ಈ ಪುಟವನ್ನು ಪ್ರಕಟಿಸಲಾಗಿದೆ
೧೧೨
ಕನ್ನಡಿಗರ ಕರ್ಮಕಥೆ

ಆಗ ನಾವೂ ನಿರ್ವಾಹವಿಲ್ಲದೆ ಕತ್ತಿಗಳನ್ನು ಹಿರಿಯಬೇಕಾಯಿತು. ಬಡೆದಾಟದಲ್ಲಿ ಕೆಲವರು ಓಡಿಹೋದರು. ಉಳಿದವರನ್ನು ಕರಕೊಂಡು ಬಂದಿದ್ದೇವೆ. ಪ್ರಭುಗಳು ಕೇಳುವದನ್ನು ಕೇಳಿಕೊಳ್ಳಬೇಕು. ಇವರ ಮುಖ್ಯಸ್ಥನು ದೊಡ್ಡ ಸರದಾರನಿದ್ದನೆಂದು ಗೊತ್ತಾಗುತ್ತದೆ” ಎಂದು ಹೇಳಿದನು. ಆಗ ರಾಮರಾಜನು ಆ ಹಿಡಿದು ತಂದ ಜನರಲ್ಲಿ ಒಬ್ಬೊಬ್ಬನನ್ನು ಮುಂದಕ್ಕೆ ಕರೆದು, “ನಿಮ್ಮ ಬಳಿಯಲ್ಲಿ ರಾಜಕಾರಣದ ಏನಾದರೂ ಕಾಗದಪತ್ರಗಳು ಇದ್ದರೆ ನಮಗೆ ಒಪ್ಪಿಸಿ ಬಿಡಿರಿ. ಅಂದರೆ ನಾವು ನಿಮ್ಮನ್ನು ಈಗಲೇ ಬಿಟ್ಟುಬಿಡುವೆವು. ನಿರುಪದ್ರವಿಗಳಾದ ದಾರಿಕಾರರಿಗೆ ತ್ರಾಸಮಾಡುವಿಚ್ಛೆಯು ನಮಗಿಲ್ಲ. ನಮ್ಮ ಸಂಬಂಧವಿದ್ದ ಮಟ್ಟಿಗೆ ನಾವು ನೋಡಬೇಕಾಗುವದು, ಎಂದು ನುಡಿದು, ರಣಮಸ್ತಖಾನನ ಕಡೆಗೆ ತಿರುಗಿ ಅಹ್ಮದನಗರದಿಂದ ವಿಜಾಪುರಕ್ಕೆ ಹೋಗುವ ಹಾದಿಯು ನಮ್ಮ ಹದ್ದಿನೊಳಗಿಂದಲೇ ಹಾದು ಹೋಗಿರುತ್ತದೆನ್ನುವ ಹಾಗಿಲ್ಲ. ನಿಜವಾಗಿ ನೋಡಿದರೆ ಅಹ್ಮದನಗರದಿಂದ ವಿಜಾಪುರಕ್ಕೆ ಹೋಗುವವರು ನಮ್ಮ ಗಡಿಯನ್ನು ಸ್ಪರ್ಶಮಾಡುವ ಕಾರಣವಿಲ್ಲ. ಬೇರೆ ಕಡೆಯಿಂದ ಹಾದಿಯಿರುತ್ತದೆ. ಹೀಗಿದ್ದು ಬುದ್ಧಿಪೂರ್ವಕವಾಗಿ ನಮ್ಮ ಹದ್ದಿನೊಳಗಿಂದ ಹಾಯಬೇಕಾದರೆ, ಇವರ ಉದ್ದೇಶವು ಬೇರೆ ಪ್ರವಾಸಿಗಳ ಉದ್ದೇಶದಂತೆ ಸರಳವಾದದ್ದಿರಲಿಕ್ಕಿಲ್ಲ. ನಮ್ಮದಿಷ್ಟು ಸಂಶಯವನ್ನು ನೀವು ದೂರಮಾಡಿಕೊಟ್ಟು, ಈಗಲೇ ಇವರನ್ನು ಕರಕೊಂಡು ಹೋಗಿರಿ. ನಮ್ಮದೇನೂ ಪ್ರತಿಬಂಧವಿಲ್ಲ; ಆದರೆ ನಾನು ಹೇಳಿದಂತೆ ಸಂಶಯಕ್ಕೆ ಆಸ್ಪದವಿರುತ್ತದೋ, ಇಲ್ಲವೋ ನೀವೇ ಹೇಳಿರಿ ಬುದ್ದಿಪೂರ್ವಕವಾಗಿ ಇವರು ನಮ್ಮ ಸೀಮೆಯೊಳಗಿಂದ ಹೋಗಲಿಕ್ಕೆ ಕಾರಣವೇನೆಂಬುದನ್ನು ನೀವೇ ವಿಚಾರ ಮಾಡಿರಿ; ಎಂದು ಹೇಳಿದನು. ಅದಕ್ಕೆ ರಣಮಸ್ತಖಾನನು- “ಈ ಕಾಲದಲ್ಲಿ ನಾನು ಏನೂ ಮಾತಾಡುವದಿಲ್ಲ ; ಯಾವ ವಿಚಾರವನ್ನೂ ಮಾಡುವದಿಲ್ಲ. ನೀವು ವಿಚಾರ ಮಾಡಬೇಕಾದ್ದನ್ನು ಮಾಡಿಕೊಳ್ಳಿರಿ” ಎಂದು ನುಡಿದು, ಮೊದಲಿನಂತೆ ಕ್ಷುದ್ರದೃಷ್ಟಿಯಿಂದ ನೋಡುತ್ತ ನಿಂತುಕೊಂಡನು. ಅದನ್ನು ನೋಡಿ ರಾಮರಾಜನು ತನ್ನೊಳಗೆ ನಕ್ಕು, ಹಿಡಿಯಲ್ಪಟಿದ್ದ ಜನರನ್ನು ಕುರಿತು ಯಾಕರಿ. ನಮ್ಮ ಪ್ರಶ್ನೆ ನಿಮಗೆ ತಿಳಿಯಿತೋ ಇಲ್ಲವೋ? ನಿಮ್ಮಲ್ಲಿ ಕಾಗದಪತ್ರಗಳೇನಾದರೂ ಇರುವವೋ ಹ್ಯಾಗೆ? ನೀವು ವಿಜಾಪುರಕ್ಕೆ ಹೋಗುವ ಸರಳ ಮಾರ್ಗವನ್ನು ಬಿಟ್ಟು ನಮ್ಮ ಸೀಮೆಯೊಳಗಿಂದ ಯಾಕೆ ಬಂದಿರಿ? ಇವೆರಡು ಪ್ರಶ್ನೆಗಳಿಗೆ ಸರಳವಾದ ಸಮಾಧಾನಕಾರಕ ಉತ್ತರಗಳು ನಿಮ್ಮಿಂದ ದೊರೆತರೆ, ಈಗಲೇ ನಿಮ್ಮನ್ನು ಬಿಟ್ಟುಕೊಡುವೆವು; ಅಥವಾ ನಮ್ಮ ಈ ವಕೀಲರಿಗೆ ನಿಮ್ಮನ್ನು ಒಪ್ಪಿಸುವೆವು. ಹಾಗೆ ಉತ್ತರ ದೊರೆಯದೆ ಇದ್ದ