ಮೂಢೆಯ ಹಾಗೆ ಸುಮ್ಮನೆ ಯಾಕೆ ನಿಂತುಕೊಂಡೇ ? ನಿನ್ನ ಮಾತನ್ನು ಕೇಳಿ ಮಹಾರಾಜರಿಗೆ ಬಹಳ ಸಂತೋಷವಾಗಿರಬಹುದು. ಆ ಸಂತೋಷದ ಸುದ್ದಿಯನ್ನು ಕೇಳಿದ ಬಳಿಕ ನನ್ನನ್ನು ಕಾಣದೆ ಅವರು ಹೋಗತಕ್ಕವರಲ್ಲ. ಆದರೆ ಕೃಷ್ಣದೇವ ಮಹಾರಾಜರ ನೌಕರಿಯ ಮುಂದೆ ಅವರ ಆಟವೇನು ನಡೆಯುವದು ? ನಾನು ಬಸುರಿ ಎಂಬ ಸುದ್ದಿಯನ್ನು ಕೇಳಿದ ಬಳಿಕ ಅವರು ನನ್ನನ್ನು ಒಬ್ಬಳನ್ನೇ ಬಿಟ್ಟು ವಿಜಯನಗರದಲ್ಲಿ ಇರದೆ, ಇನ್ನು ಒಂದೆರಡು ದಿನಗಳಲ್ಲಿ ನನ್ನ ಬಳಿಗೆ ಬರಬಹುದು. ಮಾರ್ಜೀನೆ ನಿನಗೆ ಏನು ಅನ್ನಿಸಿತು ಹೇಳು, ಎಂದು ಕೇಳಿದಳು. ಆಗ ಮಾರ್ಜೀನೆಗೆ ಏನು ಉತ್ತರ ಕೊಡಬೇಕೆಂಬುದು ತಿಳಿಯದೆ ಆಕೆಯು ಸುಮ್ಮನೆ ನಿಂತುಕೊಂಡಳು. ಅದನ್ನು ನೋಡಿ ಮೆಹರ್ಜಾನಳು ಮತ್ತೆ ಆಕೆಯನ್ನು ಕುರಿತು-ಮಾರ್ಜೀನೆ, ಹೀಗೆ ಯಾಕೆ ದೆವ್ವ ಬಡಿದವರ ಹಾಗೆ ನಿಂತುಕೊಂಡೆ ಮಾತಾಡಬಾರದೆ ? ಮಹಾರಾಜರು ಕೊಟ್ಟ ಜೀನಸಾದರೂ ಯಾವದು ತೋರಿಸು, ಎಂದು ಅನ್ನುತ್ತಿರಲು, ಆಕೆಯ ದೃಷ್ಟಿಯು ಧನಮಲ್ಲನ ಕಡೆಗೆ ತಿರುಗಿತು. ಆಗ ಆಕೆಯು ತಿರಸ್ಕರದಿಂದ ಅವನನ್ನು ಕುರಿತು - ನೀನು ಅತ್ತ ಹೋಗೋ ! ಈ ಟೊಣಪನು ಇಲ್ಲಿ ಯಾಕೆ ಬಂದಿರುತ್ತಾನೆ. ನಡೆ ಅತ್ತ, ಎಂದು ಒಸಕ್ಕನೆ ಅವನ ಮೈಮೇಲೆ ಹೋಗಿ ನುಡಿಯಲು ಧನಮಲ್ಲನು ವಿಲಕ್ಷಣ ಪ್ರಕಾರದಿಂದ ನಕ್ಕನು. ಆತನು ಗಟ್ಟಿಯಾಗಿ ನಗಲಿಲ್ಲ. ಸುಮ್ಮನೆ ನಗೆಯ ಝಳಕು ಮಾತ್ರ ಆತನ ಮೋರೆಯ ಮೇಲೆ ತೋರಿತು, ಆತನು ಮಹಾ ಮೂಢನಂತೆ ಮೆಹರ್ಜಾನಳನ್ನು ನೋಡುತ್ತ ನಿಂತಲ್ಲಿ ಸುಮ್ಮನೆ ನಿಂತು, ಕೆಲವು ಹೊತ್ತಿನ ಮೇಲೆ ಅಲ್ಲಿಂದ ಹೊರಟು ಹೋದನು. ಆಗ ಮಾರ್ಜೀನೆಯು, ರಾಮರಾಜನು ಕೊಟ್ಟಿದ್ದ ಎರಡು ಥೈಲಿಗಳನ್ನು ಮೆಹರ್ಜಾನಳ ಕೈಯಲ್ಲಿ ಕೊಡಲು, ಒಂದರಲ್ಲಿ ಒಂದು ಪತ್ರವೂ, ಮತ್ತೊಂದರಲ್ಲಿ ಒಂದು ಮುದ್ರೆಯ ಉಂಗುರವೂ ಇದ್ದವು. ಮೆಹರ್ಜಾನಳು ಉತ್ಸುಕತೆಯಿಂದ ಪತ್ರವನ್ನು ಓದಲು, ಸಂತಾಪದಿಂದ ಆಕೆಯ ಮೈಮೇಲಿನ ಎಚ್ಚರವು ತಪ್ಪಿದಂತಾಯಿತು ! ಈ ಸಂತಾಪವೇ ಮುಂದೆ ಆಕೆಯ ಪ್ರಯಾಣಕ್ಕೆ ಕಾರಣವಾಯಿತೆಂದು ಹೇಳಬಹುದು.
****