ಈ ಪುಟವನ್ನು ಪ್ರಕಟಿಸಲಾಗಿದೆ

ಅಂಕುರಾಭಿವೃದ್ಧಿ
೨೭

ಆಗಿತ್ತು. ಕುಂಜವನದೊಳಗಿನ ವಿವಿಧ ಪುಷ್ಪಗಳ ಸುಗಂಧವನ್ನು ಮಂದಮಾರುತನು ಹೊತ್ತೊಯ್ಯದ್ದದ್ದರಿಂದ ಆ ಪ್ರದೇಶವು ವಿವಿಧ ಪುಷ್ಪಗಳ ಮಿಶ್ರ ಸುಗಂಧದಿಂದ ತುಂಬಿ ಸೂಸುತ್ತಿತ್ತು. ಆಗ ಚಂದ್ರಮಂಡಲವು ಪುಷ್ಕರಣಿಯಲ್ಲಿ ಸ್ವಚ್ಛವಾಗಿ ಪ್ರತಿಫಲಿಸಿ ಅದರ ಮನೋಹರತ್ವಕ್ಕೆ ಕಳೆಯೇರಿತ್ತು. ಇಂಥ ಮನೋಹರ ಪ್ರಸಂಗಗಳಿಂದ ಉಲ್ಲಸಿತಳಾದ ಆ ತರುಣಿಯು ಪುಷ್ಕರಣಿಯ ದಂಡೆಯಲ್ಲಿ ಕಟ್ಟಿದ್ದ ಕ್ರೀಡಾ ನೌಕೆಯನ್ನೇರಿ ಬಿಚ್ಚಿ, ಬಡಬಡಹುಟ್ಟು ಹಾಕುತ್ತ ನೌಕೆಯನ್ನು ಮಧ್ಯದ ಕಡೆಗೆ ಸಾಗಿಸಿದಳು, ಕ್ಷಣಮಾತ್ರದಲ್ಲಿ ನೌಕೆಯು ಧ್ವಜಸ್ತಂಭವನ್ನು ಮುಟ್ಟಿತು. ಆಗ ಮೆಹರ್ಜಾನಳು ನೌಕೆಯನ್ನು ಸ್ತಂಭಕ್ಕೆ ಕಟ್ಟಿ, ಆಕಾಶದಲ್ಲಿ ಲಕಲಕಿಸುತ್ತಿದ್ದ ಚಂದ್ರಬಿಂಬವನ್ನು ಕೌತಕದಿಂದ ನೋಡಹತ್ತಿದಳು. ಆಗ ಆ ಸ್ವಚ್ಛಂದ ವೃತ್ತಿಯ ರಸಿಕ ತರುಣಿಯ ಹೃದಯವನ್ನು ರಾಮರಾಜನು ತಟ್ಟನೆ ಪ್ರವೇಶಿಸಲು, ಹಲವು ಕಲ್ಪನಾ ತರಂಗಗಳು ಆಕೆಯ ಹೃದಯದಲ್ಲಿ ಉತ್ಪನ್ನವಾಗಿ ಆಕೆಗೆ ವಿರಹದ ಭಾವನೆಯಾಗಹತ್ತಿತು. ಆಗ ಆಕೆಯು ಮಂಜುಳ ಸ್ವರದಿಂದ.

ರಾಗ (ಭಾವ ಕಲ್ಯಾಣ)
ಹೇರಿ ಆಜ ಸಖೀರಿ ಮೆ ಕ್ಯಾ ಕಹು ಆಪನೇ ಜೀಯಾಕೀ ಬಾತ |
ಹೇರಿ ಆಜ ||
ಮೇರೆ ಮನ ಸಖೀ ಪ್ಯಾರೇಕೀ ಮುರತ, ಘಡಿಫಲ ಛೀನದೀನ ರಾತ ||
ಹೇರಿ ಆಜ ||

ಎಂದು ಗಾಯನ ಮಾಡಿದ ಹಿಂದುಸ್ಥಾನಿ ಖ್ಯಾಲಿಯ ಸುಂದರ ತಾನು ಬೆಳದಿಂಗಳಂತೆ ದಶದಿಕ್ಕುಗಳಲ್ಲಿ ಪಸರಿಸಿ, ನಾದಬ್ರಹ್ಮದ ಆನಂದದಿಂದ ಯಾವತ್ತು ಸೃಷ್ಟಿಯು ಡೋಲಾಯಮಾನವಾಗಹತ್ತಿತ್ತು. ! ಈ ಮನೋಹರ ಪ್ರಸಂಗವನ್ನೆಲ್ಲ ಕಣ್ಮಟ್ಟ ನೋಡಿ ಮಧುರ ಗಾಯನವನ್ನು ಕಿವಿಮುಟ್ಟಿ ಕೇಳಿ ಧನ್ಯತೆಯನ್ನು ಪಡೆದಿದ್ದ ಒಬ್ಬ ತರುಣನು ಆ ಪುಷ್ಕರಣಿಯ ಪೂರ್ವದಂಡೆಯ ಮೇಲಿದ್ದ ಒಂದು ಅಶೋಕ ವೃಕ್ಷದ ಬುಡದಲ್ಲಿ ನಿಂತುಕೊಂಡು ಮೆಹರ್ಜಾನಳ ದಿವ್ಯಮೂರ್ತಿಯನ್ನು ಧ್ಯಾನಿಸಹತ್ತಿದನು. ಆನಂದದ ಭಯದಲ್ಲಿ ಆತನ ಶರೀರವು ಡೋಲಾಯಮಾನವಾಗಹತ್ತಿತು. ಬರುಬರುತ್ತ ಗಾನ ತಲ್ಲೀನತೆಯಲ್ಲಿ ಆತನು ಜಯದೇವ ಕವಿಯದೊಂದು ಅಷ್ಟಪದವಿಯನ್ನು ಸುಸ್ವರದಿಂದ ಗಾಯನಮಾಡಹತ್ತಿದನು.

ನಿಭೃತನಿಕುಂಜಗೃಹಂ ಗತಯಾ ನಿಶಿರಹಸಿ ನೀಲಿಯ ವಸಂತಂ ||
ಚಕಿತ ವಿಲೋಕಿತ ಸಕಲ ದಿಶಾರತಿ ರಭಸ ಭರೇಣ ಹಸಂತಂ ||