ಈ ಪುಟವನ್ನು ಪ್ರಕಟಿಸಲಾಗಿದೆ
೧೫೩

೧೭ನೆಯ ಪ್ರಕರಣ

ಔದಾಶೀನ್ಯ

ರಣಮಸ್ತಖಾನನು ವಿಜಾಪುರಕ್ಕೆ ಹೋಗಿ ನೂರಜಹಾನಳನ್ನು ಆಕೆಯ ಆಪ್ತರಿಗೆ ಒಪ್ಪಿಸಿದನು. ಆತನು ಒಂದು ದಿನ ಬಾದಶಾಹನ ದರ್ಶನಕ್ಕೆ ಹೋದಾಗ ವಿಜಯನಗರದ ದರ್ಬಾರದಲ್ಲಿ ನಡೆದ ಸಂಗತಿಯನ್ನೆಲ್ಲ ವಿಜ್ಞಾಪಿಸಲು, ಅದನ್ನು ಕೇಳಿ ಬಾದಶಹನಿಗೆ ಸಂತಾಪವಾಯಿತು. ಸಂತಾಪದ ಭರದಲ್ಲಿ ಆತನು ಈಗಲೇ, ವಿಜಯನಗರದಮೇಲೆ ದಾಳಿ ಮಾಡಿ ರಾಮರಾಜನ ಸೊಕ್ಕು ಇಳಿಸಬೇಕೆಂದು ಮಾಡಿದನು. ಹಿಂದಕ್ಕೆ ಸನ್ ೧೪೦೬ನೇ ಇಸವಿಯಲ್ಲಿ ಗೋವಳಕೊಂಡದ ಬಾದಶಹನಾದ ಫಿರೋಜಶಹನ ಕಾಲದಲ್ಲಿ ಇಂಥ ಪ್ರಸಂಗವೇ ಒದಗಿತ್ತು. ಆಗಿನ ವಿಜಯನಗರದ ಅರಸು ದೇವರಾಜನು ಗೋವಳಕೊಂಡದ ರಾಜ್ಯದೊಳಗಿನ ಒಬ್ಬ ಚಲುವೆಯಾದ ಒಕ್ಕಲಿಗನ ಮಗಳನ್ನು ಅಪಹರಿಸಿಕೊಂಡು ಬಂದಿದ್ದನು. ಅದರ ಸೇಡು ತೀರಸುವದಕ್ಕಾಗಿ ಫಿರೋಜಶಹನು ವಿಜಯನಗರದ ರಾಜ್ಯದ ಮೇಲೆ ದಂಡೆತ್ತಿ ಹೋಗಿ, ದೇವರಾಜನನ್ನು ಸೋಲಿಸಿ, ವಿಜಯನಗರದ ಅರಸು ಮನೆತನಕ್ಕೆ ಸಂಬಂಧಿಸಿದ ಒಬ್ಬ ಕುಮಾರಿಯನ್ನು ತಾನು ಲಗ್ನ ಮಾಡಿಕೊಂಡು ಆಕೆಯನ್ನು ತನ್ನ ಜನಾನಖಾನೆಯಲ್ಲಿ ಸೇರಿಸಿಕೊಂಡಿದ್ದನು. ಈಗಂತು ರಾಮರಾಜನು ಕೂಡಿದ ದರ್ಬಾರದಲ್ಲಿ ಒಬ್ಬ ದೊಡ್ಡ ಸರದಾರನ ಮಗಳ ಲಜ್ಜಾಹರಣ ಮಾಡಿದ್ದನು. ಆದ್ದರಿಂದ ರಾಮರಾಜನ ಸಮಾಚಾರವನ್ನು ನೆಟ್ಟಗೆ ತಕ್ಕೊಳ್ಳಬೇಕೆಂದು ಬಾದಶಹನು ಆರಂಭದ ಆವೇಶದಲ್ಲಿ ನಿಶ್ಚಯಿಸಿದನು. ಆ ಸಂಬಂಧದಿಂದ ಆಲೋಚಿಸುವದಕ್ಕಾಗಿ ಮುಖ್ಯ ಮುಖ್ಯ ಮುತ್ಸದ್ದಿಗಳ ಗುಪ್ತ ದರ್ಬಾರವನ್ನು ನೆರಸಿದನು. ಆದರೆ ದರ್ಬಾರದ ಕೆಲಸವು ಅತ್ಯಂತ ಗುಪ್ತವಾಗಿ ನೆರವೇರಿಸಿದ್ದರಿಂದ ಜನರಿಗೆ ಅದರ ಸುದ್ದಿಯೇನೂ ಗೊತ್ತಾಗಲಿಲ್ಲ. ಅದರ ಸಂಬಂಧದಿಂದ ಜನರಲ್ಲಿ ತರ್ಕವಿತರ್ಕಗಳಿಗೆ ಕಾರಣವಾಯಿತು. ವಿಜಯನಗರದ ಮೇಲೆ ಸೇಡು ತೀರಿಸುವದಕ್ಕಾಗಿ ಈ ಗುಪ್ತ ದರ್ಬಾರವು ಕೂಡಿರುವದರಿಂದ, ಇನ್ನು ಬೇಗನೆ ವಿಜಯನಗರದ ಸಂಗಡ ಯುದ್ಧವು