ಕುದುರೆಯನ್ನು ತರಿಸಿ ವೇಗದಿಂದ ವಿಜಯನಗರದ ಕಡೆಗೆ ಸಾಗಿದನು.
ಮುಂದೆ ರಾಮರಾಜನಿಗೆ ೩೦ ವರ್ಷಗಳವರೆಗೆ ಮೆಹರ್ಜಾನಳ ಶೋಧವಾಗಲಿಲ್ಲ ! ಆತನು ಈ ಮೂವತ್ತು ವರ್ಷ ಒಂದೇಸಮನೆ ಆಕೆಯನ್ನು ಹುಡುಕಿಸಿದನ್ನೆನ್ನುವ ಹಾಗಿಲ್ಲ. ಮೊದಮೊದಲು ಆತನು ಒಳ್ಳೆ ಆಸಕ್ತಿಯಿಂದ ಆಕೆಯನ್ನು ಹುಡುಕಿಸಿದನು. ಆಕೆಯ ಶೋಧಕ್ಕಾಗಿ ಅಲ್ಲಲ್ಲಿ ಗುಪ್ತಚಾರರನ್ನು ಇಟ್ಟಿದ್ದನು. ಎರಡು ತಿಂಗಳಾದರೂ ಮೆಹರ್ಜಾನಳ ಗೊತ್ತೂ ಹತ್ತಲಿಲ್ಲ, ಧನಮಲ್ಲನ ಗೊತ್ತೂ ಹತ್ತಲಿಲ್ಲ. ಆಗ ಆತನು-"ಹೋದರೆ ಹೋದಳೂ. ನಾನೇನು ಆಕೆಯನ್ನು ಬಿಟ್ಟಿದಿಲ್ಲ, ಸುಖವನ್ನು ಭೋಗಿಸಬೇಕೆಂದು ಆಕೆಯ ಹಣೆಬರಹದಲ್ಲಿಯೇ ಬರೆದಿಲ್ಲ, ನಾನು ಮಾಡುವದೇನು?” ಎಂದು ಮನಸ್ಸಿನಲ್ಲಿ ಅಂದುಕೊಂಡು. ಹುಡುಕಿಸುವದನ್ನು ಬಿಟ್ಟುಕೊಟ್ಟನು ; ಆದರೆ ಆಕೆಯ ಹಳವಂಡವು ಮಾತ್ರ ಆತನಿಗೆ ಹೋಗಲಿಲ್ಲ. ಇದು ಕಡೆತನಕ ಇರತಕ್ಕದ್ದೆ ಎಂದು ರಾಮರಾಜನು ಅಂದುಕೊಳ್ಳುತ್ತಿದ್ದನು. ಹತ್ತು ಹದಿನೈದು ದಿನಗಳಿಗೊಮ್ಮೆ ಆತನು ಕುಂಜವನಕ್ಕೆ ಹೋಗುತ್ತ ಬರುತ್ತಲಿದ್ದನು. ಕುಂಜವನದ ವ್ಯವಸ್ಥೆಯನ್ನು ಮೊದಲಿನಂತೆಯೇ ಇಡಬೇಕೆಂದು ರಾಮರಾಜನ ಕಟ್ಟಪ್ಪಣೆಯಿದ್ದದ್ದರಿಂದ, ಅದರ ವ್ಯವಸ್ಥೆಯಲ್ಲಿ ಹೆಚ್ಚುಕಡಿಮೆಯಾಗಿದ್ದಿಲ್ಲ. ರಾಮರಾಜನು ಮೇಲೆ ಮೇಲೆ ಬರುತ್ತಿರುವನೆಂಬ ಭಯವು ವ್ಯವಸ್ಥಾಪಕರಿಗೆ ಇತ್ತು ಮುಂದೆ ಬರುಬರುತ್ತ ರಾಮರಾಜನ ಆಸಕ್ತಿಯು ಕಡಿಮೆಯಾಯಿತು. ರಾಜಕಾರಣದ ಸಲುವಾಗಿ ಆ ಹಾದಿಯಿಂದ ಹೋದಾಗ ಆತನು ಕುಂಜವನದೊಳಗೆ ಹೋಗಿ, ವ್ಯವಸ್ಥೆಯಲ್ಲಿ ಕೊರತೆಯಾಗಿದ್ದ ಪಕ್ಷದಲ್ಲಿ ವ್ಯವಸ್ಥಾಪಕರಿಗೆ ಸಿಟ್ಟು ಮಾಡುತ್ತಿದ್ದನು. ಹೀಗೆ ಒಂದು ವರ್ಷವು ಕಳೆದುಹೋಯಿತು. ಮತ್ತೂ ಒಂದು ವರ್ಷವು ಕಳೆದುಹೋಯಿತು ಆ ವರ್ಷದಲ್ಲಿ ರಾಮರಾಜನಿಗೆ ಕುಂಜವನದ ಇಲ್ಲವೆ ಮೆಹರ್ಜಾನಳ ಅಥವಾ ಧನಮಲ್ಲನ ಸ್ಮರಣವಾದರೂ ಆಗಿತ್ತೋ, ಇಲ್ಲವೋ ಎಂಬುದನ್ನು ಹೇಳಲಾಗುವದಿಲ್ಲ. ಕುಂಜವನದ ವ್ಯವಸ್ಥಾಪಕನು ಹತ್ತು-ಹದಿನೈದು ದಿವಸಗಳಿಗೊಮ್ಮೆ ಮುಜುರೆ ಮಾಡಲಿಕ್ಕೆ ಬಂದಾಗ ರಾಮರಾಜನು ಆತನನ್ನು ಕುರಿತು-ಕುಂಜವನದ ವ್ಯವಸ್ಥೆಯು ನೆಟ್ಟಗಿರುತ್ತದಷ್ಟೇ? ನಾವು ಯಾವಾಗ ಬಂದೇವೆಂಬದರ ನಿಯಮವಿಲ್ಲ. ಜಾಗ್ರತೆಯಿಂದ ವ್ಯವಸ್ಥೆಯನ್ನು ಕಾಯ್ದುಕೊಳ್ಳತಕ್ಕದ್ದು, ಎಂದು ಹೇಳುವನಲ್ಲದೆ ಮೆಹರ್ಜಾನಳ ಅಥವಾ ಧನಮಲ್ಲನ ವಿಷಯವಾಗಿ ಚಕಾರ ಶಬ್ದವನ್ನು ತೆಗೆಯುತ್ತಿದ್ದಿಲ್ಲ.
ಹೀಗಾಗಲಿಕ್ಕೆ ತಕ್ಕ ಕಾರಣವೂ ಒದಗಿತು ಆ ಮಹತ್ವಾಕಾಂಕ್ಷೆಯಾದ ಸರದಾರನಿಗೆ ತನ್ನ ಮಹತ್ವಾಕಾಂಕ್ಷೆಯನ್ನು ಪೂರ್ಣಮಾಡಿಕೊಳ್ಳುವ ಸಮಯವೂ,