ಮಾಸಾಹೇಬರ ಕಿವಿಗೆ ಬಿದ್ದಿತು. ಕೂಡಲೆ ಮಾಸಾಹೇಬರು ಬಾಗಿಲು ತೆರೆದು ನಜೀರನಿಗೆ “ಯಾಕೋ ? ಏನಾದರು ವಿಶೇಷ ಸುದ್ದಿಯು ?” ಎಂದು ಕೇಳಿದ ಕೂಡಲೆ, ನಜೀರನು ಖಾನಾಸಹೇಬರು ನಿನ್ನಿನಂತೆಯೇ ಇಂದೂ ಹೊರಗೆ ಹೋಗುವವರಿದ್ದಾರೆ. ಅವರ ಅಪ್ಪಣೆಯಂತೆ ಅಲಿಖಾನ್‌ನಿಗೆ ಕುದುರೆಯನ್ನು ಜೀನುಹಾಕಿ ಸಂಕೇತ ಸ್ಥಳದಲ್ಲಿ ತಂದು ನಿಲ್ಲಿಸೆಂದು ಇದೇ ಈಗ ನಾನೇ ಹೇಳಿ ಬಂದೆನು. ನನಗೆ ಖಾನಸಾಹೇಬರು ತಕ್ಕ ತಾಕೀತು ಮಾಡಿದ್ದಾರೆ. ಯಾರು ಬಂದು ಕೇಳಿದರೂ, ಸ್ವತಃ ನೀವು ಬಂದು ಕೇಳಿದರೂ ಒಳಗೆ ಮಲಗಿಕೊಂಡಿರುತ್ತಾರೆಂದು ಹೇಳಬೇಕಂತೆ. ಈ ಸುದ್ದಿಯನ್ನು ನಿಮಗೆ ಹೇಳಿಹೋಗಬೇಕೆಂದು ಬಂದೆನು, ಎಂದು ಹೇಳಿದನು. ಅದಕ್ಕೆ ಮಾಸಾಹೇಬರು ಉತ್ಸಾಹದಿಂದ- “ಶಾಬಾಸ್ ! ಶಾಬಾಸ್ ! ಇನ್ನು ನೀನು ಆತನಿಗೆ ತಿಳಿಯದ ಹಾಗೆ ಆತನ ಬೆನ್ನಹತ್ತಿ ಹೋಗಿ ಆತನು ಯಾವದಿಕ್ಕಿಗೆ ಹೋಗುತ್ತಾನೆಂಬದನ್ನು ನನಗೆ ಬಂದು ಹೇಳು” ಎಂದು ನಜೀರನನ್ನು ಪ್ರೋತ್ಸಾಹಿಸಿ ಕಳಿಸಿಕೊಟ್ಟರು. ನಜೀರನಿಗೆ ಇಂದು ಮೈಯೆಲ್ಲ ಮಾಂಸಾ ಬಂದಹಾಗಾಯಿತು.
ಇತ್ತಿತ್ತ ರಣಮಸ್ತಖಾನನ ಸ್ವಭಾವವು ಬಹು ಸಂಶಯಗ್ರಸ್ತವಾಗಿತ್ತು; ಆತನು ಹೊರಗೆ ಹೊರಡುವದಕ್ಕಾಗಿ ಉಡುಪು-ತೊಡಪುಗಳನ್ನು ಧರಿಸಬೇಕಾದ್ದರಿಂದ ನಜೀರನ ಹಾದಿಯನ್ನು ನೋಡಹತ್ತಿದನು. ಸುದ್ದಿ ಹೇಳಿಬರಲಿಕ್ಕೆ ನಜೀರನಿಗೆ ಇಷ್ಟು ಹೊತ್ತು ಬೇಡೆಂಬದು ಸಹ ಆತನ ಮನಸ್ಸಿನಲ್ಲಿ ತಟ್ಟನೆ ಬಂದಿತು. ನಜೀರನು ಬಂದಕೂಡಲೆ ಆತನನ್ನು ಕುರಿತು ರಣಮಸ್ತಖಾನನು- “ಬರಿಯ ಸುದ್ದಿಯನ್ನು ಹೇಳಿ ಬರಲಿಕ್ಕೆ ಇಷ್ಟ ಹೊತ್ತು ಯಾಕೆ ?” ಎಂದು ಕೇಳಿದನು. ಕೂಡಲೆ ನಜೀರನ ಮೋರೆಯು ಕಪ್ಪಿಟ್ಟಿತು. ಆತನಿಗೆ ಏನು ಹೇಳಬೇಕೆಂದಂಬುದು ತಿಳಿಯದಾಯಿತು; ಅಷ್ಟರಲ್ಲಿ ರಣಮಸ್ತಖಾನನೇ ನಜೀರನಿಗೆ- “ಹೊತ್ತಿಲ್ಲ, ವೇಳೆಯಿಲ್ಲ; ತಂಬಾಕದ ಝರಕೆಗಳನ್ನು ಹೊಡೆಯುತ್ತ ಕುಳಿತುಕೊಂಡಿದ್ದೆಯಾದೀತು, ಮತ್ತೇನಿದೆ ?” ಎಂದನು. ಇದು ಅನಾಯಾಸವಾಗಿ ನಜೀರನ ಹೊತ್ತಿಗೆಬಿದ್ದಿತು. ಆತನು ದೇಶಾವರಿಯ ನಗುವನ್ನು ನಗುತ್ತ ರಣಮಸ್ತಖಾನನ ಉಡುಪು ತೊಡಪುಗಳನ್ನು ತಂದು ಕೊಡಹತ್ತಿದನು. ರಣಮಸ್ತಖಾನನು ಅವಸರದಿಂದ ಪೋಷಾಕು ಹಾಕಿಕೊಂಡನು ಆತನು ಪುನಃ ನಜೀರನಿಗೆ- “ನಾನು ಎಲ್ಲಿಗೆ ಹೋದೆನೆಂಬದನ್ನು ಮಾಸಾಹೇಬರಿಗೆ ತಿಳಿಸಬೇಡ” ಎಂದು ಗಟ್ಟಿಯಾಗಿ ಹೇಳಿ, ಅಲ್ಲಿಖಾನನು ಸಂಕೇತಸ್ಥಳದಲ್ಲಿ ನಿಲ್ಲಿಸಿದ್ದ ಕುದುರೆಯನ್ನು ಹತ್ತಿ ಹಾದಿಯ ಹಿಡಿದನು. ನಜೀರನು ಕಾಲಲ್ಲಿ ಬಲು ಹಗುರು ಇದ್ದನು. ರಣಮಸ್ತಖಾನನಾದರೂ