ಈ ಪುಟವನ್ನು ಪ್ರಕಟಿಸಲಾಗಿದೆ

೪೪
ಕನ್ನಡಿಗರ ಕರ್ಮಕಥೆ

೫ನೆಯ ಪ್ರಕರಣ

ಸ್ರೀ ಸಾಹಸ

ರಾಮರಾಜನು ಬರೆದಿದ್ದ ಪತ್ರವು ತೀರ ದೊಡ್ಡದೂ ಇದ್ದಿಲ್ಲ, ತೀರ ಸಣ್ಣದೂ ಇದ್ದಿಲ್ಲ. ಮೆಹರ್ಜಾನಳು ಆ ಪತ್ರದ ಮೊದಲನೆಯ ವಾಕ್ಯವನ್ನು ಓದಿದ ಕೂಡಲೆ ಆಕೆಯ ಮೋರೆಯ ಲಕ್ಷಣವು ಹ್ಯಾಗೆ ಹ್ಯಾಗೋ ಆಯಿತು. ಆಕೆಯ ನೇತ್ರಗಳು ವಿಸ್ತರಿಸಿದವು, ಆಕೆಗೆ ಉಸುರು ಕಟ್ಟಿದ ಹಾಗೆ ಆಗಹತ್ತಿತು. ಆಕೆಯ ಕೈಗಳು ಗದಗದ ನಡುಗಹತ್ತಿದವು, ಮೈ ಬೆವತಿತ್ತು, ತುಟಿಗಳು ಕಂಪಿಸಹತ್ತಿದವು, ಅರೆಕ್ಷಣದಲ್ಲಿ ಆಕೆಯ ಗಲ್ಲಗಳು ನಿಸ್ತೇಜವಾಗಿ ಅವುಗಳಲ್ಲಿಯ ಗುಲಾಬಿ ಬಣ್ಣದ ಹೊಳಪು ಅಡಗಿತು. ಇನ್ನೊಂದು ಕಣದಲ್ಲಿ ಆಕೆಯ ಕಣ್ಣುಗಳೂ ನೀರಿನಿಂದ ತುಂಬಿದವು. ಮತ್ತೊಂದು ಕ್ಷಣದಲ್ಲಿ ಆಕೆಯ ಗಲ್ಲಗಳೂ ಕಿವಿಗಳೂ ಕೆಂಪಾದವು, ಮುಖದಲ್ಲಿ ಸಂತಾಪವು ವ್ಯಕ್ತವಾಗಹತ್ತಿತು, ಹುಬ್ಬುಗಳು ಅಕುಂಚಿತವಾದವು. ಆಕೆಯು ಅವಡುಗಚ್ಚಿ ಮನಸ್ಸಿನಲ್ಲಿ ಯಾವದೋ ಒಂದು ಮಾತಿನ ನಿಶ್ಚಯವನ್ನು ಮಾಡಿದ ಹಾಗೆ ತೋರಿತು. ಮುಖದಿಂದ ಹೊರಬೀಳಬೇಕೆಂದಿರುವ ಕೆಲವು ಉದ್ಗಾರಗಳನ್ನು ಆಕೆಯು ನಿಶ್ಚಯಪೂರ್ವಕವಾಗಿ ಬಿಗಿಹಿಡಿದಿರುವಳೆಂಬಂತೆ ಸ್ಪಷ್ಟವಾಗಿ ಕಾಣುತ್ತಿತ್ತು. ಹೊರಬೀಳುವ ಅಶ್ರುಗಳನ್ನು ನಿಲ್ಲಿಸಲಿಕ್ಕೂ ದುಃಖದ ವೇಗವನ್ನು ತಡೆಯಲಿಕ್ಕೂ ಆಕೆಯು ಯತ್ನಿಸುತ್ತಿರುವ ಹಾಗೆ ಕಂಡಿತು. ಇದನ್ನೆಲ್ಲ ಮಾರ್ಜೀನೆಯು ನೋಡುತ್ತಿದ್ದಳು. ಮೊದಲು ಮೆಹರ್ಜಾನಳ ಮುಖ ಲಕ್ಷಣವನ್ನು ನೋಡಿದಾಗ ಆಕೆಯನ್ನು ಏನೂ ಕೇಳಬಾರದೆಂದು ಮಾರ್ಜೀನೆಯು ನಿಶ್ಚಯಿಸಿದಳು. ಮುಂದೆ ಸ್ವಲ್ಪ ಹೊತ್ತಿನ ಮೇಲೆ ಆಕೆಯು ಧೈರ್ಯಮಾಡಿ ಏನೋ ಕೇಳಬೇಕೆಂದು ಹವಣಿಸಲು, ಮೆಹರ್ಜಾನಳು ಮೂಗಿನ ಮೇಲೆ ಬೊಟ್ಟಿಟ್ಟು ಸುಮ್ಮನಿರೆಂದು ನಿಬಂಧಿಸಿದಳು. ಆ ಮೇಲಂತೂ ಮೆಹರ್ಜಾನಳನ್ನು ಕೇಳಲಿಕ್ಕೆ ಮಾರ್ಜೀನೆಗೆ ಧೈರ್ಯವೇ ಆಗಲಿಲ್ಲ; ಈ ಮೊದಲೇ ಮೆಹರ್ಜಾನಳನ್ನು ನೋಡಿದವರು ಆಕೆಯ ಈಗಿನ ಉಗ್ರ ಮೂರ್ತಿಯನ್ನು ನೋಡಿದ್ದರೆ, ಈಕೆಯು ಮೆಹೆರ್ಜಾನಳೇ ಆಗಿರಬಹುದೇನೆಂಬ