ಹೋಗುವದೆತ್ತ? ಅವರನ್ನು ರಸಾತಳಕ್ಕೆ ಇಳಿಸುವೆನು, ಕೃಷ್ಣೆಯನ್ನು ದಾಟಿಹೋದರೂ, ಅವರ ನಾಶವಾಗುವದು. ದಾಟದೆಯಿದ್ದರೂ ಅವರ ನಾಶವಾಗುವದು. ಅನ್ನಲು, ರಣಮಸ್ತಖಾನನು ಏನೂ ಉತ್ತರ ಕೊಡದೆ, ಸುಮ್ಮನೆ ರಾಮರಾಜನಿಗೆ ಮುಜುರೆಮಾಡಿ ನಕ್ಕನು. ಆ ನಗೆಯಿಂದ ಆತನು ರಾಮರಾಜನಿಗೆ “ಮಹಾರಾಜರೇ, ತಮ್ಮ ಅನುಭವ, ತಮ್ಮ ಶೌರ್ಯ, ತಮ್ಮ ರಾಜಕಾರಣಪಟುತ್ವ ಇವನ್ನು ಎಷ್ಟು ವರ್ಣಿಸಿದರೂ ಸ್ವಲ್ಪವೇ ಇರುವದು” ಎಂಬರ್ಥವನ್ನು ಪ್ರಕಟಿಸಿದನು, ಮನಸ್ಸಿನಲ್ಲಿ ಮಾತ್ರ ರಾಮರಾಜನು ಮೋಸ ಹೋಗುತ್ತಿರುವ ಬಗ್ಗೆ ಖಾನನಿಗೆ ಬಹಳ ಸಮಾಧಾನವಾಗಿತ್ತು. ಹೀಗೆ ಆತನು ಸಮಾಧಾನಪಡುತ್ತಿರುವಾಗ ರಾಮರಾಜನು ರಣಮಸ್ತನಿಗೆ
ರಾಮರಾಜ-ರಣಮಸ್ತಖಾನ, ನೀನು ವೀರಪುತ್ರನಿರುತ್ತೀ. ಈ ಯುದ್ಧದಲ್ಲಿ ನಾನು ನಿನಗೊಂದು ಮಹತ್ವದ ಕಾರ್ಯವನ್ನು ಹೇಳುವವನಿದ್ದೇನೆ. ಅದನ್ನು ನೀನು ಮಾಡಲೇಬೇಕು.
ರಣಮಸ್ತ-ನೀವು ನನ್ನನು ದೂರ ಹೋಗಗೊಟ್ಟರಷ್ಟೇ ನಾನು ಮಹತ್ಕಾರ್ಯವನ್ನು ಮಾಡುವದು ? ನನ್ನ ಬಳಿಯಲ್ಲಿಯೇ ಇರಬೇಕೆಂದು ನೀವು ಆಗ್ರಹಪಡುತ್ತಿರುವಿರಿ ನಿಮ್ಮ ಸುತ್ತು ಮುತ್ತು ಅನೇಕ ವೀರರು ದಕ್ಷತೆಯಿಂದ ನಿಮ್ಮನ್ನು ರಕ್ಷಿಸುತ್ತಿರಲು, ಪರಾಕ್ರಮವನ್ನು ತೋರಿಸುವ ಪ್ರಸಂಗವು ನನಗೆ ಹ್ಯಾಗೆ ಬರಬೇಕು ? ನನ್ನನ್ನು ನೀವು ಹರಿಯಬಿಡುವದಿಲ್ಲ. ನನ್ನನ್ನು ಬಿಟ್ಟು ಹೋಗಲೇಬೇಡೆಂದು ನೀವು ಅನ್ನುತ್ತೀರಿ, ಅಂದಬಳಿಕ ನಾನೇನು ಮಾಡಲಿ ?
ರಾಮರಾಜ- ಇಲ್ಲ, ನಿನಗೆ ನಾನು ಹೋಗಬೇಡೆನ್ನುವದಿಲ್ಲ. ಯೋಗ್ಯ ಪ್ರಸಂಗ ಒದಗಿದ ಕೂಡಲೆ ನಿನ್ನನ್ನು ಕಳಿಸುವೆನು. ಕಾರ್ಯವನ್ನು ಸಾಧಿಸಲಿಕ್ಕೆ ಮಾತ್ರ ನೀನು ಸಿದ್ಧವಾಗಿರಲಿಕ್ಕೇ ಬೇಕು.
ರಣಮಸ್ತ-ನಾನು ಸಿದ್ಧನೇ ಇರುತ್ತೇನೆ.ಅದರ ವಿಷಯವಾಗಿ ತಮಗೆ ಸಂಶಯವೇತಕ್ಕೆ ? ನಾನು ಸಾಧಿಸಬೇಕಾಗಿರುವ ಕಾರ್ಯವು ಯಾವದೆಂಬದನ್ನು ಹೇಳಿಬಿಡಬೇಕು.
ರಾಮರಾಜ-ಅನ್ಯಾಯವಾಗಿ ನಿನಗೆ ದೇಹಂತ ಶಾಸನ ಮಾಡಬೇಕೆಂದು ಮಾಡಿರುವ ವಿಜಾಪುರ ಬಾದಶಹನನ್ನು ನೀನು ಸೆರೆಹಿಡಿದು ತಂದು ಕೊಡಬೇಕು. ಅದು ಸಾಧಿಸದಿದ್ದರೆ, ಆತನ ರುಂಡವನಾದರೂ ತಂದು ಕೊಡಬೇಕು.
ರಾಮರಾಜನ ಮುಖದಿಂದ ಹೊರಟ ಈ ಮಾತುಗಳನ್ನು ಕೇಳಿ ರಣಮಸ್ತಖಾನನು ಚಕಿತನಾದಂತೆ ತೋರಿತು. ಆತನು ಸಂತಾಪದಿಂದ ಅವಡುಗಚ್ಚಿ