ಈ ಪುಟವನ್ನು ಪ್ರಕಟಿಸಲಾಗಿದೆ

ಕರಾವಳಿಯ ಯಕ್ಷಗಾನ /5

ಪಡುವಲಪಾಯ, ಕಥಕ್ಕಳಿಗಳ ಹೆಣ್ಣು ಬಣ್ಣದ ವೇಷ (ರಾಕ್ಷಸಿ ಪಾತ್ರ)ದ ಕಿರೀಟ ಒಂದೇ ತೆರನಾಗಿರುವುದು. ಆಂಧ್ರದ ಬಯಲಾಟ, ಮೂಡಲಪಾಯ, ತೆರುಕ್ಕೂತ್ತುಗಳ ಭುಜಕೀರ್ತಿ, ಕಿರೀಟಗಳಲ್ಲಿರುವ ಹೋಲಿಕೆ ಇವನ್ನು ನೋಡಬಹುದು.

ಕಾರವಾರದಿಂದ ಕಾಸರಗೋಡಿನ ವರೆಗೆ ಇರುವ ಕರ್ನಾಟಕದ ಕರಾವಳಿಯಲ್ಲಿ ಪ್ರಚಲಿತವಿರುವಂತಹದು 'ಕರಾವಳಿಯ ಯಕ್ಷಗಾನ' ಅಥವಾ ಪಡುವಲಪಾಯ. ಸಹ್ಯಾದ್ರಿಯ ಒಂದಿಷ್ಟು ಮೂಡಣಕ್ಕೆ ಯಲ್ಲಾಪುರದಿಂದ ಕೊಡಗಿನ ವರೆಗಿನ ಗಟ್ಟಕ್ಕೆ ತಾಗಿದ ಉದ್ದನೆಯ ಅಂಚಿನಲ್ಲೂ ಈ ಪ್ರಭೇದವೇ ಬಳಕೆಯಲ್ಲಿದೆ. ಈ ಪ್ರಕಾರವು ಮಾತು, ಗೀತ, ವೇಷ,ತಂತ್ರ, ವಸ್ತು—ಈ ಅಂಶಗಳಲ್ಲಿ ಪ್ರಾದೇಶಿಕ ರಂಗಕಲೆಗಳಲ್ಲೇ ಅತ್ಯಧಿಕವಾದ ಸಂಪನ್ನತೆಯನ್ನೂ ಸಂಕೀರ್ಣತೆ ಯನ್ನೂ ಹೊಂದಿ ಬಲಿಷ್ಠವಾಗಿ ಬೆಳೆದಿದೆ ಎನ್ನಬಹುದು. ಶಾಸ್ತ್ರೀಯ, ಜಾನಪದವೆಂಬ ವಿಭಾಗಸೂತ್ರವು ನಮ್ಮ ಅಭಿಜಾತ,ಸಾಂಪ್ರದಾಯಿಕ ಕಲೆಗಳ ಸಂದರ್ಭದಲ್ಲಿ ಪೂರ್ಣವಾಗಿ ಹೊಂದಿಕೆಯಾಗದು. ಆದರೂ ಸೌಕಯ್ಯಕ್ಕಾಗಿ ಅಂತಹ ವಿಭಜನೆಯನ್ನು ಅಂಗೀಕರಿಸಿದರೆ ಕರಾವಳಿಯ ಯಕ್ಷಗಾನ ಸಂಪ್ರದಾಯವು ಶಾಸ್ತ್ರೀಯ ಹಂತಕ್ಕೆ ತಲಪಿರುವ ಜಾನಪದವೆಂದೋ, ಜಾನಪದಾಂಶಗಳನ್ನು ಹೊಂದಿರುವ ಶಾಸ್ತ್ರೀಯಪ್ರಕಾರವೆಂದೋ ಹೇಳಬಹುದಾದ ಹಂತವನ್ನು ಮುಟ್ಟಿದೆ. ಇದನ್ನೇ ಕಾರಂತರು 'ಶಾಸ್ತ್ರೀಯ ಜಾನಪದಗಳ ಮಧ್ಯಸ್ಥಿತಿ' ಎಂದು ಕರೆದಿದ್ದಾರೆ. ಇದೀಗ ಕರಾವಳಿಯ ಯಕ್ಷಗಾನವು ಕಂಡಿರುವ ತೀವ್ರವಾದ ಬದಲಾವಣೆಯಿಂದ ಬೇಕಾಬಿಟ್ಟಿ ಕಸಿ ಕೆಲಸಗಳಿಂದ, ಸಂಪನ್ನವಾಗಿ ಬೆಳೆದು ಬಂದ ಪರಂಪರೆಯನ್ನು ಕಳೆದುಕೊಂಡು, ವಿಘಟನೆಗೊಂಡು ಅವ್ಯವಸ್ಥೆಯತ್ತ ಸಾಗುವ ಭೀತಿಯ ಲಕ್ಷಣಗಳನ್ನೂ ಸ್ಪಷ್ಟವಾಗಿ ಕಾಣುತ್ತಿದ್ದೇವೆ.

'ಜಾನಪದ' ಎಂಬ ಒಂದು ಶಬ್ದ ವಿಮರ್ಶೆಯಲ್ಲಿ ಪಾವಿತ್ರ್ಯದ ಕವಚ ಹೊಂದಿದ ಶಬ್ದ, ಜಾನಪದವು ಅಮೂಲ್ಯ ಸಂಪತ್ತಿನ ಖನಿ ಎಂಬುದೂ ನಮ್ಮ ಸಂಸ್ಕೃತಿಯ ನೆಲೆ, ಸೆಲೆಗಳನ್ನು ಗುರುತಿಸಿಕೊಳ್ಳುವಲ್ಲಿ ಶ್ರೀಮಂತ ಆಕರವೆಂಬುದೂ ನಿಜವಾದರೂ ಜಾನಪದವನ್ನೆಲ್ಲ ಪವಿತ್ರವಾಗಿ ಭಾವಿಸಿ ಪರಿಷ್ಕಾರಗಳನ್ನು ವಿರೋಧಿಸಬೇಕೇ ಎಂಬ ಪ್ರಶ್ನೆ ಬರುತ್ತದೆ. ಜಾನಪದವೆಂದರೆ ಶಾಸ್ತ್ರವಿಲ್ಲ. ಇಷ್ಟ ಬಂದಂತೆ ಮಾಡಬಹುದು ಎಂಬ ನಿಲುಮೆ ಕೆಲವರದಾದರೆ, ಯಾವುದೇ ಪರಿಷ್ಕಾರ (ಪರಿಕರದಲ್ಲಿ ಕೂಡ) ಸಲ್ಲದೆಂಬ ಅತಿಸಂಪ್ರದಾಯವಾದಿಗಳೂ ಇದ್ದಾರೆ.

ಅಪರಿಷ್ಕೃತ ಸ್ಥಿತಿಯೇ ಜಾನಪದಲಕ್ಷಣ, ಆದುದರಿಂದ ಅಪರಿಷ್ಕಾರ ಕಡಿಮೆ ಇರುವ ಪ್ರಕಾರಗಳು (ಉದಾ: ಮೂಡಲಪಾಯ, ತೆರುಕ್ಕೂತ್ತು) ಇವು ಪ್ರಾಚೀನ ಅಥವಾ ಪ್ರಾಚೀನಾಂಶಗಳನ್ನು ಹೆಚ್ಚು ಉಳಿಸಿಕೊಂಡಿವೆ.—ಎಂಬ