ಬೀದರದ ಬಾದಶಹನ ಸೈನ್ಯವೂ, ಮಧ್ಯ ಕೇಂದ್ರದ ಮೇಲೆ ಸಾಗಿ ಬರುವದಕ್ಕಾಗಿ ಅಹಮ್ಮದನಗರದ ಹುಸೇನ ನಿಜಾಮಶಹನ ಸೈನ್ಯವೂ ಯೋಜಿಸಲ್ಪಟ್ಟಿದ್ದವು. ಈ ಮೂವರೂ ತಮ್ಮ ತಮ್ಮ ತೋಫಖಾನೆಗಳನ್ನು ಮಧ್ಯದಲ್ಲಿಟ್ಟು, ಅವು ಹಿಂದುಗಳಿಗೆ ಕಾಣದಹಾಗೆ ಅವುಗಳ ಮುಂದೆ ಧನುರ್ಧಾರಿಗಳ ಸೈನ್ಯವನ್ನು ನಿಲ್ಲಸಿದ್ದರು. ಪ್ರತಿ ಒಂದು ಪಥಕದವರು ತಮ್ಮ ಬಾರಾ ಇಮಾಮನ ನಿಶಾನೆಯನ್ನು ಸೈನ್ಯದ ಮುಂದೆ ಹಿಡಿದಿದ್ದರು. ನಿಜಾಮಶಹನ ತೋಫಖಾನೆಯು ದೊಡ್ಡದಿತ್ತು. ಅವುಗಳಲ್ಲಿ ತೋಫುಗಳು ಸಣ್ಣವು-ದೊಡ್ಡವು ಕೂಡಿ ೬೦೦ ಇದ್ದವು. ಸಣ್ಣ ತೋಪುಗಳನ್ನು ಹಿಂದುಗಡೆಯಲ್ಲಿ ನಿಲ್ಲಿಸಿ, ದೊಡ್ಡ ತೋಪುಗಳನ್ನು ಮುಂದುಗಡೆಯಲ್ಲಿ ನಿಲ್ಲಿಸಿದ್ದರು. ಈ ಮೇರೆಗೆ ತೋಪುಗಳನ್ನು ನಿಲ್ಲಿಸಿರುವದು ಹಿಂದೂ ಜನರಿಗೆ ಗೊತ್ತಾಗಿದ್ದಿಲ್ಲ. ಅದು ಗೊತ್ತಾಗಬಾರದೆಂತಲೇ ಮುಸಲ್ಮಾನರು ಧನುರ್ಧಾರಿಗಳನ್ನು ತೋಪುಗಳ ಮುಂದೆ ನಿಲ್ಲಿಸಿ ಮರೆಮಾಡಿದ್ದರು. ಮುಸಲ್ಮಾನ ಧನುರ್ಧಾರಿಗಳು ಬಾಣಗಳನ್ನು ಬಿಡಹತ್ತಿದಕೂಡಲೆ ಹಿಂದೂಜನರು ಅವರ ಮೇಲೆ ಬಾಣಗಳನ್ನು ಸುರಿಸ ಹತ್ತಿದರು. ಹಿಂದೂ ಧನುರ್ಧಾರಿಗಳಿಗೆ ತಮ್ಮ ಧನುರ್ಧಾರಿಗಳು ಈಡಾಗಲಾರರೆಂಬದು ಮುಸಲ್ಮಾನರಿಗೆ ಗೊತ್ತಿದ್ದರೂ, ಹಿಂದೂ ಸೈನಿಕರನ್ನು ತಮ್ಮ ಮೇಲೆ ಎಳಕೊಂಡು, ಕೂಡಲೆ ತಮ್ಮ ಬಿಲ್ಲಾಳುಗಳನ್ನು ಹಿಂದಕ್ಕೆ ಸರಿಸಿಕೊಂಡು ತೋಪುಗಳನ್ನು ಹಾರಿಸಿ, ಹಿಂದೂ ಸೈನ್ಯದ ಸಂಹಾರವನ್ನು ಮಾಡಿ ಜರ್ಜರಗೊಳಿಸಿಬೇಕೆಂದು ಮುಸಲ್ಮಾನರು ಯೋಚಿಸಿದ್ದರು, ಆ ಯೋಚನೆಯು ಚನ್ನಾಗಿ ಫಲಿಸಿತು. ಈ ಮುಸಲ್ಮಾನ ಧನುರ್ಧಾರಿಗಳ ಆಟವು ನಮ್ಮ ಮುಂದೆ ಏನೂ ನಡೆಯಲಾರದೆಂಬ ನಂಬಿಗೆಯಿಂದ ರಾಮರಾಜನು ತನ್ನ ಧನುರ್ಧಾರಿಗಳನ್ನು ಭರದಿಂದ ಮುಂದಕ್ಕೆ ಓಡುವವರಂತೆ ವಿಜಾಪುರದ ಕಡೆಗೆ ಸರಿಯಹತ್ತಿದರು. ಅದನ್ನು ನೋಡಿ ಹಿಂದೂಜನರು ಉಬ್ಬಿ ಜಯಘೋಷ ಮಾಡುತ್ತ ಆವೇಶದಿಂದ ಮುಂದಕ್ಕೆ ಸಾಗಿಹೋದರು. ಕೂಡಲೆ ಮುಸಲ್ಮಾನರು ತಮ್ಮ ತೋಪುಗಳನ್ನು ಹಾರಿಸಿ, ಹಿಂದು ಜನರ ಸಂಹಾರವನ್ನು ಮಾಡಹತ್ತಿದರು.
ಹೀಗಾಗಿ ಶೂರರಾದ ಹಿಂದೂ ಧನುರ್ಧಾರಿಗಳು ಪಟಪಟ ಸಾಯಹತ್ತಿದರು ಇಷ್ಟರಿಂದ ರಾಮರಾಜನ ಸೈನಿಕರೇನು ಹಿಂಜರಿಯಲಿಲ್ಲ. ಕೂಡಲೇ ಮುಸಲ್ಮಾನ ತೋಪುಗಳಿಗೆ ಎದುರಾಗಿ ಹಿಂದೂ ಜನರ ತೋಫುಗಳೂ ಮುಂದಕ್ಕೆ ಬಂದು ಹಾರಹತ್ತಿದವು, ಇದರಿಂದ ಎರಡೂ ಸೈನ್ಯಗಳಲ್ಲಿ ಭಯಂಕರವಾದ ಸಂಹಾರಕಾರ್ಯವು ನಡೆಯಿತು. ಅಷ್ಟರಲ್ಲಿ ಬೇರೆ ಚಾರರ ಮುಖಾಂತರವಾಗಿ ಶತ್ರುಗಳ ಮೋಸವು ಗೊತ್ತಾಗಿ, ತಿರುಮಲ-ವೆಂಕಟಾದ್ರಿಗಳೂ ತಮ್ಮ ಸೈನ್ಯಗಳೊಡನೆ