ಈ ಪುಟವನ್ನು ಪ್ರಕಟಿಸಲಾಗಿದೆ
ಕನ್ನಡಿಗರ ಕರ್ಮಕಥೆ

ಬಿಂದಿಗೆಯನ್ನು ಬಗಲಲ್ಲಿ ಇಟ್ಟುಕೊಂಡು ನದಿಗೆ ನೀರಿಗಾಗಿ ಬರುತ್ತಲಿದ್ದಳು. ಆಕೆಯ ಪರಿವಾರವು ಸ್ವಲ್ಪ ದೂರ ಒಂದು ಗಿಡದ ಬುಡದಲ್ಲಿ ಇಳಿದುಕೊಂಡು ವಿಶ್ರಮಿಸುತ್ತಲಿತ್ತು. ತರುಣಿಯು ಮುಸಲ್ಮಾನಳಾಗಿದ್ದರೂ ಇನ್ನೂ ಲಗ್ನವಾಗದೆಯಿದ್ದದ್ದರಿಂದಾಕೆಯು ಗೋಷೆಯ ನಿಯಮಕ್ಕೆ ಒಳಗಾಗಿದ್ದಿಲ್ಲ. ಸಮೀಪದಲ್ಲಿದ್ದ ಆ ಹಳ್ಳಿಯನ್ನು ಈಗ ಹೊತ್ತು ಮುಳುಗುವದರೊಳಗೆ ಸೇರೋಣವೆಂಬ ವಿಚಾರದಿಂದ ಆ ತರುಣಿಯ ಪರಿವಾರದವರು ನಿಶ್ಚಿಂತೆಯಿಂದ ತಮ್ಮ ತಮ್ಮೊಳಗೆ ಹರಟುತ್ತಿದ್ದರು. ಕುರಿಯ ವಾಸನೆಯಿಂದ ಹುಲಿಯು ಹೊರಬೀಳಬಹುದೆಂದು ಹಾದಿಯನ್ನು ನೋಡುತ್ತಿದ್ದ ರಾಮರಾಜನ ಕಣ್ಣಿಗೆ ಆ ಸುಂದರ ತರುಣಿಯ ಲಾವಣ್ಯಪ್ರಾಶನದ ಹೊಸದೊಂದು ಪ್ರಸಂಗವು ಬಿದ್ದಿದ್ದರಿಂದ ಆತನ ಮನಸ್ಸು ಇತ್ತಂಡವಾಯಿತು. ಒಬ್ಬನೇ ಪರಾಕ್ರಮವನ್ನು ತೋರಿಸಬೇಕೆಂಬ ಉಬ್ಬಿನಿಂದ ಸಂಗಡ ಯಾರನ್ನೂ ಕರಕೊಳ್ಳದೆ. ಆತನು ತಾನೊಬ್ಬನೇ ಬೇಟೆಗೆ ಬಂದಿದ್ದನು. ಕುರಿಯನ್ನು ತಂದುಕೊಟ್ಟ ಕುರುಬನು ಅದನ್ನು ಮರಕ್ಕೆ ಕಟ್ಟಿ, ಎಲ್ಲ ಸಿದ್ಧತೆಯನ್ನು ಮಾಡಿದ ಮೇಲೆ ರಾಮರಾಜನು ಆತನಿಗೆ ಹೊರಟು ಹೋಗುವುದಕ್ಕೆ ಕಟ್ಟಪ್ಪಣೆ ಮಾಡಿದ್ದನು. ಇತ್ತ ತನ್ನ ಮರಿಗಳು ಬಂದು ಮೊಲೆ ಕುಡಿಯ ಹತ್ತಿದ್ದರಿಂದ, ಕುರಿಯ ಜಗ್ಗಾಟವು ನಿಂತಿತು. ಬರಬರುತ್ತ ರಾಮರಾಜನ ಮನಸ್ಸನ್ನು ಆ ಸುಂದರ ತರುಣಿಯು ಸಂಪೂರ್ಣವಾಗಿ ಎಳಕೊಂಡದ್ದರಿಂದ ಆತನ ಮೇಲೆ ಆ ತಾಯಿಮಕ್ಕಳ ಪವಿತ್ರಪ್ರೇಮದ ಪರಿಣಾಮವಾಗಲಿ ಬಳಿಯಲ್ಲಿ ಹರಿಯುವ ನದಿಯ ಪ್ರವಾಹದ ಮಂಜುಳನಾದದ ಪರಿಣಾಮವಾಗಲಿ, ಇಳಿಯ ಹೊತ್ತಿನ ತಂಗಾಳಿಯ ಸುಖಸ್ಪರ್ಶದ ಪರಿಣಾಮವಾಗಲಿ ಆಗಲಿಲ್ಲ. ಯಾವ ಪಾಪವನ್ನೂ ಅರಿಯದಾ ಸುಂದರಿಯ ಮನಸ್ಸು, ಆ ನಿರಪರಾಧಿಗಳಾದ ಮೂಕ ಪ್ರಾಣಿಗಳ ಕಡೆಗೆ ತಿರುಗಿತು. ಆ ತಾಯಿಮಕ್ಕಳ ಅಕೃತ್ರಿಮ ಪ್ರೇಮವನ್ನು ನೋಡಿ, ಮುಗುಳಗೆ ನಗುತ್ತ ಆಕೆಯು ಅವುಗಳ ಬಳಿಗೆ ಕೌತುಕದಿಂದ ಬರುತ್ತಲಿದ್ದಳು, ಆ ಸುಂದರ ತರುಣಿಯ ಮನೋಹರ ಮುಖವನ್ನೂ, ತೇಜಃಪುಂಜವಾದ ವಿಶಾಲ ನೇತ್ರಗಳನ್ನೂ, ಮಂದಗಮನವನ್ನೂ, ನೋಡುವ ಭರದಲ್ಲಿ, ರಾಮರಾಜನು ಅನ್ಯ ವಿಷಯಗಳನ್ನು ಮರೆತನು. ಆತನಿಗೆ ತನ್ನ ಕೈಯೊಳಗಿನ ತುಬಾಕಿಯ ನೆನಪೂ ಉಳಿಯಲಿಲ್ಲ ; ಹುಲಿಯ ಸ್ಮರಣವಾಗಲಿಲ್ಲ ; ತಾನು ಯಾರು, ಯಾಕೆ ಬಂದೆನು, ಎಲ್ಲಿ ಕುಳಿತಿರುವೆನು ಎಂಬುದರ ಅರಿವು ಸಹ ನಿಲ್ಲಲಿಲ್ಲ; ಆತನು ಎಲ್ಲವನ್ನು ಮರೆತು ಎವೆಯಿಕ್ಕದೆ ಒಂದೇಸಮನೆ ಆ ತರುಣಿಯನ್ನು ನೋಡುತ್ತ ಕುಳಿತುಕೊಂಡಿದ್ದನು.