ಈ ಪುಟವನ್ನು ಪ್ರಕಟಿಸಲಾಗಿದೆ

೨೬
ಕನ್ನಡಿಗರ ಕರ್ಮಕಥೆ

ವಿಯಷವಾಗಿ ಎಷ್ಟು ಶಂಕಿಸಿದರೂ, ಆತನು ಭೆಟ್ಟಿಯಾದಾಗೆಲ್ಲ ಆತನ ವಿಷಯದ ವಿಕಲ್ಪವನ್ನೆಲ್ಲ ಮರೆತು, ಅಕೃತ್ರಿಮ ಪ್ರೇಮದಿಂದ ಆತನನ್ನು ಆಲಂಗಿಸುವಳು. ಆತನ ಬಳಿಯಲ್ಲಿರುವತನಕ ಆಕೆಯು ಇಲ್ಲದ ವಿಕಲ್ಪಗಳನ್ನು ಒಡನುಡಿದಾಗ ಅವುಗಳಿಗೆಲ್ಲ ರಾಮರಾಜನು ಸಮಾಧಾನ ಹೇಳಲು, ಕೃತಜ್ಞತೆಯಿಂದ ಆತನನ್ನು ಪುನಃ ಕುಂಜವನದಿಂದ ಹೋಗಗೊಡುವಳು, ಮತ್ತೆ ಕೆಲವು ದಿನ ಆತನು ಬಾರದಾಗಲು ಮತ್ತೆ ಆಕೆಯ ವಿಕಲ್ಪಕ್ಕೆ ಆರಂಭವಾಗುತ್ತಿತ್ತು. ಈ ಕ್ರಮವು ಮೆಹರ್ಜಾನಳ ಬಹುರೂಢವಾದ ವೇಳಾಪತ್ರಕದಂತೆ ಆಗಿ ಹೋಗಿತ್ತು. ಭಿಢೆಭಾರಣಿಯ ಸರಳ ಮನಸ್ಸಿನವರ ಸ್ಥಿತಿಯು ಹೀಗೆಯೇ ಸರಿ.

ಹೀಗೆ ಕ್ರಮಿಸುತ್ತಿರಲು, ಒಂದು ದಿನ ಮೆಹರ್ಜಾನಳ ಮನಸ್ಸು ತೀರ ಖಿನ್ನವಾಯಿತು. ರಾಮರಾಜನು ಬಾರದೆ ಅಂದಿಗೆ ಎಂಟು ದಿನಗಳಾಗಿ ಹೋಗಿದ್ದವು. ಅಂದು ವಸಂತಕಾಲದ ಪೌರ್ಣಿಮೆಯಾದದ್ದರಿಂದ, ಚಂದ್ರಮನು ಷೋಡಶ ಕಲೆಗಳಿಂದ ಪೂರ್ಣವಾಗಿ ಉದಯ ಹೊಂದಿದನು. ಆ ನಿಶಾಂಕರನು ಮೇಲಕ್ಕೇರಿ ಹಿಟ್ಟು ಚೆಲ್ಲಿದ ಹಾಗೆ ಎಲ್ಲ ಕಡೆಗೆ ಬೆಳದಿಂಗಳು ಬೀರಲು, ನಾಲ್ಕು ತಾಸು ರಾತ್ರಿಯು ಮೀರಿ ಐದನೆಯು ಅಮಲು ಆಯಿತು. ಆಗ ಮೆಹರ್ಜಾನಳು ಒಬ್ಬಳೇ ಮಂದಿರದಿಂದ ಹೊರಟು ಕುಂಜವನದೊಳಗಿನ ಪುಷ್ಕರಣೆಯ ಕಡೆಗೆ ಸಾಗಿದಳು. ತನ್ನನ್ನು ಹಿಂಬಾಲಿಸಿ ಬಾರದಂತೆ ಆಕೆಯು ಎಲ್ಲರಿಗೆ ಕಟ್ಟಪ್ಪಣೆ ಮಾಡಿದ್ದಳು. ಮಾರ್ಜೀನೆಗೆ ಕೂಡ ಅವಳ ಸಂಗಡ ಹೋಗಲಿಕ್ಕೆ ಧೈರ್ಯ ಸಾಲಲಿಲ್ಲ. ಮೆಹರ್ಜಾನಳು ಪುಷ್ಕರಣಿಗೆ ಹೋದಾಗ ಆ ಮನೋಹರವಾದ ಸರೋವರದ ಶೋಭೆಯು ವರ್ಣಿಸುವ ಹಾಗಿತ್ತು. ಆ ವಿಸ್ತೀರ್ಣವಾದ ಪುಷ್ಕರಣಿಯ ನಟ್ಟನಡುವೆ ಒಂದು ಧ್ವಜಸ್ತಂಭವಿದ್ದು ಸುತ್ತುಮುತ್ತು ಸಣ್ಣ-ದೊಡ್ಡ ಗಿಡಗಳ ನೆರಳು ದಟ್ಟವಾಗಿ ಬಿದ್ದಿತ್ತು. ಪುಷ್ಕರಣಿಯಲ್ಲಿ ನೈದಿಲೆಗಳು ಅರಳಿ ಅವು ಅಲ್ಲಿಯ ಸ್ವಚ್ಛವಾದ ಉದಕದಲ್ಲಿ ಪ್ರತಿಬಿಂಬಿಸಿದ್ದವು. ಗಾಳಿ ಸುಳಿದಾಡದ್ದರಿಂದ ಸುತ್ತಲಿನ ಗಿಡಗಳು ಮಿಸುಕುತ್ತಿದ್ದಿಲ್ಲ. ಪುಷ್ಕರಣಿಯಲ್ಲಿ ತೆರೆಗಳೂ ಉತ್ಪನ್ನವಾಗುತ್ತಿದ್ದಿಲ್ಲ. ನಿರಭ್ರವಾದ ಆಕಾಶದಲ್ಲಿ ಚಂದ್ರಮನೂ, ನಕ್ಷತ್ರಗಳೂ ಸ್ಥಳಬಿಟ್ಟು ಕದಲದೆ ಸುಮ್ಮನೆ ನಿಂತಲ್ಲಿ ನಿಂತಿರುವಂತೆ ತೋರುತ್ತಿತ್ತು ! ಒತ್ತಟ್ಟಿಗೆ ಮೆಹರ್ಜಾನಳಂಥ ಲೋಕೋತ್ತರ ಸುಂದರಿಯು ತನ್ನ ಬಿರುಸ್ವಭಾವವನ್ನು ಬದಿಗಿಟ್ಟು ದಿಟ್ಟತನದಿಂದ ಏಕಾಕಿಯಾಗಿ ಮಧ್ಯರಾತ್ರಿಯಲ್ಲಿ ಇಲ್ಲಿಗೆ ಯಾಕೆ ಬಂದಿರಬಹುದೆಂಬುದನ್ನು ಬೆರಗಾಗಿ ನೋಡುತ್ತಿರುವಂತೆ, ಪುಷ್ಕರಣಿಯಲ್ಲಿಯೂ, ಅದರ ಸುತ್ತಲು ಅದರ ಮೇಲ್ಗಡೆಯಲ್ಲಿಯೂ ಇರುವ ಚಲನವಲನದ ವಸ್ತುಗಳೆಲ್ಲ ಸ್ತಬ್ದತೆಯನ್ನು ತಾಳಿದಂತೆ