ನಮ್ಮ ಬಳಿಯಲ್ಲಿ ಇಷ್ಟು ಪ್ರಚಂಡ ಸೈನ್ಯವೂ, ಇಂಥ ಅತ್ಯುತ್ತಮ ವ್ಯವಸ್ಥೆಯೂ ಇದ್ದು ವ್ಯರ್ಥವಾಗಬಹುದು. ನನಗೆ ಬಹು ಪ್ರಯತ್ನದಿಂದ ಸಂಪೂರ್ಣ ಗೊತ್ತಾಗಿದ್ದ ಶತ್ರುಗಳ ಕಡೆಯ ವಿಶ್ವಸನೀಯವಾದ ಮಹತ್ವದ ಸುದ್ದಿಯನ್ನು ತಮ್ಮ ಮುಂದೆ ಹೇಳಿಯೂ ಹೇಳದ ಹಾಗೆ ಆಗಿರುತ್ತದೆ. ನನ್ನ ಮೇಲೆ ತಮ್ಮ ವಿಶ್ವಾಸವಿಲ್ಲದ್ದರಿಂದ ಹೀಗಾಗುತ್ತದೆಯೋ, ಅಥವಾ ತಮಗೆ ವಿಚಾರಮಾಡುವ ಮನಸ್ಸು ಇಲ್ಲವೇ ಇಲ್ಲವೋ ಅಥವಾ ನಾನು ಹೇಳಿದಂತೆ ಮಾಡಲಿಕ್ಕೆ ನಿಮಗೆ ಧೈರ್ಯವಾಗಲೊಲ್ಲದೋ ಇದಾವದೂ ನನಗೆ ತಿಳಿಯದಾಗಿದೆ, ಬಾದಶಹನ ಮೇಲೆ ತಿರುಗಿಬಿದ್ದು ನಿಮ್ಮ ಕಡೆಗೆ ಬಂದಿರುವ ನಾನು, ನನ್ನ ಮೇಲೆಯೂ ಯಾಕೆ ತಿರುಗಿಬೀಳಲೆಕ್ಕಿಲ್ಲೆಂಬ ಸಂಶಯವು ನಿಮಗೆ ಬರಬಹುದೆಂಬದರಲ್ಲಿ ಆಶ್ಚರ್ಯವೇನೂ ಇಲ್ಲ. ನನ್ನ ಮಾತಿನಲ್ಲಿ ಅವಿಶ್ವಾಸವಿದ್ದರೆ, ತಾವು ನನ್ನ ಮಾತು ಕೇಳಬಾರದು.
ರಣಮಸ್ತನ ಈ ಮಾತುಗಳನ್ನು ಕೇಳಿದ ಕೂಡಲೆ ರಾಮರಾಜನು ಒಮ್ಮೆಲೆ ತಾನು ಕುಳಿತ ಸ್ಥಳದಿಂದ ಎದ್ದು ಖಾನನ ಬಳಿಗೆ ಹೋಗಿ, ಆತನ ಬೆನ್ನಮೇಲೆ ಕೈಯಾಡಿಸುತ್ತ- “ತಮ್ಮಾ ಹೀಗೆ ಯಾಕೆ ಅನ್ನುತ್ತೀ ? ನಿನ್ನ ಮೇಲೆ ನನ್ನ ವಿಶ್ವಾಸವಿದ್ದಷ್ಟು ಇಡಿಯ ನನ್ನ ರಾಜ್ಯದ ಬೇರೆ ಯಾರ ಮೇಲೆಯೂ ಇರುವದಿಲ್ಲ. ಹೊಟ್ಟೆಯ ಮಗನ ಮೇಲೆ ಅದರಲ್ಲಿಯೂ ನಿನ್ನ ಹಾಗೆ ಇರುವ ಹೊಟ್ಟೆಯ ಮಗನ ಮೇಲೆ ಯಾವ ತಂದೆಯ ವಿಶ್ವಾಸವಿಡಲಿಕ್ಕಿಲ್ಲ ?” ಎಂದು ನುಡಿಯುತ್ತಿರುವಾಗ, ರಾಮರಾಜನು ಭಯಪಟ್ಟು ತಾನು ಹೀಗೆ ನುಡಿಯತಕ್ಕದಿದಿಲ್ಲವೆಂದು ನಾಲಗೆ ಕಚ್ಚಿಕೊಂಡನು “ಹೊಟ್ಟೆಯ ಮಗನಮೇಲೆ” ಎಂಬ ಶಬ್ದವು ಕಿವಿಗೆ ಬಿದ್ದ ಕೂಡಲೆ ರಣಮಸ್ತಖಾನನು ಸಂತಪ್ತನಾಗಿ ರಾಮರಾಜನನ್ನು ನೋಡಹತ್ತಿದನು. ಆಗ ರಾಮರಾಜನು ರಣಮಸ್ತನಿಗೆ- ಹೌದು ನಾನು ನಿನ್ನ ಮೇಲೆ ಹೊಟ್ಟೆಯ ಮಗನಂತೆಯೇ ಪ್ರೇಮ ಮಾಡುತ್ತೇನೆಂಬದು ನಿನಗೆ ಗೊತ್ತಿಲ್ಲವೆ ? ಹೊಟ್ಟೆಯ ಮಗನ ಮಾತನ್ನು ನಂಬುವಾಗ ಸಹ ಒಮ್ಮೊಮ್ಮೆ ವಿಚಾರಮಾಡಬೇಕಾಗುತ್ತದೆ; ಅದರಂತೆ ಈಗ ನಾನು ನಿನ್ನ ಮಾತಿನಂತೆ ನಡೆಯುವ ಮೊದಲು ವಿಚಾರಮಾಡಿದೆನು. ನೀನು ಇಷ್ಟು ನಂಬಿಗೆಯಿಂದ ಹೇಳಿದ ಬಳಿಕ ನಿನ್ನ ಮಾತಿನಂತೆ ನಮ್ಮ ಸೈನ್ಯದಲ್ಲಿ ಎರಡು ಭಾಗ ಮಾಡಿ, ನೀನು ಹೇಳಿದ ಕಡೆಗೆ ಒಂದು ಭಾಗವನ್ನು ಕಳಿಸುವೆನು, ಈಗಾದರೂ ಆಯಿತೆ ? ಎಂದು ಕೇಳಿದನು. ತನ್ನ ಸಂಗಡ ರಾಮರಾಜನು ಇಷ್ಟು ಸಲಿಗೆಯಿಂದ ಯಾಕೆ ನಡೆಯುತ್ತಿರುವನೆಂಬ ಬಗ್ಗೆ ರಣಮಸ್ತಖಾನನು