ಈ ಪುಟವನ್ನು ಪ್ರಕಟಿಸಲಾಗಿದೆ

೧೯೬
ಕನ್ನಡಿಗರ ಕರ್ಮಕಥೆ

ಅವರು ನನ್ನನ್ನು ತಮ್ಮ ಹತ್ತರಕ್ಕೆ ಕರೆದು-ನಿನ್ನನ್ನು ಅವರು ಇಂದು ಮುಂದೆ ಯಾಕೆ ಕಳಿಸಿದರು ? ಅವರು ಬರಲಿಕ್ಕೆ ಇನ್ನೂ ವಿಳಂಬವಿರುವದೋ ಏನು? ಎಂದು ಕೇಳಿದರು. ಅದಕ್ಕೆ ನಾನು-"ಹೌದು, ಸ್ವಲ್ಪ ತಡಮಾಡಿ ಬರಬಹುದು” ಎಂದು ಇಷ್ಟೇ ಹೇಳಿದೆನು. ಒಂದು ಸುಳ್ಳುಮಾತು ಆಡಿದ ಕೂಡಲೇ ಅದನ್ನು ಮುಚ್ಚಲಿಕ್ಕೆ ಎರಡನೆಯ ಸುಳ್ಳು, ಆ ಎರಡನೆಯ ಸುಳ್ಳನ್ನು ಮುಚ್ಚಲಿಕ್ಕೆ ಮೂರನೆಯ ಸುಳ್ಳು ಎಂಬಂತೆ ನನ್ನ ಈ ಕೃತಿಯು ಅವರಿಗೆ ತಿಳಿದರೆ, ನನ್ನ ಗತಿಯು ಏನಾದೀತೆಂಬದರ ಎಚ್ಚರವು ಆಗ ನನಗೆ ಉಳಿಯಲಿಲ್ಲ. ದುರ್ದೈವದಿಂದ ಖಾನ್‌ಸಾಹೇಬರು ಅಲ್ಲಿಗೆ ಬಂದುಬಿಟ್ಟರು. ಅವರನ್ನು ನೋಡಿದ ಕೂಡಲೇ ನನ್ನ ಕಣ್ಣುಗಳು ತೆರೆದು ನಾನು ಹಿಂದಹಿಂದಕ್ಕೆ ಸರಿಯಹತ್ತಿದೆನು. ಅಷ್ಟರಲ್ಲಿ ರಾಮರಾಜನು ಖಾನಸಾಹೇಬರನ್ನು ಕುರಿತು-ನೀವು ಮುಂದೆ ಕಳಿಸಿದ ಮನುಷ್ಯನು ಇದೇ ಈಗ ಇಲ್ಲಿಗೆ ಬಂದನು....... ಎಂದು ಇನ್ನೂ ಏನೋ ಮಾತಾಡುತ್ತಿರಲು, ಅಷ್ಟರಲ್ಲಿ ಖಾನಸಾಹೇಬರು-ನಮ್ಮ ಮನುಷ್ಯನು ? ನಮ್ಮ ಮನಷ್ಯನು ಯಾವನವನು? ನಾನಂತು ಯಾರನ್ನೂ ಮುಂದೆ ಕಳಿಸಿರುವದಿಲ್ಲ. ಎಲ್ಲಿ ಇದ್ದಾನೆ ಅವನು ? ಎಂದು ಕೇಳಿದರು. ಆಗ ನನ್ನ ಮೋರೆ ಹುಚ್ಚು ಇಟ್ಟಿತು. ನನಗೆ ಎಲ್ಲಿ ಅಡಗಿಕೊಳ್ಳಲಿ ಎಲ್ಲಿ ಬಿಡಲಿ ಎನ್ನುವ ಹಾಗೆ ಆಯಿತು. ಆದರೆ ಮಾಡಲೇನು? ತೆಪ್ಪಗೆ ಖಾನಸಾಹೇಬರ ಮುಂದೆ ನಿಂತುಕೊಳ್ಳಲಾಯಿತು. ಕಾವಲುಗಾರರು ನನ್ನನ್ನು ತಬ್ಬಿಕೊಂಡು ತಂದೇಬಿಟ್ಟರು.”

ಇಲ್ಲಿಯವರೆಗೆ ಮಾಸಾಹೇಬರು ಕರೀಮನ ಮಾತುಗಳನ್ನು ಸುಮ್ಮನೆ ಕೇಳುತ್ತಲಿದ್ದರು. ಈಗ ಮಾತ್ರ ಅವರು ಕರೀಮನಿಗೆ-ಛೀ, ಬುದ್ಧಿಗೇಡಿ ! ನೀನು ಇಷ್ಟು ಎಬಡನಿದ್ದೀ ಎಂಬುದು ನನಗೆ ಗೊತ್ತಿದ್ದಿಲ್ಲ. ಒಳ್ಳೆಯದು ಮುಂದೇನಾಯಿತು ಹೇಳು, ಎಂದು ಕೇಳಿದರು. ಅದಕ್ಕೆ ಕರೀಮನು-ಮುಂದೇನಾಗುವುದು? ನಾನು ಖಾನಸಾಹೇಬರ ಎದುರಿಗೆ ನಿಂತುಕೊಂಡ ಕೂಡಲೇ ಅವರು ನನ್ನ ಗುರುತು ಹಿಡಿದು ಗದ್ದರಿಸಿ-ಎಲಾ ಗುಪ್ತಚಾರನನ್ನಾಗಿ ಯಾರು ಕಳಿಸಿದರು ನಿನ್ನನ್ನು? ಮಾಸಾಹೇಬರಲ್ಲವೇ ? ಹೌದು, ಅವರೇ ನಿನ್ನನ್ನು ಕಳಿಸಿದರು. ನಿನ್ನ ಮೋರೆಯೇ ಹಾಗೆ ಹೇಳುತ್ತದೆ. ಸುಳ್ಳು ಹೇಳಬೇಡ. ಒಳ್ಳೆಯದು. ಇನ್ನು ಕದ್ದು ಮುಚ್ಚಿಯಾದರೂ ಯಾತಕ್ಕೆ ! ಸ್ವಲ್ಪನಿಲ್ಲು, ನಿನ್ನ ಮುಂದೆಯೇ ಮಾಸಾಹೇಬರಿಗೆ ಸ್ಪಷ್ಟವಾಗಿ ಹೇಳಿ ಕಳಿಸಿಬಿಡುತ್ತೇನೆ. ಹಿಡಿರೋ ಇವನನ್ನು ಅನಕಾ ಪ್ರತಿಬಂಧದಲ್ಲಿ ನಾನು ಪುನಃ ಹೇಳಿದಾಗ ಕರಕೊಂಡು ಬರುವಿರಂತೆ, ಎಂದು ಹೇಳಿ ಅವರು ರಾಮರಾಜನೊಡನೆ ಏಕಾಂತವಾಡಲಿಕ್ಕೆ ಹೋದರು. ಅಲ್ಲಿ ಬಹಳ ಹೊತ್ತು ಅವರ ಏಕಾಂತವಾಯಿತು.