ರಣಮಸ್ತಖಾನನು- “ಮಾತುಗಳನ್ನು ನುಂಗುವದೇಕೆ ? ಆಡಿಬಿಟ್ಟರಾಯಿತು. ನಿಮ್ಮ ಬಹುಮಾನವಾಚಕ ಶಬ್ದದಿಂದ ನನ್ನನ್ನು ಕರೆಯುವಾಗ, ಅದರಲ್ಲಿ ಉಪಹಾಸ ಭಾವನೆಯಿರದಿದ್ದರೆ ಆಯಿತು”.
ನೂರಜಹಾನ-(ಗಂಭೀರ ಮುದ್ರೆಯಿಂದ) ಏನು ? ನಿಮ್ಮ ಸಲುವಾಗಿ ಉಪಹಾಸವೇ ? ನಿಮ್ಮನ್ನು ನಾನು ಉಪಹಾಸದಿಂದ ಕರೆಯುವೆನೆ ? ಛೇ, ಛೇ! ಯಾವ ಕೈಗಳು ನನ್ನ ಪ್ರಾಣವನ್ನು, ವಿಶೇಷವಾಗಿ ಪ್ರಾಣಕ್ಕಿಂತಲೂ ಹೆಚ್ಚಿನ ಮರ್ಯಾದೆಯನ್ನು ಒಳ್ಳೆ ಕಠಿಣಪ್ರಸಂಗದಲ್ಲಿ ರಕ್ಷಿಸಿದವೋ, ಅಂಥ ಕೈಗಳನ್ನು ಹರಿದುಕೊಳ್ಳುವಂಥ ದುಷ್ಟ ಡಾಕಿನಿಯು ನಾನಲ್ಲ ! ನಿಮ್ಮಿಂದಾದ ಉಪಕಾರವು ಹ್ಯಾಗೆ ತೀರೀತೆಂಬ ವಿಚಾರದಲ್ಲಿ ನಾನು ಮಗ್ನಳಾಗಿರುವೆನು !
ರಣಮಸ್ತಖಾನ-ಇದರಲ್ಲಿ ಉಪಕಾರವೇತರದು ? ಯಾರು ಯಾರ ಮೇಲೆ ಉಪಕಾರ ಮಾಡಿದರು ? ಅದನ್ನು ಯಾರು ತೀರಿಸಬೇಕು ? ನಿಜವಾದ ಸಾಲವಿದ್ದರೆ ಮಾತ್ರ ಅದನ್ನು ತೀರಿಸುವದು, ಅಥವಾ ಅದನ್ನು ತೀರಿಸುವದಕ್ಕಾಗಿ ಚಿಂತಿಸುವದು ಕಾಲ್ಪನಿಕ ಸಾಲವನ್ನು ತೀರಿಸುವದಕ್ಕಾಗಿ ಚಿಂತಿಸುವದು ಎಲ್ಲಿಯ ರೀತಿಯು? ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಅದರಲ್ಲಿ ಉಪಕಾರವೇತರದು? ಆದರೂ ಇಲ್ಲದ ಉಪಕಾರವನ್ನು ಕಲ್ಪಿಸಿ ಅದನ್ನು ತೀರಿಸಬೇಕೆಂದು ನೀವು ಇಚ್ಚಿಸುತ್ತಿದ್ದರೆ, ಅದಕ್ಕೆ ಹಾದಿಯಿಲ್ಲೆಂದು ಮಾತ್ರ ತಿಳಿಯಬೇಡಿರಿ.
ರಣಮಸ್ತಖಾನನು ಇಷ್ಟು ಮಾತಾಡಿ, ತನ್ನ ನಾಲಗೆಯನ್ನು ಕಚ್ಚಿಕೊಂಡನು. ನಾನು ಇದೇನು ಹುಚ್ಚನ ಹಾಗೆ ಮಾತಾಡಿದೆನು, ಎಂದು ಆತನು ತನ್ನ ನಾಲಗೆಯನ್ನು ಬಿಗಿಹಿಡಿದು ಸುಮ್ಮನಾದನು ಆತನ ಮಾತುಗಳ ಭಾವವು ನೂರಜಹಾನಳಿಗೆ ತಿಳಿಯಲಿಲ್ಲ. ಆತನ ಮುಖವನ್ನು ನೋಡುವದರಿಂದ ತಿಳಿದರೆ ನೋಡಬೇಕೆಂತಲೋ ಏನೋ ಆಕೆಯ ಮುಗುಳು ನಕ್ಕು, ಆಶ್ಚರ್ಯದಿಂದ ಆತನ ಮೋರೆಯನ್ನು ನೋಡಿದಳು. ಅಷ್ಟರಲ್ಲಿ ಇನ್ನೊಂದು ಮೋಜು ಆಯಿತು. ಆಕೆಯು ಮುಖವೆತ್ತಿ ನೋಡಲಿಕ್ಕೂ, ಗಾಳಿಯಿಂದ ಗಿಡದ ಎಲೆಗಳು ಒತ್ತಟ್ಟಿಗಾಗಿ ಒಂದು ಸೂರ್ಯಕಿರಣ ರೇಖೆಯು ಆಕೆಯ ಮುಖದ ಮೇಲೆ ಬೀಳಲಿಕ್ಕೂ ಗಂಟೆಬಿದ್ದಿತು. ಕಿಂಚಿತ್ ಹಾಸ್ಯ, ಕಿಂಚಿತ್ ಆಶ್ಚರ್ಯ ಗಿಡದ ಎಲೆಗಳ ಸಂದಿಯೊಳಗಿಂದ ಹಾದುಬಿದ್ದ ಸೂರ್ಯಕಿರಣದ ಕಾಂತಿ ಇವುಗಳ ಯೋಗದಿಂದ ಮೊದಲೇ ಸುಂದರವಾಗಿದ್ದ ಆಕೆಯ ಮುಖವು ಮತ್ತಷ್ಟು ಸುಂದರವಾಗಿ ತೋರಿ, ಖಾನನ ಮನಸ್ಸು ಚಂಚಲವಾಯಿತು. ಆತನು ಚಕಿತನಾಗಿ ನೂರಜಹಾನಳ