ಈ ಪುಟವನ್ನು ಪ್ರಕಟಿಸಲಾಗಿದೆ

೬೧

೭ನೆಯ ಪ್ರಕರಣ

ಮನಸ್ಸಿನ ತಳಮಳಿಕೆ

ಹೀಗೆ ರಾಮರಾಜನು ಅಸ್ವಸ್ಥ ಮನಸ್ಸಿನಿಂದ ವಿಜಯನಗರದ ಕಡೆಗೆ ಸಾಗಿದ್ದನು. ಮೆಹರ್ಜಾನಳ ಶೋಧವಾಗದ್ದರಿಂದ ಆತನಿಗೆ ಹುಚ್ಚು ಹಿಡಿದಹಾಗಾಗಿತ್ತು. ತಾನು ಮೆಹರ್ಜಾನಳಿಗೆ ಪತ್ರ ಬರೆದು ಅಪರಾಧ ಮಾಡಿದೆನೆಂತಲೂ, ಧನಮಲ್ಲನು ದುರ್ಲಕ್ಷದಿಂದ ಅವರನ್ನು ಹೋಗಗೊಟ್ಟು ಅಪರಾಧ ಮಾಡಿದನೆಂತಲೂ ರಾಮರಾಜನು ಭಾವಿಸಿ, ನಡನಡುವೆ ಸಂತಾಪಗೊಳ್ಳುವನು. ಆತನ ಸಂತಾಪದ ಫಲವನ್ನು ಆತನ ಕುದುರೆಯು ಭೋಗಿಸಬೇಕಾಯಿತು. ಆತನು ಸಿಟ್ಟಿನಿಂದ ಒಮ್ಮೆ ಕುದುರೆಯ ಲಗಾಮನ್ನು ಜಗ್ಗುವನು, ಮತ್ತೊಮ್ಮೆ ಸಿಟ್ಟಿನಿಂದ ಕುದುರೆಯನ್ನು ಕೊಸೆಯುವನು, ಇನ್ನೊಮ್ಮೆ ಸಂತಾಪದಿಂದ ಕುದುರೆಯನ್ನು ಚಬಕದಿಂದ ಹೊಡೆಯುವನು, ತನ್ನ ಯಜಮಾನನು ಈ ದಿನ ಹೀಗೆ ಯಾಕೆ ಮಾಡುವನೆಂಬದು ಆತನ ಕುದುರೆಗೆ ತಿಳಿಯದಾಯಿತು. ರಾಮರಾಜನ ಕುದುರೆಯು ನಿಷ್ಕಳಂಕವಾದದ್ದು. ಅದರ ಮೇಲೆ ರಾಮರಾಜನ ಪ್ರೀತಿಯೂ ಬಹಳ. ತನ್ನ ಒಡೆಯನ ಮನಸ್ಸಿನಲ್ಲಿ ವಿಜಯನಗರಕ್ಕೆ ಬೇಗನೆ ಮುಟ್ಟುವದಿರುತ್ತದೆಂದು ತಿಳಿದು ಆ ಮೂಕಪ್ರಾಣಿಯು ನಾಗಾಲೋಟದಿಂದ ಬಹು ವೇಗದಿಂದ ಓಡಹತ್ತಿತು. ರಾಮರಾಜನು ಎಷ್ಟು ಸಮಾಧಾನ ಗೊಳಿಸಿದರೂ, ಅದು ತನ್ನ ವೇಗವನ್ನು ಕಡಿಮೆ ಮಾಡಲಿಲ್ಲ. ಇಷ್ಟು ವೇಗದಿಂದ ಒಂದೇಸಮನೆ ಹೋದರೆ ಕುದುರೆಯು ದಣಿದೀತೆಂಬ ಎಚ್ಚರವೂ ರಾಮರಾಜನಿಗೆ ಉಳಿಯಲಿಲ್ಲ. ಬೇಗನೆ ವಿಜಯನಗರಕ್ಕೆ ಮುಟ್ಟುವದು ರಾಮರಾಜನಿಗೆ ಇಷ್ಟುವಾದದ್ದರಿಂದ, ರಾಮರಾಜನು ಕುದುರೆಯ ವೇಗವನ್ನು ಕಡಿಮೆ ಮಾಡುವ ಭರಕ್ಕೆ ಹೋಗಲಿಲ್ಲ. ಆ ದಿವ್ಯಾಶ್ವವು ಅವಿರಾಮವಾದ ವೇಗದಿಂದ ನಡೆದು, ರಾಮರಾಜನ ಮಂದಿರದ ಬಾಗಲಿಗೆ ಮುಟ್ಟಿತು. ಹೀಗೆ ಅಕಸ್ಮಾತ್ತಾಗಿ ರಾಮರಾಜನು ಬಂದದ್ದನ್ನು ನೋಡಿ ಸೇವಕರಿಬ್ಬರು ಲಗುಬಗೆಯಿಂದ ಬಂದು ಕುದುರೆಯ ಲಗಾಮು ಹಿಡಿದರು. ರಾಮರಾಜನು ಕುದುರೆಯಿಂದ