ಹಾಗೆಯೇ ಆಯಿತು. ರಣಮಸ್ತಖಾನನ ಕಣ್ಣಿಗೆ ಆಕೆಯ ಸ್ವರೂಪ ಸೌಂದರ್ಯದಲ್ಲಿ ಏನು ಕೊರತೆಯು ಕಂಡು ಬರಲಿಲ್ಲ. ತನ್ನನ್ನು ಒತ್ತಾಯದಿಂದ ಇಲ್ಲಿ ಇಟ್ಟುಕೊಂಡಿರುವರೆಂಬ ಕಲ್ಪನೆಯಿಂದ ಈಕೆಯು ಇಷ್ಟು ಶೋಕಾಕುಲಳಾಗಿದ್ದರೆ, ಈಕೆಯನ್ನು ಇಂದೇ ಊರಿಗೆ ಕಳಿಸಿ ಕೊಡಬೇಕೆಂದು ರಣಮಸ್ತಖಾನನು ಯೋಚಿಸಿ, ಧೈರ್ಯದಿಂದ ಆಕೆಯನ್ನು ಕುರಿತು- “ನಾನು ಪಂಜರದಲ್ಲಿ ಸಿಕ್ಕುಬಿದ್ದೆನು, ಇಲ್ಲಿಂದ ಹಾರಿಹೋಗಬೇಕೆಂಬ ಇಚ್ಛೆಯು ಅರಗಿಳಿಗೆ ಆಗಿರುವದೇನು ? ಯಾಕೆ, ಮೌನವೇಕೆ ? ಅರಗಿಳಿಯು ಯಾಕೆ ಮಾತಾಡುವದಿಲ್ಲ? ನಾನು ಪಂಜರದಲ್ಲಿರುತ್ತೇನೆಂದು ಅರಗಿಳಿಯು ತಿಳಿಯಬಾರದು. ಹಾರಿಹೋಗುವ ಇಚ್ಛೆಯಾದ ಕೂಡಲೆ ಅದು ಹಾರಿ ಹೋಗಬಹುದು.”
ಈ ಅತ್ಯಂತ ಪ್ರೇಮಯುಕ್ತ ಭಾಷಣದಿಂದ ಧೈರ್ಯ ಬಂದದ್ದರಿಂದಲೋ ಏನೋ ನೂರಜಹಾನಳು ರಣಮಸ್ತಖಾನನ ಕುರಿತು- “ನಿಮ್ಮ ಮನೆಯ ಕುಂಭಗಳ ಮೇಲೆ ಕುಳಿತುಕೊಳ್ಳುವ ಕ್ಷುದ್ರ ಪಕ್ಷಿಗಳ ಯೋಗ್ಯತೆಯೂ ನನಗೆ ಇಲ್ಲದಿರಲು, ನನಗೆ ಅರಗಿಳಿಯಂಥ ಸುಂದರ ಪಕ್ಷಿಯ ಹೆಸರು ಕೊಡುವದೇಕೆ ? ಅರಗಿಳಿಯ ಯಾವ ಯೋಗ್ಯತೆಯನ್ನು ನನ್ನಲ್ಲಿ ನೋಡಿದಿರಿ ?” ಎಂದು ಮಾತಾಡಲು, ಆಕೆಯ ಈ ಅತ್ಯಂತ ಮಧುರ ಸ್ವರಯುಕ್ತ ವಿನಯವಾಣಿಯನ್ನು ಕೇಳಿ, ಆನಂದದಿಂದ ರಣಮಸ್ತಖಾನನ ಮೈಮೇಲಿನ ಕೂದಲುಗಳು ನೆಟ್ಟಗಾದವು. ತನ್ನ ಮಾತುಗಳಿಗೆ ಈಕೆಯು ಉತ್ತರವನ್ನು ಕೊಟ್ಟಾಳೋ ಎಂದು ಆತುರದಿಂದ ಆತನು ಎದುರು ನೋಡುತ್ತಿರುವಾಗ, ಆ ಸುಂದರಿಯು ಹೀಗೆ ಮಂಜುಳಸ್ವರದಿಂದ ನುಡಿದದ್ದನ್ನು ಕೇಳಿ ಖಾನನು ಅತ್ಯಾನಂದಿಂದ- “ನಾನು ಕೊಟ್ಟ ಹೆಸರು ನಿಮ್ಮ ಯೋಗ್ಯತೆಗೆ ತಕ್ಕದ್ದಲ್ಲ. ಬೇರೆ ಸುಂದರವಾದ ಹೆಸರು ಗೊತ್ತಾಗದ್ದರಿಂದ ಅದನ್ನೇ ನಾನು ನಿಮಗೆ ಕೊಟ್ಟೆನು; ಆದರೆ ನಿನ್ನೆ ನನಗೆ ಕೊಟ್ಟಿರುವ 'ನವಾಬ' ಎಂಬ ಹೆಸರು ಮಾತ್ರ ನಿಶ್ಚಯವಾಗಿ ನನ್ನ ಯೋಗ್ಯತೆಯನ್ನು ಮೀರಿದ್ದಿರುತ್ತದೆ, ಅದರೆ ಇಂಥ ಗೌರವದ ಹೆಸರನ್ನು ನನಗೆ ಕೊಡುವ ಕಾರಣವೇನು ? ಎಂದು ಕೇಳಲು ಆತನ ಮಾತುಗಳಿಂದ ನೂರಜಹಾನಳ ಅಂಜಿಕೆಯು ಮತ್ತಷ್ಟು ದೂರವಾಗಿ, ಅಕೆಯು ರಣಮಸ್ತಖಾನನನ್ನು ಕುರಿತು-ಅದಕ್ಕೂ ಯೋಗ್ಯವಾದ ಹೆಸರು ನೆನಪಾಗದ್ದರಿಂದಲೇ ಆಗ ಆ ಹೆಸರನ್ನು ತಮಗೆ ನಾನು ಕೊಟ್ಟೆನು, ಅದರಿಂದ ತಮಗೆ ಸಿಟ್ಟು ಬಂದಿದ್ದರೆ, ನಾನು ಕ್ಷಮೆಯನ್ನು ಯಾಚಿಸುತ್ತೇನೆ; ಆದರೆ ...........
ಈ ಮೇರೆಗೆ ನುಡಿದು ಅಷ್ಟಕ್ಕೆ ನೂರಜಹಾನಳು ಸುಮ್ಮನಾದಳು, ಮುಂದೆ ಆಡಬೇಕೆಂದಿದ್ದ ಮಾತುಗಳನ್ನು ಆಕೆಯು ನುಂಗಿಕೊಂಡಳು. ಅದನ್ನು ನೋಡಿ