ಈ ಪುಟವನ್ನು ಪ್ರಕಟಿಸಲಾಗಿದೆ

ವಿನಾಶವೃಕ್ಷ
೭೩

ಸಾಮಗ್ರಿಗಳೂ ಅನುಕೂಲವಾದವು. ತಮ್ಮ ಮಗಳನ್ನು ರಾಮರಾಜನಿಗೆ ಲಗ್ನಮಾಡಿಕೊಟ್ಟ ಸ್ವಲ್ಪ ದಿನಗಳಲ್ಲಿಯೇ ಕೃಷ್ಣದೇವರಾಯರು ಅಕಸ್ಮಾತ್ತಾಗಿ ಬೇನೆಬಿದ್ದರು. ಅವರು ರಾಮರಾಜನನ್ನು ತಮ್ಮ ಬಳಿಯಲ್ಲಿ ಕುಳ್ಳಿರಿಸಿಕೊಂಡು ರಾಜ್ಯಕಾರಭಾರವನ್ನು ನಡಿಸಹತ್ತಿದರು. ಇಷ್ಟು ಆಸ್ಪದವು ದೊರೆತಕೂಡಲೆ ರಾಮರಾಜನು ತನ್ನ ಲಾಭವನ್ನು ಚೆನ್ನಾಗಿ ಮಾಡಿಕೊಳ್ಳಹತ್ತಿದನು. ಕೃಷ್ಣದೇವರಾಯರ ಮನಸ್ಸಿನ ಒಲವನ್ನರಿತು, ಹೀಗೆ ಹೀಗೆ ಅಪ್ಪಣೆಗಳನ್ನು ಬರದಿರುತ್ತೇನೆ, ಎಂದು ಹೇಳಿ ಕೂಡಲೆ ಆಜ್ಞಾಪತ್ರಗಳನ್ನು ಓದಿ ತೋರಿಸಿದನು. ಇದರಿಂದ ಕೃಷ್ಣದೇವರಾಯನು ರಾಮರಾಜನ ಧೈರ್ಯತನಕ್ಕೆ ಮೆಚ್ಚಿ ಆತನನ್ನು ಅಭಿನಂದಿಸ ಹತ್ತಿದನು. ಬೇನೆಯಲ್ಲಿ ಅವರಿಗೆ ಕೆಲಸ ಕಡಿಮೆಯಾಗಿ, ತಮ್ಮ ಮನಸಿನಂತೆ ಕೆಲಸವಾದರೆ ಸಾಕಾಗಿತ್ತು. ಮುಂದೆ ಬರಬರುತ್ತ ರಾಮರಾಜನು ಕೃಷ್ಣದೇವರಾಯರ ಒಲವನ್ನು ಲೆಕ್ಕಿಸದೆ, ತನ್ನ ಮನಸ್ಸಿಗೆ ಬಂದಂತೆ ಆಜ್ಞಾಪತ್ರಗಳನ್ನು ಬರೆದು ಹೀಗೆ ಹೀಗೆ ಎಂದು ರಾಯರ ಮುಂದೆ ನಿವೇದಿಸಹತ್ತಿದನು. ರಾಯರ ಪ್ರಕೃತಿಯು ದಿನದಿನಕ್ಕೆ ಅಶಕ್ತವಾಗುತ್ತ ನಡೆದದ್ದರಿಂದಲೂ, ರಾಮರಾಜನ ಮೇಲೆ ಅವರ ಪೂರ್ಣ ವಿಶ್ವಾಸವಿದ್ದದ್ದರಿಂದಲೂ ರಾಮರಾಜನ ಮಾತಿನ ವಿಷಯವಾಗಿ ಅವರಿಗೆ ವಿಕಲವು ಬಾರದಾಯಿತು. ಬರಬರುತ್ತ ರಾಮರಾಜನು ಸ್ವತಂತ್ರವಾಗಿ ರಾಜ್ಯಭಾರವನ್ನು ಸಾಗಿಸಿ, ದಿನಕ್ಕೊಮ್ಮೆ ರಾಯರ ದರ್ಶನಕ್ಕೆ ಬಂದು, ನಡೆದ ವಿಶೇಷ ಸಂಗತಿಗಳನ್ನು ಕುರಿತು ನಾಲ್ಕು ಮಾತುಗಳನ್ನು ಆಡಹತ್ತಿದನು. ರಾಯರಾದರೂ ಪ್ರಕೃತಿಗೆ ಸ್ವಸ್ಥವಿದ್ದರೆ ರಾಮರಾಜನ ಮಾತುಗಳನ್ನು ಕೇಳುತ್ತಿದ್ದರು, ಇಲ್ಲದಿದ್ದರೆ ಅದನ್ನೂ ಕೇಳುತ್ತಿದ್ದಿಲ್ಲ. ಆದ್ದರಿಂದ ರಾಮರಾಜನೇ ವಿಜಯನಗರದ ರಾಜ್ಯದ ಪ್ರತ್ಯಕ್ಷ ರಾಜನಾದನು.

ರಾಮರಾಜನಂಥ ಮಹತ್ವಾಕಾಂಕ್ಷಿಗೆ ಇಂಥ ಪ್ರಸಂಗವು ದೊರೆತ ಬಳಿಕ ಕೇಳುವದೇನು ? ರಾಮರಾಜನು ತನ್ನ ಹಿತವನ್ನು ಸಾಧಿಸಿಕೊಳ್ಳಲಿಕ್ಕೆ ಬರುವ ಹಾಗಿದ್ದಮಟ್ಟಿಗೆ, ಅದನ್ನು ಕಸರಿಲ್ಲದೆ ಸಾಧಿಸಿಕೊಂಡನೆಂದು ಹೇಳಬಹುದು. ಆತನು ತನ್ನ ಅಣ್ಣನಾದ ತಿರುಮಲನಿಗೆ ಸೇನಾಪತಿಯ ಅಧಿಕಾರವನ್ನು ಕೊಡಿಸಿದನು; ಮತ್ತು ಶಾರ್ಜದೇವನೆಂಬ ತನ್ನ ಮಿತ್ರನಿಗೆ ಕೃಷ್ಣದೇವರಾಯರ ಖಾಸಗಿ ಕಾರಭಾರಿಯನ್ನಾಗಿ ನಿಯಮಿಸಿದನು. ಒಟ್ಟಿಗೆ, ಅರಸರ ಮುಖ್ಯ ಕಾರಭಾರವು ತನ್ನ ಕೈಯಲ್ಲಿ, ಅರಸರ ಸೈನ್ಯವು ತನ್ನ ಅಣ್ಣನ ಕೈಯಲ್ಲಿ, ಅರಸರ ಖಾಸಗಿ ಕಾರಭಾರವು ತನ್ನ ಮಿತ್ರನ ಕೈಯಲ್ಲಿ ; ಹೀಗಾದ ಬಳಿಕ ಮತ್ತೆ ಬೇಕಾದದ್ದೇನು? ಎಲ್ಲಿಯೂ ಎರಡನೆಯವರ ಕೈಯನ್ನು ಸೇರಿಸಗೊಡಬಾರದೆಂದು ರಾಮರಾಜನು