂ ತೆಗೆಯಗೊಡಲಿಕ್ಕಿಲ್ಲ. ಇದೇನು ಹುಡುಗಾಟಿಕೆಯೋ ಏನು?” ಎಂದು ಕೇಳಿದನು. ರಾಮರಾಜನು ಆತನ ಈ ಮಾತಿನ ಕಡೆಗೆ ಎಷ್ಟು ಮಾತ್ರವೂ ತನ್ನ ಲಕ್ಷ್ಯವಿಲ್ಲದಂತೆ ತೋರಿಸಿ, ಮತ್ತೆ ಆ ಹೆಂಗಸರನ್ನು ಕುರಿತು-“ಅವರವರು ತಮ್ಮ ತಮ್ಮ ಬುರುಕಿಗಳನ್ನು ತಾವೇ ತೆಗೆದು ಮೋರೆ ತೋರಿಸಬೇಕು; ಇಲ್ಲದಿದ್ದರೆ ಎರಡನೆಯವರು ಬುರುಕಿ ತೆಗೆಯಬೇಕಾಗುವುದು. ಯಾರು ಯಾರು ಬುರಕಿಗಳನ್ನು ತೆಗೆಯಲಿಕ್ಕೆ ಎಷ್ಟು ಎಷ್ಟು ತಡಮಾಡುವರೋ ಅಷ್ಟು ಅಷ್ಟು