ಈ ಪುಟವನ್ನು ಪ್ರಕಟಿಸಲಾಗಿದೆ
೬೦
ಕನ್ನಡಿಗರ ಕರ್ಮಕಥೆ
ಧನಮಲ್ಲನೂ ಸಿಟ್ಟು ಬೆಂಕಿಯಾಗಿದ್ದನು. ಆತನ ಕಣ್ಣುಗಳು ಕೆಂಪಗೆ ಗುಲಗುಂಜೆಯ ಹಾಗೆ ಆಗಿದ್ದವು. ಆತನ ಬಾಹುಗಳು ಸ್ಫುರಣಹೊಂದಿದವು. ಅಷ್ಟರಲ್ಲಿ ರಾಮರಾಜನು ಮತ್ತೆ ಧನಮಲ್ಲನ ಮೈಮೇಲೆ ಹೋಗಿ-ನಡೆ, ಹಾಳಾಗಿ ಹೋಗು, ನನ್ನೆದುರಿಗೆ ನಿಲ್ಲಬೇಡ, ಎಂದು ನುಡಿದು, ಅಶ್ವಾರೂಢನಾಗಿ ಕುಂಜವನದಿಂದ ಹೊರಬಿದ್ದು, ವಿಜಯನಗರದ ಕಡೆಗೆ ಸಾಗಿದನು. ಆಗ ಧನಮಲ್ಲನು ಅತ್ಯಂತ ಸಂತಪ್ತ ಮುದ್ರೆಯಿಂದ ರಾಮರಾಜನನ್ನು ನೋಡುತ್ತ, ಸ್ಥಳಬಿಟ್ಟು ಕದಲದೆ ಅವಡುಗಚ್ಚಿ ತಲೆಯಲ್ಲಾಡಿಸಿದನು. ಅತ್ತ ರಾಮರಾಜನು ಪಶ್ಚಾತ್ತಾಪದಿಂದ ವಿಜಯನಗರಕ್ಕೆ ಸಾಗಲು, ಧನಮಲ್ಲನು ಆ ರಾತ್ರಿ ಕುಂಜವನದಲ್ಲಿ ಉಳಿದುಕೊಂಡು ತುಂಗಭದ್ರೆಯನ್ನು ದಾಟಿ ಉತ್ತರದಿಕ್ಕಿಗೆ ಸಾಗಿದನು. ಆತನ ಹೃದಯದಲ್ಲಿ ತನ್ನ ಒಡೆಯನ ಸೇಡುತೀರಿಸಿಕೊಳ್ಳುವ ವಿಚಾರವು ಉತ್ಪನ್ನವಾಗಿ, ಅದು ಭರದಿಂದ ಬೆಳೆಯತೊಡಗಿತು.
****