ಇಳಿದದ್ದೊಂದೇ ತಡ, ಆ ಮೂಕ ಪ್ರಾಣಿಯು ಉಸುರಗಟ್ಟಿದಪ್ಪನೆ ನೆಲಕ್ಕೆ ಬಿದ್ದಿತು. ಆಗ ರಾಮರಾಜನು ಗಾಬರಿಯಾಗಿ ತಿರುಗಿ ನೋಡಲು, ಆತನ ಪ್ರೀತಿಯ ಕುದುರೆಯು ಪ್ರಾಣಬಿಟ್ಟಿತು. ಈ ಅನರ್ಥವನ್ನು ನೋಡಿ ರಾಮರಾಜನು ಅಸಮಾಧಾನಪಟ್ಟಿದ್ದಲ್ಲದೆ, ಇದೊಂದು ದೊಡ್ಡ ಅಪಶಕುನವಾಯಿತೆಂದು ಆತನು ಬೆದರಿದನು. ಈ ಅಪಶಕುನದ ಜೊತೆಗೆ ಮೆಹರ್ಜಾನಳ ವಿಯೋಗವಾದದ್ದೊಂದು ಅಪಶಕುನವು ರಾಮರಾಜನ ಮನಸ್ಸಿನಲ್ಲಿ ಬಂದು ಕುಳಿತುಕೊಂಡಿತು. ಇವೆರಡೂ ಅಪಶಕುನಗಳು ಜೋಡು ಗುಂಡು ರಾಮರಾಜನ ಎದೆಗೆ ಬಡೆದಂತಾದ್ದರಿಂದ, ಆತನು ವ್ಯಥೆಪಟ್ಟು ಹಾಗೇ ಒಳಗೆ ಹೋಗಿ ಪೋಷಾಕು ಸಹ ಇಳಿಸದೆ ಮಂಚದ ಮೇಲೆ ಬಿದ್ದುಕೊಂಡನು, ಆಗ ಆತನಿಗೆ ಎಷ್ಟು ವ್ಯಸನವಾಗಿರಬಹುದೆಂಬುದನ್ನು ವಾಚಕರೇ ತರ್ಕಿಸತಕ್ಕದ್ದು. ಆತನ ಉತ್ಸಾಹವು ಅಳಿದುಹೋಯಿತು. ಆಸೆಯು ಕುಗ್ಗಿತು, ಆತನು ಉಸುರ್ಗಳೆಯುತ್ತ ಹಾಸಿಗೆಯ ಮೇಲೆ ಹೊರಳಾಡುತ್ತಿರಲು, ಸೇವಕನು ಬಂದು ತಿರುಮಲರಾಯರು ಭೆಟ್ಟಿಗೆ ಬಂದಿರುವರೆಂದು ವಿಜ್ಞಾಪಿಸಿದನು. ಈ ವಿಜ್ಞಾಪನೆಯಿಂದ ರಾಮರಾಜನಿಗೆ ಎಳ್ಳಷ್ಟು ಸಮಾಧಾನವಾಗಲಿಲ್ಲ. ಆತನು ಸಂತಾಪದಿಂದ ಸೇವಕನ ಮೈಮೇಲೆ ಹೋಗತಕ್ಕವನು, ಅಷ್ಟರಲ್ಲಿ ಆತನಲ್ಲಿ ವಿವೇಕವು ತಲೆದೋರಿ, ಹಾಗೆ ಹರಿಹಾಯುವದು ಸರಿಯಲ್ಲೆಂದು ತಿಳಿದು, ಆತನು ಎದ್ದು ಕುಳಿತು, ಸೇವಕನಿಗೆ ಹೋಗು, ಅವರನ್ನು ಕರೆದು ತಾ, ಎಂದು ಆಜ್ಞಾಪಿಸಿದನು. ರಾಮರಾಜನು ಬಂದಕೂಡಲೆ ತನಗೆ ಸುದ್ದಿಯನ್ನು ಹೇಳಬೇಕೆಂದು ತಿರುಮಲರಾಯನು ಸೇವಕರಿಗೆ ಆಜ್ಞಾಪಿಸಿದ್ದನು. ಅದರಂತೆ ಸೇವಕರು ಸುದ್ದಿಯನ್ನು ಹೇಳಲು, ತಿರುಮಲರಾಯನು ಕ್ಷಣವಾದರೂ ತಡೆಯದೆ ತಮ್ಮನನು ಕಾಣಲಿಕ್ಕೆ ಬಂದಿದ್ದನು. ಅಣ್ಣನು ಒಳಗೆ ಬಂದಕೂಡಲೆ ರಾಮರಾಜನು ಆತನನ್ನು ಸತ್ಕರಿಸಿ ಕುಳ್ಳಿರಿಸಿಕೊಂಡನು. ಕುಶಲ ಪ್ರಶ್ನೆಗಳಾದ ಮೇಲೆ ತಿರುಮಲರಾಯನು ರಾಮರಾಜನನ್ನು ಕುರಿತು-ತಮ್ಮಾ, ನೀನು ಹೋದ ಸುದ್ದಿ ಏನು ? ನೀನು ಬೇಗನೆ ಬಂದದ್ದು ಬಹಳ ನೆಟ್ಟಗಾಯಿತು. ನಾನು ಮೊದಲು ನಿನಗೆ ಸೂಚಿಸಿದಂತೆ ನಿನ್ನ ಲಗ್ನದ ಮುಹೂರ್ತವನ್ನು ನಾಲ್ಕೇ ದಿನಗಳಲ್ಲಿ ನಿರ್ಧರಿಸಿರುವರು. ಇಂಥ ಸುಮುಹೂರ್ತವು ಇನ್ನು ೫ ವರ್ಷಗಳಲ್ಲಿ ದೊರೆಯುವ ಹಾಗಿಲ್ಲದ್ದರಿಂದ, ಇಷ್ಟು ಅವಸರ ಮಾಡಬೇಕಾಯಿತು. ಮಹಾರಾಜರು ಒಂದೇ ಸಮನೆ ನಿನ್ನ ಹಾದಿಯನ್ನು ನೋಡುತ್ತಿರುವರು. ಇಂದು ನೀನು ಬಾರದಿದ್ದರೆ ನಾಳೆ ನಿನ್ನನ್ನು ಕರೆಕಳುಹಬೇಕೆ ಆಗುತ್ತಿತ್ತು, ಇರಲಿ ; ಮುಸಲ್ಮಾನರ ಒಳಸಂಚಿನ ಸುದ್ದಿಯೇನು? ಮಹಾರಾಜರು, ಕೂಡ ಅದನ್ನು ಕೇಳಲು ಆತುರಪಡುತ್ತಿರುವರು. ಎಂದು
ಪುಟ:Kannadigara Karma Kathe.pdf/೭೭
ಈ ಪುಟವನ್ನು ಪ್ರಕಟಿಸಲಾಗಿದೆ
೬೨
ಕನ್ನಡಿಗರ ಕರ್ಮಕಥೆ