ಈ ಪುಟವನ್ನು ಪ್ರಕಟಿಸಲಾಗಿದೆ

ದುಃಸ್ವಪ್ನವು
೧೮೯

ಬುಸುಗುಟ್ಟುತ್ತಿರುವಂತೆಯೂ ಅವರಿಗೆ ತೋರಿತು. ರಾಮರಾಜನು ಮಾತ್ರ ಅತ್ಯಂತ ಶಾಂತಮುದ್ರೆಯಿಂದ ಮುಗುಳುನಗೆ ನಗುತ್ತ ತಮ್ಮ ಕಡೆಗೆ ನೋಡಿದಹಾಗಾಯಿತು. ರಾಮರಾಜನು ನೋಡನೋಡುತ್ತ ತಮ್ಮನ್ನು ಅಪ್ಪಿಕೊಳ್ಳಲಿಕ್ಕೆ ಬರುವಂತೆ ಮಾಸಾಹೇಬರಿಗೆ ತೋರಿತು. ರಾಮರಾಜನು ತಮ್ಮನ್ನು ಅಪ್ಪಿಕೊಳ್ಳಲಿಕ್ಕೆ ಹತ್ತಿರ ಬಂದರೆ, ಆತನನ್ನು ಪರ್ವತದ ಶಿಖರದ ಕೆಳಗೆ ನೂಕಿಬಿಡಬೇಕೆಂದು ತಾವು ತೀರ ತುದಿತುದಿಗೆ ಹೋಗುವ ಹಾಗೆ ಅವರಿಗೆ ಕಂಡಿತು. ಅಷ್ಟರಲ್ಲಿ ರಾಮರಾಜನು ತೀರ ಹತ್ತಿರ ಬಂದು ತನ್ನ ಅತ್ಯಂತ ಮಧುರ ಧ್ವನಿಯಿಂದ- “ಸುಂದರೀ, ಎಂದು ತಪ್ಪಿಸಲಿಕ್ಕೆ ಬಾರದಿರುವಾಗ ಯಾಕೆ ತಪ್ಪಿಸಿಕೊಳ್ಳುಯತ್ನಿಸುತ್ತಿ ? ಎಂದೂ ಆಗದೆ ಇರುವದನ್ನು ಯಾಕೆ ಮಾಡಲಿಕ್ಕೆ ಹೋಗುತ್ತೀ ಇಗೋ ನೋಡು, ಈಗಲು ನನ್ನ ಮಗನು” ಹೀಗೆ ಅನ್ನುತ್ತಿರುವಾಗ ರಣಮಸ್ತಖಾನನು ರಾಮರಾಜನ ಬಳಿಯಲ್ಲಿ ನಿಂತಂತೆ ಮಾಸಾಹೇಬರಿಗೆ ಕಂಡಿತು, ತಾವು ಅತಿ ನಿರ್ಬಲರೂ, ನಿಶ್ಚಲರೂ ಆದದ್ದನ್ನು ನೋಡಿ ಮತ್ತಷ್ಟು ಮಧುರಹ್ಯಾಸ ಮಾಡಿ ರಾಮರಾಜನು ತೀರ ಹತ್ತಿರಕ್ಕೆ ಬಂದ........ ನೋಡು ನೋಡು, ನಾನು ಈತನನ್ನು ಸ್ವಾಧೀನಪಡಿಸಿಕೊಂಡಿದ್ದೇನೆ. ಈತನು ನನ್ನವನು, ನನಗೆ ಸಿಕ್ಕನು, ಈಗ ನೀನಷ್ಟೇಯಾಕೆ ದೂರ ಹೋಗುತ್ತೀ ಬಾ, ಬಾ ಎಂದು ತಮ್ಮನ್ನು ಹಿಡಿಯಲಿಕ್ಕೆ ಬರುವಂತೆ ಮಾಸಾಹೇಬರಿಗೆ ತೋರಿತು. ಅಷ್ಟರಲ್ಲಿ ರಣಮಸ್ತಖಾನನು ಮುಂದಕ್ಕೆ ಬಂದಂತಾಯಿತು. ಆತನ ಬಳಿಯಲ್ಲಿ ನೂರಜಹಾನಳೂ ನಿಂತಂತೆ ತೋರಿತು. ಆಕೆಯು ಏನೋ ರಣಮಸ್ತಖಾನನಿಗೆ ಸನ್ನೆ ಮಾಡಿದ ಹಾಗಾಯಿತು. ಕೂಡಲೇ ರಣಮಸ್ತಖಾನನು-ಹೋಗಿರಿ. ಹಾಳಾಗಿ ಹೋಗಿರಿ; ನನ್ನ ಆಯುಷ್ಯವನ್ನು ನೀವಿಬ್ಬರೂ ಮಣ್ಣುಗೂಡಿಸಿಬಿಟ್ಟಿರಿ, ಎನ್ನುತ ತಮ್ಮನ್ನೂ, ರಾಮರಾಜನನ್ನೂ ಕೂಡಿಯೇ ಪರ್ವತ ಶಿಖರದ ಕೆಳಗೆ ದೂಡಿಕೊಟ್ಟಂತೆ ಮಾಸಾಹೇಬರಿಗೆ ಆಯಿತು. ಹೀಗಾದಕೂಡಲೆ ಮಾಸಾಹೇಬರು ಚಿಟ್ಟನೆ ಚೀರಿ ಹೊರಸಿನ ಕೆಳಗೆ ಬಿದ್ದರು.

ಹೀಗೆ ಚೀರಿದ್ದನ್ನು ಲೈಲಿಯು ಕೇಳಿ ಗಾಬರಿಯಾಗಿ ಬಂದಳು, ಕರ್ಮ ಧರ್ಮಸಂಯೋಗದಿಂದ ಬಾಗಲಿಗೆ ಒಳಚಿಲಕ ಹಾಕದ್ದರಿಂದ ಲೈಲಿಯು ಬಾಗಿಲು ತೆರೆದು ಒಳಗೆ ಹೋಗಿ ನೋಡಲು, ಮಾಸಾಹೇಬರು ನೆಲದ ಮೇಲೆ ಅಸ್ತವ್ಯಸ್ತವಾಗಿ ಬಿದ್ದಿದ್ದರು. ಅವರಮೈಮೇಲೆ ಎಚ್ಚರವಿದ್ದಿಲ್ಲ. ಲೈಲಿಯು ಅವಸರದಿಂದ ನೀರು ತಂದು ಅವರ ಕಣ್ಣಿಗೆ ಹಚ್ಚಿ ನೆತ್ತಿಗೆ ತಟ್ಟಿದಳು; ಆದರೆ ಬಹಳ ಹೊತ್ತಾದರೂ ಎಚ್ಚರವಾಗಲಿಲ್ಲ. ಇನ್ನೂ ಅವರು ಆಗಾಗ್ಗೆ ಚಿಟ್ಟಚಿಟ್ಟೆ ಚೀರುತ್ತಲೇ ಇದ್ದರು.