ಈ ಪುಟವನ್ನು ಪ್ರಕಟಿಸಲಾಗಿದೆ

ಸ್ರೀ ಸಾಹಸ
೫೧

ಹೂಡಿಕೊಂಡು ಬಾ, ಎಂದು ಹೇಳಲು, ಧನಮಲ್ಲನು ಬೆರಗಾಗಿ ಮಾರ್ಜೀನೆಯ ಮೋರೆಯನ್ನು ನೋಡುತ್ತ ನಿಂತುಕೊಂಡನು. ಆಗ ಮಾರ್ಜೀನೆಯು ಪುನಃ ಆತನನ್ನು ಕುರಿತು-ಎಲಾ ಹೀಗೆ ಹುಚ್ಚನ ಹಾಗೆ ಸುಮ್ಮನೆ ನೋಡುತ್ತ ಯಾಕೆ ನಿಂತುಕೊಂಡೇ ? ನಿನಗೆ ಅವ್ವನವರ ಹಟಮಾರಿ ಸ್ವಭಾವವು ಗೊತ್ತಿಲ್ಲವೆ ? ಅವರ ಬಾಯಿಂದ ಬಂದದ್ದು ಆಗಲೇ ಬೇಕು. ಅದರಲ್ಲಿ ಇದು ಪೀರನ ದರ್ಶನದ ಕೆಲಸವು, ದರ್ಶನವಾದ ಹೊರತು ಅವರು ನಿಶ್ಚಯವಾಗಿ ಬಾಯಲ್ಲಿ ನೀರು ಹಾಕುವುದಿಲ್ಲ. ಹೋಗು ಸುಮ್ಮನೆ ರಥಕ್ಕೆ ಎತ್ತುಗಳನ್ನು ಹೂಡಿ ಸಿದ್ಧಮಾಡಿಕೊಂಡು ಬಾ, ನೀನೇ ರಥವನ್ನು ಹೊಡೆಯುವೆಯಂತೆ, ಎಂದು ಹೇಳಿದಳು.

"ನೀನೇ ರಥವನ್ನು ಹೊಡೆಯುವೆಯಂತೆ" ಎಂಬ ವಾಕ್ಯವು ಕಿವಿಗೆ ಬಿದ್ದ ಕೂಡಲೆ ಧನಮಲ್ಲನು ಗೋಣುಹಾಕಿ ಸಮ್ಮತಿಯನ್ನಿತ್ತು ರಥವನ್ನು ಕೂಡಿಕೊಂಡು ಬರುವದಕ್ಕಾಗಿ ಹೋದನು. ಸ್ವಲ್ಪ ಹೊತ್ತಿನಲ್ಲಿಯೇ ರಥವು ಸಂಗನಪಲ್ಲಿಗೆ ಹೊರಟಿತು, ಹಾದಿಯಲ್ಲಿ ಹೋಗುವಾಗ ಮೆಹರ್ಜಾನಳಾಗಲಿ, ಮಾರ್ಜೀನೆಯಾಗಲಿ, ಚಕಾರ ಶಬ್ದವನ್ನು ಮಾತಾಡಲಿಲ್ಲ. ಇಬ್ಬರೂ ವಿಚಾರಮಗ್ನರಾಗಿದ್ದರು. ಮೇಲಾಗಿ ಧನಮಲ್ಲನಿದ್ದದ್ದರಿಂದ ಅವರು ಯಾವ ಮಾತೂ ಆಡುವಹಾಗಿದ್ದಿಲ್ಲ. ಮೆಹರ್ಜಾನಳು ಸಂಸಾರಗೇಡಾದದ್ದಕ್ಕಾಗಿ ಮಾರ್ಜೀನೆಯು ಬಗೆ ಬಗೆಯಾಗಿ ಆಲೋಚಿಸುತ್ತ ಕುಳಿತುಕೊಂಡಿದ್ದಳು. ಮೆಹರ್ಜಾನಳು ತಾನು ಕುಂಜವನದಿಂದ ಆದಷ್ಟು ಬೇಗನೆ ದೂರ ಯಾವಾಗ ಹೋದೇನೆಂಬ ಒಂದೇ ವಿಚಾರದಲ್ಲಿ ಮಗ್ನಳಾಗಿದ್ದಳು. ಕುಂಜವನದಿಂದ ಸಂಗನಪಲ್ಲಿಯು ಆರು ಹರಿದಾರಿಯಿತ್ತು. ಅಲ್ಲಿಯ ದರ್ಗಾದ ಪೀರನು ಬಹು ಜಾಗ್ರತನೆಂಬ ಖ್ಯಾತಿಯಿದ್ದದ್ದರಿಂದ, ಬಹುಜನ ಮುಸಲ್ಮಾನರು ದಿನಾಲು ದರ್ಶನಕ್ಕೆ ಬರುತ್ತಿದ್ದರು, ಅಲ್ಲಿಯ ಉತ್ಪನ್ನವು ವಿಶೇಷವಾಗಿದ್ದರಿಂದಲೂ, ಪ್ರತಿ ಗುರುವಾರ, ಶುಕ್ರವಾರ ಫಕೀರರಿಗೂ, ಬಡಬಗ್ಗರಿಗೂ ವಿಶೇಷವಾಗಿ ದಕ್ಷಿಣೆ ದಾನಗಳು ಸಿಗುತ್ತಿದ್ದದ್ದರಿಂದಲೂ, ದೊಡ್ಡ ಜಾತ್ರೆ ಕೂಡಿದಂತೆ ಅಲ್ಲಿ ಜನರು ನೆರೆಯುತ್ತಿದ್ದರು. ಸಂಗನಪಲ್ಲಿಯು ವಿಜಯನಗರದ,ಹಾಗೂ ಮುಸಲ್ಮಾನ ರಾಜ್ಯಗಳ ಮೇರೆಯಲ್ಲಿದ್ದು, ಅದು ವಿಜಯನಗರದ ಅರಸರ ಸ್ವಾಧೀನದಲ್ಲಿತ್ತು. ಆ ಊರಲ್ಲಿ ಹಿಂದೂ ಜನರ ವಸ್ತಿಯೇ ವಿಶೇಷವಾಗಿತ್ತು. ಜನವಾಡಿಕೆಯಂತೆ ಪೀರಸಾಹೇಬರ ಮೇಲೆ ಮೆಹರ್ಜಾನಳ ಭಕ್ತಿಯಾದರೂ ಇತ್ತು. ಆಕೆಯು ಆಗಾಗ್ಗೆ ಪೀರನ ದರ್ಶನಕ್ಕಾಗಿ ದರ್ಗೆಗೆ ಬರುತ್ತಿದ್ದಳು. ಮನಸ್ಸಿಗೆ ಬಹಳ ಅಸಮಾಧಾನವಾದಾಗ, ಪೀರನದರ್ಶನಕ್ಕೆ ಹೋಗುವದು ಆಕೆಯ ವಾಡಿಕೆಯ ಕ್ರಮವಾಗಿತ್ತು. ಎತ್ತುಗಳು