ಈ ಪುಟವನ್ನು ಪ್ರಕಟಿಸಲಾಗಿದೆ

೫೦
ಕನ್ನಡಿಗರ ಕರ್ಮಕಥೆ

ರಾಮರಾಜನಂಥ ಅಯೋಗ್ಯ ನಡತೆಯ ಹಿಂದುಗಳ ಸಂಬಂಧದ ತಿರಸ್ಕಾರವು ನನ್ನಲ್ಲಿಯೂ ಉತ್ಪನ್ನವಾಗುತ್ತದೆ ; ಅಂಥವರ ಶಾಸನವಾದರೆ ನನಗೆ ಅನ್ಯಾಯವಾಗಿಯೂ ತೋರುವುದಿಲ್ಲ ; ಆದರೂ ಮೆಹರ್‌, ನೀನು ಹೀಗೆ ಕೃತಘ್ನಳಾಗುವದು ನನಗೆ ಸರಿದೋರುವದಿಲ್ಲ, ಎಂದು ಹೇಳಿದಳು. ಆಕೆಯ ಮಾತಿನಿಂದ ಮೆಹರ್ಜಾನಳ ಮನಸ್ಸು ತಿರುಗಲಿಲ್ಲ. ಆ ಅಭಿಮಾನಸ್ವಭಾವದ ತರುಣಿಯು ಒಂದೇ ಹಟವನ್ನು ಹಿಡಿದಳು. ಆಗ ಮಾರ್ಜೀನೆಯು - ಮೆಹೆರ್, ನೀನು ಹೀಗೆ ಹಟಮಾಡಿದರೆ ಉಪಾಯವಿಲ್ಲ. ನಿನ್ನ ಮಾತಿಗೆ ವಿರುದ್ದವಾಗಿ ನಾನು ನಡೆಯಲಾರೆನು, ಇನ್ನು ಕುಂಜವನದಿಂದ ಹೊರಟುಹೋಗುವ ಉಪಾಯವನ್ನು ಮಾಡುವೆನು. ಈ ಪ್ರಸಂಗದಲ್ಲಿ ನೀನು ನನ್ನ ಮಾತನ್ನು ಕೇಳದಿದ್ದರೆ ಕೆಲಸವಾಗುವದಿಲ್ಲ. ಧನಮಲ್ಲನ ಮನಸ್ಸನ್ನು ಒಲಿಸಿಕೊಂಡ ಹೊರತು ನಾವು ಇಲ್ಲಿಂದ ಪಾರಾಗಿ ಹೋಗಲಾರೆವು. ಧನಮಲ್ಲನನ್ನು ಕಂಡರೆ ನೀನು ಸೇರುವದಿಲ್ಲ. ಆತನು ಕಣ್ಣಿಗೆ ಬಿದ್ದ ಕೂಡಲೆ ಕವಕ್ಕನೆ ಆತನ ಮೈಮೇಲೆ ಹೋಗುತ್ತಿ ? ಅಂದಬಳಿಕ ನಾವು ಇಲ್ಲಿಂದ ಹ್ಯಾಗೆ ಪಾರಾಗಿ ಹೋಗಬೇಕು ? ಧನಮಲ್ಲನ ಕಾವಲು, ಕೃಷ್ಣಸರ್ಪದ ಕಾವಲು ಇದ್ದ ಹಾಗೆ ಇರುತ್ತದೆ.

ಮಾರ್ಜೀನೆಯ ಈ ಮಾತುಗಳನ್ನು ಕೇಳಿ, ಮೆಹರ್ಜಾನಳು - ಮಾರ್ಜೀನೆ, ಧನಮಲ್ಲನನ್ನು ಕಂಡರೆ ನನಗೆ ಬಹಳ ತ್ರಾಸವಾಗುತ್ತದೆ. ಆತನು ಕೃಷ್ಣಸರ್ಪದಂತೆ ನನಗೆ ಕಾಣುವದರಿಂದ, ಆತನನ್ನು ನೋಡಿದರೆ ನನಗೆ ಅಂಜಿಕೆಯೂ ಬರುತ್ತದೆ; ಆದರೆ ಈಗ ನಾನು ಆತನ ಉಸಾಬರಿಗೆ ಬರುವದಿಲ್ಲ. ನಾನು ಆತನ ಸಂಗಡ ಮಾತಾಡುವ ಪ್ರಸಂಗವನ್ನೇ ನೀನು ತರಬೇಡ. ನೀನು ಬೇಕಾದದ್ದು ಮಾಡು, ಇಂದು ಸಂಜೆಯೊಳಗಾಗಿ ನಾವು ಕುಂಜವನವನ್ನು ಬಿಟ್ಟು ಹೋಗತಕ್ಕದ್ದು, ಎಂದು ಹೇಳಿದಳು. ಆಗ ಮಾರ್ಜೀನೆಯು ಧನಮಲ್ಲನ ಬಳಿಗೆ ಹೋಗಿ - ಧನಮಲ್ಲ, ಅವ್ವನವರು ಈಗಲೇ ಸಂಗವಪಲ್ಲಿಯೊಳಗಿನ ಪೀರನ ಗೋರಿಯ ದರ್ಶನಕ್ಕಾಗಿ ಹೋಗಬೇಕೆನ್ನುತ್ತಾರೆ ; ಶಹಾನವಾಜಪೀರರ ದರ್ಶನವಾಗುವವರೆಗೆ ಅವರು ಬಾಯಲ್ಲಿ ನೀರು ಹಾಕುವದಿಲ್ಲವಂತೆ. ನಿನ್ನೆ ರಾತ್ರಿ ಒದಗಿದ ಅನರ್ಥವನ್ನು ನೀನು ಕಣ್ಣಮುಟ್ಟಿ ನೋಡಿರುವಿಯಷ್ಟೇ ? ನಿನ್ನೆ ಬೆಳಗು ಮುಂಜಾನೆ ಪೀರಸಾಹೇಬರು ಅವ್ವನವರ ಕನಸಿನಲ್ಲಿ ಬಂದು-ನೀನು ನನ್ನ ದರ್ಶನಕ್ಕೆ ಬಾ, ಅಂದರೆ ಎಲ್ಲ ಅರಿಷ್ಟಗಳ ನಿವಾರಣವಾಗುವದು, ಎಂದು ಹೇಳಿದರಂತೆ ! ಪೀರಸಾಹೇಬರ ಮೇಲೆ ಅವ್ವನವರ ಭಕ್ತಿಯು ಬಹಳ. ಅವರು ಈಗ ದರ್ಶನಕ್ಕೆ ಹೋಗಿಯೇ ತೀರಬೇಕೆಂದು ಹಟ ಹಿಡಿದಿರುವರು, ಹೋಗು ರಥವನ್ನು