ಈ ಪುಟವನ್ನು ಪ್ರಕಟಿಸಲಾಗಿದೆ

6/ಕೇದಗೆ

ಒಂದು ವಾದವಿದೆ.19 ಆದರೆ ಈ ವಾದ ಸರ್ವಸಮರ್ಪಕವಾಗಲಾರದು. ಅಪರಿಷ್ಕೃತ ಸ್ಥಿತಿಯು — ಸತತವಾದ ಪರಂಪರೆ ಇಲ್ಲದೆ, ಅರೆ ಹವ್ಯಾಸ ಸ್ಥಿತಿಯಲ್ಲಿ ನಿಂತು ಪೂರ್ಣ ಪ್ರಮಾಣದ ರಂಗಭೂಮಿಯಾಗಿ ಬೆಳೆಯದೆಯೂ — ಬರಬಹುದು ಅಥವಾ ಕಲಾಮೌಲ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಆ ಹೊತ್ತಿಗೆ ಕಂಡದ್ದನ್ನು ಸಿಕ್ಕಿದುದನ್ನು ಅಳವಡಿಸುತ್ತ ಸಾಗಿದುದರಿಂದಲೂ ಬರಬಹುದು. ಸದ್ಯ ಕರಾವಳಿಯಲ್ಲೇ ಇದಕ್ಕೆ ಸಾಕಷ್ಟು ದೃಷ್ಟಾಂತಗಳಿವೆ. ಕೆಲವು ಆಟಗಳಂತೂ, ಯಕ್ಷಗಾನದ ಸುದೀರ್ಘ ಪರಂಪರೆಯ ವಾರಿಸುದಾರಿಕೆಯ ಪ್ರತಿನಿಧಿಗಳಾಗಿ ಕಾಣಿಸುವುದೇ ಇಲ್ಲ. ಬದಲಾಗಿ ಅದನ್ನು ಬಿಟ್ಟು, ಅವ್ಯವಸ್ಥೆಯ ಹಂತದತ್ತ ಸಾಗುತ್ತಿವೆ. ಹೀಗೆ ಸಂಸ್ಕಾರಗೊಂಡ ಕಲೆ ಕೂಡ ಪುನಃ ವಿಶಿಷ್ಟ ಕಾರಣಗಳಿಂದ ವಿಘಟನೆಗೊಂಡು ಪುನಃ ಇನ್ನೊಂದೇ ಅರ್ಥದಲ್ಲಿ 'ಜಾನಪದ' ಹಂತಕ್ಕೆ ಬರಬಹುದು ಎಂಬುದು ಸ್ಪಷ್ಟವಾಗುತ್ತದೆ. ಉದಾ: ಇಂದಿನ ತುಳು ಯಕ್ಷಗಾನ ಪ್ರದರ್ಶನಗಳು,

ಕರಾವಳಿಯಲ್ಲಿ ಯಕ್ಷಗಾನದ ಮೇಳ ಅಥವಾ ಆಟಗಳ ಬಗೆಗೆ ನಮಗೆ ದೊರೆಯುವ ಹಳೆಯ ದಾಖಲೆಗಳು ಇವು:

1. ಮಧ್ವಾಚಾರರ ಶಿಷ್ಯರಾದ ನರಹರಿತೀರ್ಥರು ಉಡುಪಿಯಲ್ಲಿ ಬಯಲಾಟ ಆರಂಭಿಸಿದರೆಂದಿರುವ ಐತಿಹ್ಯ.30 (ಮೇಲೆ ಹೇಳಿದ) ಇದು 13 ನೇ ಶತಮಾನಕ್ಕೆ ಸಂಬಂಧಿಸಿದ್ದು. ಇದು ಇನ್ನಷ್ಟು ಸಂಶೋಧನೆಗೆ ಒಳಗಾಗಬೇಕಿದೆ.

ಸಂಶೋಧಕ ಶ್ರೀ ಮಂಜೇಶ್ವರ ಮುಕುಂದ ಪ್ರಭು ಇವರು ತೋರಿಸಿರು ವಂತೆ 1204 ರ ಪಾಣೆಮಂಗಳೂರಿನ ಶಾಸನವೊಂದರಲ್ಲಿ ಕೂತ್ತಾಡಿಗಳ ಉಲ್ಲೇಖವಿದೆ. ಕೂತ್ತು ಎಂದರೆ ಆಟ, ಕೂತ್ತಾಡಿಗಳೆಂದರೆ ಆಟ ಆಡುವವರು, ಅಂದರೆ ನಟರು ಮುಂತಾಗಿ, ಈ ಕೂತ್ತು ನಮ್ಮ ಯಕ್ಷಗಾನದ ಪೂರ್ವರೂಪವೇ ಆಗಿರುವ ಸಂಭವವಿದೆ. ಅದು ಹೌದಾದರೆ, ಈ ಶಾಸನ ತುಂಬ ಮಹತ್ವದ ಉಲ್ಲೇಖವಾಗುತ್ತದೆ.

2. ಯಕ್ಷಗಾನದ ಅತ್ಯಂತ ವಿವಾದಾಸ್ಪದ ಕವಿ ಪಾರ್ತಿಸುಬ್ಬ, ರಾಮಾಯಣ ಪ್ರಸಂಗಗಳ ಕರ್ತೃ. ಇವನ ಕಾಲ (ಇವನ ಹೆಸರು ಪಾರ್ತಿಸುಬ್ಬನೆಂದು ಒಂದು ಮತ, ಅಜ್ಞಾತವೆಂಬುದು ಇನ್ನೊಂದು ಮತ) ಕೇರಳದ ಕೊಟ್ಟಾರಕರ ಮಹಾರಾಜನಿಂದ ರಚಿತವೆನ್ನಲಾದ ರಾಮನಾಟ್ಟಂನ ಪ್ರಸಂಗಗಳಿಗೂ, ಯಕ್ಷಗಾನ ರಾಮಾಯಣ ಪ್ರಸಂಗಗಳಿಗೂ ನೂರಾರು ಪದ್ಯಗಳಲ್ಲಿ ಸಾಮ್ಯವಿದೆ. ಇದು ನಿರ್ವಿವಾದ. ಆದರೆ ಯಾವುದು ಮೂಲ, ಯಾವುದು ಅನುವಾದ ಎಂಬ ಪ್ರಶ್ನೆ ಇದೆ. ರಚನೆಯ ಬಂಧಗಳು, ಪದಪ್ರಯೋಗ, ಲಯ — ಇವುಗಳ ಮೇಲಿಂದ ಮಲಯಾಳ 'ಅಟ್ಟ ಕಥೆ' ಗಳೇ ಮೂಲವೆಂದು ಹೇಳಬೇಕಾಗುತ್ತದೆ. (ನೋಡಿ: ಕುಕ್ಕಿಲ