ರುಂಡವನ್ನು ತನ್ನ ಕರವಸ್ತ್ರದಲ್ಲಿ ಅಲ್ಲಿ ಅವರಿಬ್ಬರು ಮೇಲೆ ಹೇಳಿದಂತೆ ರಣಮಸ್ತನ ಫಿತೂರಿಯನ್ನು ಕುರಿತು ಮಾತನಾಡುತ್ತ ಕುಳಿತುಕೊಂಡಿದ್ದರು. ಮೆಹೆರ್ಜಾನಳು ನೂರಜಹಾನಳಿಗೆ-ತಂಗೀ, ನಿನ್ನ ಮಾತು ನನಗೆ ನಂಬಿಗೆಯಾಗಿ ತೋರುವದಿಲ್ಲ. ಒಂದು ಪಕ್ಷದಲ್ಲಿ ರಣಮಸ್ತನು ರಾಮರಾಜನ ಮೇಲೆ ತಿರುಗಿ ಬಿದ್ದರೂ ಆತನು ರಾಮರಾಜನ ಶಿರಸ್ಸನ್ನು ತರುವ ಬಗೆ ಹ್ಯಾಗೆ ? ಎಂದು ಪ್ರಶ್ನೆಮಾಡುತ್ತಿರಲು, ಅದಕ್ಕೆ ನೂರಜಹಾನಳು ಉತ್ತರಕೊಡುವ ಮೊದಲೇ ರಣಮಸ್ತನು ರಾಮರಾಜನ ಶಿರಸ್ಸನ್ನು ಅವರಿಬ್ಬರ ನಡುವೆ ದೊಪ್ಪನೆ ಒಗೆದು- “ಇದೇ ಆ ರಾಮರಾಜನ ಶಿರಸ್ಸು; ನನ್ನ ಪ್ರತಿಜ್ಞೆಯನ್ನು ಪೂರ್ಣ ಮಾಡಿದ ನಿಶಾನೆಯಿದು; ಇದನ್ನು ನಿಮ್ಮಿಬ್ಬರಿಗೂ ಕಾಣಿಕೆಯಾಗಿ ಅರ್ಪಿಸಿರುತ್ತೇನೆ! ಅರಗಿಳಿಯೇ, ಯಾವನು ನೆರೆದ ದರ್ಬಾರದಲ್ಲಿ ನಿನ್ನ ಮಾನಖಂಡನ ಮಾಡಿದ್ದನೋ, ಅವನ ತಲೆಯಿದು ನೋಡು! ಇದನ್ನು ಕೈಮುಟ್ಟ ನಾನು ಕೊಯ್ದು ತಂದಿರುತ್ತೇನೆ” ಎಂದು ನುಡಿಯುತ್ತಿರಲು, ಮೆಹೆರ್ಜಾನಳು ಆ ರುಂಡದ ಗುರುತು ಹಿಡಿದು, ಅತ್ಯಂತ ದುಃಖದಿಂದ ತಟ್ಟನೆ ರಣಮಸ್ತನಿಗೆ-
ಮೆಹೆರ್ಜಾನ-ಮಗುವೇ, ನೀನು-ನೀನು ಈ ಶಿರಸ್ಸನ್ನು ಕೈಮುಟ್ಟ ತುಂಡರಿಸಿದೆಯಾ ?
ರಣಮಸ್ತ-ಅಹುದಹುದು ಮಾಸಾಹೇಬ, ಯಾವನ ದ್ವೇಷಮಾಡುವಂತೆ ನೀವು ಚಿಕ್ಕಂದಿನಿಂದಲೇ ನನಗೆ ಕಲಿಸಿದಿರೋ, ಆ ದುಷ್ಟ ರಾಮರಾಜನ ಶಿರಸ್ಸನ್ನು ನಾನು ಕೈಮುಟ್ಟ ತುಂಡರಿಸಿದೆನು.
ಮೆಹೆರ್ಜಾನ-ತಮ್ಮಾ, ಮಗುವೇ. ಅಲ್ಲೋ. ಅವನು ನಿಮ್ಮ ತಂದೆಯು! ಆದರೆ ಇನ್ನು ಪ್ರಯೋಜನವೇನು? ಈಗಾಗುವ ಪ್ರಯೋಜನವು ಇಷ್ಟೇ.........
ಈ ಮೇರೆಗೆ ನುಡಿಯುವ ಮೆಹೆರ್ಜಾನಳ ಮಾತು ಕೇಳೀ ರಣಮಸ್ತನ ಮನಸ್ಸಿಗೆ ಹ್ಯಾಗಾದರೂ ಆಗಿರಲಿ; ಆದರೆ ಮೆಹೆರ್ಜಾನಳು ಆ ಶಿರಸ್ಸನ್ನು ಬಲಗೈಯಿಂದ ಎತ್ತಿಹಿಡಿದು, ಅದನ್ನು ಒಮ್ಮೆ ದಿಟ್ಟಿಸಿ ನೋಡಿದಳು. ಇನ್ನು ಮೇಲೆ ಈಕೆಯು ಏನು ಮಾಡುವಳೆಂಬದರ ತರ್ಕ ಮಾಡುವದದೊಳಗೆ ಆ ಪತಿಘಾತಕಳಾದ ಕರ್ಕಶ ಸ್ವಭಾವದ ಮೆಹೆರ್ಜಾನಳು, ತನ್ನ ಪತಿಯ ರುಂಡದೊಡನೆ ಆ ಪುಷ್ಕರಣಿಯ ಗಂಭೀರ ಜಲದಲ್ಲಿ ಹಾರಿಕೊಂಡಳು. ಹೀಗೆ ಆ ದಂಪತಿಗಳಿಬ್ಬರ ಅಂತ್ಯವಾಯಿತು.