ಕಡೆಗೆ ನೋಡುತ್ತ ನಿಂತುಕೊಂಡನು. ನೂರಜಹಾನಳು ಸ್ತಬ್ಧಳಾಗಿ ನಿಂತುಕೊಂಡಿದ್ದಳು. ಆಕೆಗೆ ಏನು ಮಾತಾಡಬೇಕೆಂಬದು ತೋಚದಾಯಿತು. ಆದರೂ ಪ್ರಯತ್ನದಿಂದ ಆಕೆಯು ರಣಮಸ್ತಖಾನನನ್ನು ಕುರಿತು-
ನೂರಜಹಾನ- ಸ್ತ್ರೀಯರು ಕೇವಲ ಪರಾಧೀನರು. ಅದರಲ್ಲಿ ನಾನಂತೂ ನಿನ್ನಿನವರೆಗೆ ಕೇವಲ ಪರಾಧೀನಳಾಗಿದ್ದೆನು, ಆದರೆ ಇಂದು ಮುಂಜಾವಿನಿಂದ ನಾನು ಬೇರೆ ಸ್ತ್ರೀಯರಂತೆ ಪರಾಧೀನಳಾಗಿರುವದಿಲ್ಲ. ನಿನ್ನಿನವರೆಗೆ ನಾನು ನನ್ನ ಹಿರಿಯರ ಅಧೀನದಲ್ಲಿದ್ದೆನು. ಇಂದಿನಿಂದ ನನ್ನಷ್ಟಕ್ಕೆ ನಾನು ಸ್ವತಂತ್ರಳಾಗಿರುತ್ತೇನೆ.
ರಣಮಸ್ತಖಾನ- (ಅತ್ಯಂತ ಹರುಷದಿಂದ) ಹಾಗಾದರೆ ಮತ್ತೇನು ಬೇಕು? ನನ್ನ ಮನೋದಯವು ಪೂರ್ಣವಾಗಲಿಕ್ಕೆ ಪ್ರತಿಬಂಧವೇ ಇಲ್ಲದ ಹಾಗಾಯಿತಲ್ಲ?
ನೂರಜಹಾನ- (ಸುಮ್ಮನಿರಲು ಕೈಯಿಂದ ಸನ್ನೆಮಾಡಿ) ನಾನು ಸ್ವತಂತ್ರಳಾದೆನೆಂದು ಹೇಳಿದ್ದೇನೋ ನಿಜವು, ಆದರೆ ಕೆಲವೊಂದು ಸಂಗತಿಯಿಂದ ನಾನು ಪರಾಧೀನಳೇ ಇರುತ್ತೇನೆ.
ರಣಮಸ್ತಖಾನ- (ದೈನ್ಯದಿಂದ) ನನ್ನ ಅರಗಿಳಿಯೇ ಹೀಗೆ ನನ್ನನ್ನು ನಿರಾಶಗೊಳಿಸಬೇಡ, ನನ್ನನ್ನು ಸಂಶಯಗ್ರಸ್ತನಾಗಿಮಾಡಬೇಡ. ಏನು ಹೇಳುವದನ್ನು ಸ್ಪಷ್ಟವಾಗಿ ಹೇಳು, ಯಾವ ಬಾಬಿನಿಂದ ನೀನು ಪರಾಧೀನಳಾಗಿರುತ್ತಿ ? ನಿನ್ನ ಸಲುವಾಗಿ ಕೇವಲ ಪರಾಧೀನವಾಗಿರುವ ನನ್ನ ಮನಸ್ಸನ್ನು ಹೆಚ್ಚಿಗೆ ಗಾಸಿಮಾಡಬೇಡ. ನನ್ನ ಸ್ಥಿತಿಯು ನಿನ್ನ ಸ್ಥಿತಿಗೆ ಕೇವಲ ವಿರುದ್ಧವಾಗಿರುತ್ತದೆ. ನೀನು ನಿನ್ನನವರೆಗೆ ಪರತಂತ್ರಳಾಗಿದ್ದು ಇಂದಿನಿಂದ ಸ್ವತಂತ್ರಳಾದೆನೆಂದು ಹೇಳುತ್ತೀ. ಆದರೆ ನಿನ್ನನವರೆಗೆ ಸ್ವತಂತ್ರನಾಗಿದ್ದ ನಾನು, ನಿನ್ನನ್ನು ನೋಡಿದಾಗಿನಿಂದ ಪರತಂತ್ರನಾದೆನು. ನಿನ್ನ ಹಾಗೆ ನಾನು ಯಾವ ಬಾಬಿನಿಂದಲೂ ಈಗ ಸ್ವತಂತ್ರನಾಗಿರುವದಿಲ್ಲ; ನನ್ನ ಪ್ರಾಣಗಳನ್ನೆಲ್ಲ ನಿನಗೆ ಒಪ್ಪಿಸಿದ್ದೇನೆ ; ಆದ್ದರಿಂದ ನನ್ನನು ಉಳಿಸುವದು ಅಥವಾ ಕೊಲ್ಲುವದು ನಿನ್ನೀ ಕೈಯಲ್ಲಿಯೇ ಇರುತ್ತದೆ. ಜೀವದಾನವನ್ನು ಬೇಡಿಕೊಳ್ಳುವ ತಪ್ಪುಗಾರನು, ತಾನು ಹೇಳತಕ್ಕದ್ದನ್ನೆಲ್ಲ ಬಾದಶಹನ ಮುಂದೆ ಹೇಳಿಕೊಂಡನು. ದೇವರನ್ನು ಬೇಡಿಕೊಳ್ಳತಕ್ಕ ಹಾಗೆ ಬೇಡಿಕೊಂಡನು. ಇನ್ನು ಬಾದಶಹನು ಏನು ಅಪ್ಪಣೆ ಕೊಡುವನೆಂಬದರ ಕಡೆಗೆ ಆ ತಪ್ಪುಗಾರನು ನೋಡುತ್ತಿರುವನು. ಆಯಿತು, ನೂರಜಹಾನ, ಇನ್ನು ನಾನು ಏನೂ ಮಾತಾಡುವದಿಲ್ಲ. ಮಾತಾಡು, ಅರಗಿಳಿಯೇ ಮಾತಾಡು-ಸೋಕ್ಷವೋ ಮೋಕ್ಷವೋ ಎಂಬುದನ್ನು ಹೇಳಿಬಿಡು.