ಈ ಪುಟವನ್ನು ಪ್ರಕಟಿಸಲಾಗಿದೆ

ಕಡೆಯ ಉಪಾಯ
೧೯೯

ಈಗ ಮೂವತ್ತು ವರ್ಷಗಳ ಹಿಂದೆಯೇ ಮಾಡಬೇಕಾಗಿದ್ದ ಕೆಲಸವನ್ನು ಈಗ ಮಾಡಬೇಕು. ಆಗ ನನ್ನ ಹೊಟ್ಟೆಯಲ್ಲಿ ಮತ್ತೊಂದು ಜೀವವಿದ್ದದ್ದರಿಂದ ಅದರ ಮೋಹವು ಬಾಧಿಸಲು ಪ್ರಾಣವನ್ನು ಅರ್ಪಿಸುವದು ನನ್ನಿಂದಾಗಲಿಲ್ಲ. ಆಗ ನನ್ನ ಆಸೆಯೇ ಬೇರೆ ಇತ್ತು. ಯಾವ ಮಗನಿಂದ ರಾಮರಾಜನ ಶಾಸನ ಮಾಡಿಸಬೇಕೆಂದು ನಾನು ಮಾಡಿದ್ದೆನೋ, ಆ ಮಗನೇ ಹೀಗೆ ನನ್ನ ಶಾಸನ ಮಾಡಿದ ಬಳಿಕ ಇನ್ನು ಮೇಲೆ ನನಗೆ ಯಾತರ ಆಸೆ ? ಅಥವಾ ನನ್ನನ್ನು ಶಿಕ್ಷಿಸಲಿಕ್ಕೆ ಮಗನಾದರೂ ಎಷ್ಟರವನು ? ಪರವರದಿಗಾರ ಖುದಾನೇ ನನ್ನ ಅಪರಾಧಕ್ಕಾಗಿ ನನ್ನನ್ನು ಶಿಕ್ಷಿಸಿರುವನು. ನಾನು ಪ್ರತ್ಯಕ್ಷ ಪತಿಯ ಸೇಡನ್ನು ಭಯಂಕರ ರೀತಿಯಿಂದ ತೀರಿಸಲು ಯೋಚಿಸಿದ್ದು ಅಪರಾಧವಲ್ಲವೇ ? ಅಲ್ಲಾನಿಗೆ ಅನ್ಯಾಯವಾಗಿ ತೋರಿದರೆ ರಾಮರಾಜನನ್ನು ಆತನೇ ಶಿಕ್ಷಿಸುತ್ತಿದ್ದನು. ಶಿಕ್ಷಿಸುವುದು ರಕ್ಷಿಸುವುದು ಆತನ ಕೆಲಸವಿದ್ದು, ಅದರಲ್ಲಿ ನಾನು ಯಾಕೆ ಕೈ ಹಾಕಬೇಕು ? ಮೊದಲು ನನ್ನ ಮನಸ್ಸಿನಲ್ಲಿ ಪ್ರೇಮದ ಹೊರತು ಎರಡನೆಯ ವಿಕಾರವೇ ಇದ್ದಿಲ್ಲ, ಅಂದಬಳಿಕ ಅದರ ಸ್ಥಳದಲ್ಲಿ ನಾನು ಈರ್ಷೆಯನ್ನು ಯಾಕೆ ಬರಗೊಡಬೇಕು? ನನ್ನ ಈ ಅಪರಾಧಕ್ಕಾಗಿ ನನಗೆ ದೇಹಾಂತ ಶಿಕ್ಷೆಯಾಗುವುದೇ ನ್ಯಾಯವು.

ಈ ಮೇರೆಗೆ ಮಾಸಾಹೇಬರ ಮನಸ್ಸಿನಲ್ಲಿ ಹಲವು ವಿಚಾರಗಳು ಉತ್ಪನ್ನವಾದವು. ಅವರು ಏನೂ ತೋಚದೆ, ಸ್ತಬ್ದವಾಗಿ ಕುಳಿತುಕೊಂಡುಬಿಟ್ಟರು. ತಮಗೆ ಸುದ್ದಿಯನ್ನು ಹೇಳಿದ ಕರೀಮನು ಯಾವಾಗ ಹೋದನೆಂಬದು ಅವರಿಗೆ ಗೊತ್ತೇ ಆಗಲಿಲ್ಲ. ಅದರಂತೆ ಅವರ ಬಳಿಯಲ್ಲಿ ಲೈಲಿಯು ನಿಂತಿದ್ದ ಅವರಿಗೆ ಗೊತ್ತಾಗಲಿಲ್ಲ. ಮಾಸಾಹೇಬರ ಈ ವಿಚಿತ್ರ ಸ್ಥಿತಿಯನ್ನು ನೋಡಿ ಲೈಲಿಗೆ ಅವರನ್ನು ಮಾತಾಡಿಸುವ ಧೈರ್ಯವಾಗದೆ ಆಕೆಯು ಸುಮ್ಮನೆ ಒತ್ತಟ್ಟಿಗೆ ಆಲೋಚಿಸುತ್ತ ನಿಂತುಬಿಟ್ಟಿದ್ದಳು. ಮಾಸಾಹೇಬರಾದರೂ ಹೀಗೆ ಎಷ್ಟು ಹೊತ್ತು ವಿಚಾರಮಾಡುತ್ತ ನಿಂತುಕೊಳ್ಳುವರು ? ಶರೀರಕ್ಕಿರುವಂತೆ ಮನಸ್ಸಿಗಾದರೂ ದಣುವಿಕೆಯು ಇದ್ದೇ ಇರುವುದು. ಅವರು ಮುಂದೆ ಸ್ವಲ್ಪ ಹೊತ್ತಿನಲ್ಲಿ ಎಚ್ಚತ್ತು ಲೈಲಿಯ ಕಡೆಗೆ ನೋಡಿದರು. ಆಗ ಅವರು ಶಾಂತಮುದ್ರೆಯಿಂದ ಲೈಲಿಯನ್ನು ಕುರಿತು-ಲೈಲೀ. ಇನ್ನು ಇಲ್ಲಿಯ ನಮ್ಮ ಅವತಾರವು ಮುಗಿದಂತಾಯಿತು. ನಮ್ಮ ಮನಸ್ಸಿನಲ್ಲಿದ್ದದು ಒಂದು, ಖುದಾನ ಮನಸ್ಸಿನಲ್ಲಿದ್ದದ್ದು ಮತ್ತೊಂದು, ಖುದಾನು ತನ್ನ ಮನಸ್ಸಿನಂತೆ ಮಾಡಿಬಿಟ್ಟನು. ಇನ್ನುಮುಂದೆ ನಾವು ಏನು ಮಾಡಬೇಕೆಂಬುದನ್ನು ಗೊತ್ತುಮಾಡಿಕೊಂಡು ಇನ್ನು ಒಂದೆರಡುತಾಸಿನೊಳಗೆ