ಈ ಪುಟವನ್ನು ಪ್ರಕಟಿಸಲಾಗಿದೆ
೨೯ನೆಯ ಪ್ರಕರಣ
ಮಾಸಾಹೇಬರ ದುರವಸ್ಥೆ

ಇನ್ನು ಕುಂಜವನದಲ್ಲಿದ್ದ ಮಾಸಾಹೇಬರ ಸಮಾಚಾರವನ್ನಷ್ಟು ತಕ್ಕೋಳೋಣ, ರಾಮರಾಜನು ಮಾಸಾಹೇಬರ, ಅಥವಾ ಲೈಲಿಯ ಮನಸ್ಸನ್ನು ಒಲಿಸಿಕೊಳ್ಳಲಾರದೆ ಹತಾಶನಾಗಿ ಹೋದನಂತರ, ಮಾಸಾಹೇಬರು ಬಹು ಕಷ್ಟದಿಂದ ಕಾಲಹರಣ ಮಾಡಹತ್ತಿದರು. ಕುಂಜವನದಲ್ಲಿ ತಮ್ಮನ್ನು ಸೆರೆಯಲ್ಲಿಟ್ಟಿದ್ದು ಅವರಿಗೆ ಅತ್ಯಂತ ದುಸ್ಸಹವಾಗಿತ್ತು. ತಾವು ಈ ಪ್ರತಿಬಂಧದಿಂದ ಪಾರಾಗಿ ಹೋಗುವದು ಅಶಕ್ಯವೆಂದು ತಿಳಿದು, ಅವರು ದಿನದಿನಕ್ಕೆ ಚಿಂತೆಯಿಂದ ಕ್ಷೀಣವಾಗಹತ್ತಿದರು. ಮೊದಲಿನಂತೆ ಧನಮಲ್ಲನು ಕೃಷ್ಣಸರ್ಪದ ಹಾಗೆ ಅವರನ್ನು ಕಾಯುತ್ತಲಿದ್ದನು. ಧನಮಲ್ಲನ ಮನಸ್ಸನ್ನೊಲಿಸಿಕೊಳ್ಳುವದು ಅವರಿಗೆ ತೀರ ಅಸಾಧ್ಯವಾಗಿತೋರಿತು. ಲೈಲಿಯೂ ಈ ಕೆಲಸದಲ್ಲಿ ಕೈ ಊರಿದಳು. ಹೀಗೆಯೇ ಅವರಿಬ್ಬರು ಕಾಲಹರಣ ಮಾಡುತ್ತಿರಲು, ಇತ್ತ ಯುದ್ಧಪ್ರಸಂಗವು ಒದಗಿದ್ದರಿಂದ ಸೈನ್ಯದೊಡನೆ ರಾಮರಾಜನು ದಂಡಯಾತ್ರೆಗೆ ಹೊರಟನು. ಈ ಯಾವ ಸುದ್ದಿಯೂ ಮಾಸಾಹೇಬರಿಗೆ, ಅಥವಾ ಲೈಲಿಗೆ ಗೊತ್ತಾಗಿದ್ದಿಲ್ಲ. ಹೀಗಿರುವಾಗ ಒಂದು ದಿನ ಮಾಸಾಹೇಬರು ಲೈಲಿಯನ್ನು ಕುರಿತು-ಮಾರ್ಜಿನೆ, ಏನಾದರೂ ಮಾಡು, ಧನಮಲ್ಲನ ಮನಸ್ಸನ್ನು ಒಲಿಸಿಕೊಂಡು ನನ್ನನ್ನಷ್ಟು ಬಂಧಮುಕ್ತ ಮಾಡು; ನಾವು ಎಲ್ಲಿಂದ ಬಂದೆವೋ ಅಲ್ಲಿಗೇ (ಉತ್ತರ ಹಿಂದುಸ್ತಾನಕ್ಕೆ) ಹೋಗೋಣ, ಇಲ್ಲವೆ ಇಬ್ಬರೂ ತೆಕ್ಕೆಬಿದ್ದು ಕೃಷ್ಣೆಯಲ್ಲಿ ಹಾರಿಕೊಂಡು ಜೀವಕೊಡೋಣ. ನೀನು ಮುದುಕೆಯಾಗಿರುತ್ತೀ; ನನಗೆ ಬದುಕುವ ಆಸೆಯಿಲ್ಲ; ಆದ್ದರಿಂದ ನೀನು ಇಷ್ಟು ಕೆಲಸ ಮಾಡು, ಎಂದು ಹೇಳಿದರು. ಮಾರ್ಜಿನೆಯು ಎಷ್ಟು ಸಮಾಧಾನ ಮಾಡಿದರೂ ಮೆಹೆರಜಾನಳು (ಮಾಸಾಹೇಬರು) ಕೇಳಲಿಲ್ಲ. ಹೀಗೆಯೇ ಕೆಲವು ದಿನಗಳು ಹೋದವು. ಒಂದು ದಿನ ಮೆಹೆರಜಾವಳಿಗೆ ಏನು ತಿಳೀಯಿತೋ ಏನೋ, ಆಕೆಯು ಒಮ್ಮೆಲೆ ಮಾರ್ಜಿನೆಯನ್ನು ಕರೆದು "ಧನಮಲ್ಲನ ಮನಸ್ಸನ್ನು ಒಲಿಸಿಕೊಳ್ಳಲೆಂದು ನಾನು ನಿನಗೆ ಬಹು ದಿವಸಗಳಿಂದ ಹೇಳುತ್ತ