ಈ ಪುಟವನ್ನು ಪ್ರಕಟಿಸಲಾಗಿದೆ
ವಿನಾಶಾಂಕುರ

ಆಕಾಶದಲ್ಲೆಲ್ಲ ಮೋಡಗಳು ಸ್ವಚ್ಛಂದದಿಂದ ಸಂಚರಿಸತೊಡಗಿ, ದೊಡ್ಡ ದೊಡ್ಡ ಹನಿಗಳು ಉದುರಹತ್ತಿದವು. ದನಕಾಯುವ ಹುಡುಗರು ತಮ್ಮ ದನಗಳ ಹಿಂಡುಗಳನ್ನು ಓಡಿಸುತ್ತ, ತಮ್ಮ ಕಂಬಳಿಯ ಕೊಪ್ಪಿಗಳ ತುದಿಯನ್ನು ಎಡಗೈಯಿಂದ ಹಿಡಿದುಕೊಂಡು, ಬಲಗೈಯಿಂದ ಕೋಲನ್ನೆತ್ತಿ ದನಗಳನ್ನು ಬೆದರಿಸುತ್ತ, ಬಡಿಯುತ್ತ ಆನಂದದಿಂದ ಸಾಗಹತ್ತಿದರು. ತೋಯಿಸಿಕೊಳ್ಳುವ ಭಯದ ಸುದ್ದಿಯನ್ನು ಕೂಡ ಅರಿಯದವರಂತೆ ಅವರು ಆನಂದದಿಂದ ಕೂಗುತ್ತಲಿದ್ದರು. ಮೇಲೆ ಮೇಲೆ ಮಳೆಯಾಗಿ ಹುಡಿ ಕೂತದ್ದರಿಂದ ಆಗ ಕಣ್ಣು ತೆರೆದು, ಸಾಗಲಿಕ್ಕೆ ಯಾರಿಗೂ ಪ್ರತಿಬಂಧವಾಗುತ್ತಿದ್ದಿಲ್ಲ. ಮೋಡದ ಗಮ್ಮಿದಿಂದತಳಮಳಿಸುತಿದ್ದವರಿಗೆ ಅಂಥ ದೊಡ್ಡ ಬಿರುಗಾಳಿಯಿಂದಾದರೂ ಸುಖವೇ ಆಗುತ್ತಿತ್ತು. ಗಾಳಿಯು ಮಳೆಯನ್ನು ತರುವುದೂ ಉಂಟು; ಕಳೆಯುವುದೂ ಉಂಟು. ಬಿರುಗಾಳಿಯಿಂದ ಮಳೆಯ ಕಸುವು ಕಡಿಮೆಯಾಯಿತು. ಒಂದು ಕಂಬಳಿ ತೋಯುವಷ್ಟು ಮಳೆಯಾಗಿ, ಮೋಡಗಳು ಚದರಿ ಬಿಸಿಲು ಬಿದ್ದಿತು. ಆಗ ಆಕಾಶದ ಹಾಗೂ ದಿಕ್ಕುಗಳ ಸುಪ್ರಸನ್ನತೆಯು ಹೆಚ್ಚಿ, ಅದರೊಡನೆ ಪ್ರಾಣಿಗಳ ಆನಂದವು ಹೆಚ್ಚಿತು. ಬೇಟೆಗಾಗಿ ಸಾಗಿದ್ದ ರಾಮರಾಜನಿಗಂತು ಹಿಡಿಸಲಾರದಷ್ಟು ಆನಂದವಾಯಿತು. ಆತನು ಒತ್ತರದಿಂದ ಅರಣ್ಯವನ್ನು ಸೇರಿ, ಒಂದು ನದಿಯದಂಡೆಗೆ ಹೋದನು.

ಆ ಅರಣ್ಯವು ಹುಲಿ-ಕರಡಿಗಳು ಸೇರುವಷ್ಟು ಗಹನವಾದದ್ದಿದ್ದಿಲ್ಲ. ಆದರೆ ತಪ್ಪಿಸಿಕೊಂಡು ಬಂದ ಒಂದು ಹುಲಿಯು ಬೆಳೆಗಳಲ್ಲಿ ಸೇರಿಕೊಂಡು ದನಕರುಗಳಿಗೆ ಬಹಳ ಉಪದ್ರವ ಕೊಡುತ್ತಲಿತ್ತು. ಈ ಸುದ್ದಿಯನ್ನು ಕೇಳಿದ ರಾಮರಾಜನು ತಾನೇ ಆ ಹುಲಿಯನ್ನು ಕೊಲ್ಲುವೆನೆಂದು ಹೇಳಿ, ಇಂದು ಒಬ್ಬನೇ ಸ್ವಚ್ಛಂದದಿಂದ ಬೇಟೆಗೆ ನಡೆದಿದ್ದನು. ರಾಮರಾಜನ ಬೇಟೆಯ ಹುಲಿಯೆಂಬ ಭಯದಿಂದ ಒಬ್ಬರೂ ಅದರ ಗೊಡವಿಗೆ ಹೋಗಿದ್ದಿಲ್ಲ. ಏರಿಕೆಯ ರಕ್ತದ ನಮ್ಮ ಆ ತರುಣ ಕನ್ನಡ ಸರದಾರನು. ಒಂದು ಕುರಿಯನ್ನು ಒಂದು ಗಿಡದ ಬೊಡ್ಡೆಗೆ ಕಟ್ಟಿಸಿ, ತಾನು ಗಿಡವೇರಿ ಕುಳಿತುಕೊಂಡನು. ದಡ್ಡಿಯೊಳಗಿದ್ದ ಆ ಕುರಿಯ ಎರಡು ಮರಿಗಳು ಅಕಸ್ಮಾತ್ತಾಗಿ ಮೇವು ಗುಟ್ಟುತ್ತ, ತಮ್ಮ ತಾಯಿಯ ಬಳಿಗೆ ಬಂದವು; ಕುರಿಯು ಶಿಶುವಾತ್ಸಲ್ಯದಿಂದ ಒಂದೇಸಮನೆ ಒದರುತ್ತ ಮರಿಗಳ ಬಳಿಗೆ ಹೋಗುವುದಕ್ಕಾಗಿ ತನ್ನ ಕೊರಳ ಹಗ್ಗವನ್ನು ಕಸುವಿನಿಂದ ಜಗ್ಗುತ್ತ, ಕೊಸರಿಹೋಗಲು ಯತ್ನಿಸುತ್ತಿತ್ತು. ಇದನ್ನು ಕೌತುಕದಿಂದ ನೋಡುತ್ತ ಕುಳಿತುಕೊಂಡಿದ್ದ ರಾಮರಾಜನ ಲಕ್ಷ್ಯವನ್ನು ಅಕಸ್ಮಾತಾಗಿ ಒಬ್ಬ ತರುಣಿಯು ಎಳೆದುಕೊಂಡಳೂ. ಹದಿನಾರು ವರ್ಷ ವಯಸ್ಸಿನ ಸುಂದರಿಯು, ಒಂದು ಸಣ್ಣ