ಖಿನ್ನರಾಗಬೇಡಿರಿ. ನಿಮ್ಮಂಥ ತರುಣನೂ, ಉತ್ಸಾಹಶಾಲಿಯೂ ಆದವನು ನನ್ನ ಬಳಿಯಲ್ಲಿದ್ದರೆ, ಆತನನ್ನು ಸೈನ್ಯದ ಮೇಲೆ ನಿಯಮಿಸುತ್ತಿದ್ದೆನು. ನಿಮ್ಮ ಶೌರ್ಯವನ್ನೂ ನಿಮ್ಮ ತೇಜಸ್ಸನ್ನೂ ನಾನು ಬಲ್ಲೆನು. ಒಟ್ಟಿನಮೇಲೆ, ನಿಮ್ಮ ವೃತ್ತಿಯನ್ನೆಲ್ಲ ನಾನು ಮನಸ್ಸಿನಲ್ಲಿ ತಂದರೆ, ನಾನು ನಿಮ್ಮಷ್ಟು ವಯಸ್ಸಿನಲ್ಲಿದ್ದಾಗಿನ ನನ್ನ ವೃತ್ತಿಯ ಸ್ಮರಣವು ಅಚ್ಚಳಿಯದೆ ನನಗೆ ಆಗುತ್ತದೆ; ಕನ್ನಡಿಯಲ್ಲಿ ನೋಡಿದಹಾಗೆ ಅದು ನನಗೆ ಸ್ಪಷ್ಟವಾಗಿ ಕಾಣುವದು, ಎಂದು ಹೇಳಿದನು. ರಾಮರಾಜನ ಈ ಮಾತುಗಳನ್ನು ಕೇಳಿ ರಣಮಸ್ತಖಾನನಿಗೆ ವಿಷಾದವಾಯಿತೋ, ಸಿಟ್ಟುಬಂತೋ, ಸಂತೋಷವಾಯಿತೋ ಎಂಬದನ್ನು ಹೇಳಲಿಕ್ಕೆ ಬರುವ ಹಾಗಿದ್ದಿಲ್ಲ. ಯಾಕೆಂದರೆ ಅವನ ಮುಖಚರ್ಯದಲ್ಲಿ ಯಾವ ವಿಕಾರವೂ ತೋರುತ್ತಿದ್ದಿಲ್ಲ. ಬಾದಶಹನು ತನಗೆ ಬುದ್ಧಿಗಲಿಸಿದ್ದರಿಂದ ರಣಮಸ್ತಖಾನನನಿಗೆ ಬಹಳ ವಿಷಾದವಾಗಿತ್ತು. ರಾಮರಾಜನಿಗೆ ಪ್ರತ್ಯುತ್ತರವಾಗಿ ಏನೂ ಮಾತಾಡದೆ, ಅವನಿಗೆ ಅನುಕೂಲವಾಗುವಂತೆ ಬರಿಯ ಗೋಣು ಆಡಿಸಿ ರಣಮಸ್ತಖಾನನು ಕುಂಜವನಕ್ಕೆ ಹೊರಟುಹೋದನು.
ವಿಜಾಪುರದಿಂದ ಬಂದಂದಿನಿಂದ ರಣಮಸ್ತಖಾನನ ವೃತ್ತಿಯು ಬಹಳ ಉದಾಸೀನವಾಯಿತು. ಆತನು ಬಹುತರ ಯಾರ ಸಂಗಡವೂ ವಿಶೇಷ ಮಾತಾಡದಾದನು. ತನ್ನ ತಾಯಿಯ ಸಂಗಡ ಸಹ ಆತನು ಹೆಚ್ಚು ಮಾತಾಡುತ್ತಿದ್ದಿಲ್ಲ. ಆಕೆಯಾಗಿಯೇ ಆತನನ್ನು ಕರೆದುಕೊಂಡು ಹೋಗಿ ಏನಾದರೂ ಕೇಳಿದರೆ ನಾಲ್ಕು ಮಾತುಗಳನ್ನು ಆಡುತ್ತಿದ್ದನು. ಮೊದಲಿನಂತೆ ಆತನು ಆದದ್ದನ್ನೆಲ್ಲ ಒಂದುಳಿಯದಂತೆ ತಾಯಿಯ ಮುಂದೆ ಹೇಳಿ, ಏನು ಮಾಡಬೇಕಾದದ್ದನ್ನು ತಾಯಿಯನ್ನು ಕೇಳಿ ಮಾಡದಾದನು. ಆತನು ಈಗ ಏಕಾಂತದಲ್ಲಿ ಬಹಳ ಹೊತ್ತುಗಳೆಯಹತ್ತಿದನು. ತಾಸು ತಾಸು, ಮೂರು ಮೂರು ತಾಸು ಕುಂಜವನದಲ್ಲಿ ಆತನು ಕುಳಿತುಕೊಂಡು, ಇಲ್ಲವೆ ಪುಷ್ಕರಣಿಯ ದಂಡೆಗುಂಟ ತಿರುಗಾಡಿ ಕಾಲಹರಣ ಮಾಡುತ್ತಿದ್ದನು. ಆದ್ದರಿಂದ ಬಾದಶಹನಿಂದಾದ ಅಪಮಾನವು ಈತನ ಮನಸ್ಸಿಗೆ ಬಹಳ ಹೊತ್ತಿತ್ತೆಂದು ಬಹುತರ ಎಲ್ಲರೂ ತರ್ಕಿಸಹತ್ತಿದರು. ಲೈಲಿಯೂ ಆತನ ತಾಯಿಯೂ ಮಾತ್ರ ಹೀಗಾಗಲಿಕ್ಕೆ ಬೇರೆ ಕಾರಣವನ್ನು ಕಲ್ಪಿಸಿದರು. ನೂರಜಹಾನಳ ಮೇಲೆ ಈತನ ಪ್ರೇಮವು ವಿಶೇಷವಾಗಿದ್ದು, ಆಕೆಯು ಪ್ರಾಪ್ತವಾಗುವದು ಅಶಕ್ಯವಾಗಿ ತೋರುವದರಿಂದ ಅಪಮಾನವೊಂದು ಕೂಡಿತೆಂತಲೂ ಅವರು ತಿಳಿದರು. ನಿಜವಾದ ಕಾರಣವು ಇಂಥದೇ ಎಂದು ಯಾರಿಗೂ ಗೊತ್ತಾಗುವ ಸಂಭವ ಇದ್ದಿಲ್ಲ. ಲೈಲಿಯು ರಣಮಸ್ತಖಾನನ ಮನಸ್ಸಿನಲ್ಲಿದ್ದದ್ದನ್ನು ತಿಳಕೊಳ್ಳುವದಕ್ಕಾಗಿ