ಈ ಪುಟವನ್ನು ಪ್ರಕಟಿಸಲಾಗಿದೆ
ಕರಾವಳಿಯ ಯಕ್ಷಗಾನ /7

ಕೃಷ್ಣ ಭಟ್ಟರ ಪಾರ್ತಿಸುಬ್ಬನ ಯಕ್ಷಗಾನಗಳು ಮೈ, ವಿ. ವಿ.) ಪಾರ್ತಿಸುಬ್ಬನ ಕಾಲವನ್ನು ಕುಕ್ಕಿಲರು 1590—1630 ಎಂದು ನಿರ್ಣಯಿಸಿದ್ದಾರೆ.21

3. ಸು. 1564 ರ ವಿಷ್ಣು ಕವಿಯ ವಿರಾಟಪರ್ವ.22 ಇದು ಸದ್ಯ ಕರಾವಳಿಯಲ್ಲಿ ಉಪಲಬ್ಧವಿರುವ ಮೊತ್ತಮೊದಲ ಯಕ್ಷಗಾನಪ್ರಸಂಗ. (ಕೆಂಪಣ್ಣ ಕವಿಯ ಕರಿಭಂಟನ ಕಾಳಗದ 1480 ರ ಪ್ರತಿ ಲಭ್ಯವಾದ ಬಗೆಗೆ ಮೂಡಲಪಾಯ ಕೊನೆಹಳ್ಳಿ ಸಂಚಿಕೆಯಲ್ಲಿ ಉಲ್ಲೇಖ ಇದೆ. ಇದು ಯಕ್ಷಗಾನಸಾಹಿತ್ಯದ ಚರಿತ್ರೆಯಲ್ಲಿ ಮಹತ್ವದ ಸಂಗತಿ. ಇದು ಹೆಚ್ಚಿನ ಪರಿಶೀಲನೆಗೆ ಅರ್ಹವಾಗಿದೆ.)28

4. ಮಂದರ್ತಿ, ಅಮೃತೇಶ್ವರಿ, ಧರ್ಮಸ್ಥಳ ಮೇಳಗಳಿಗೆ ಮುನ್ನೂರು ವರ್ಷಗಳ ಇತಿಹಾಸವಿದೆ ಎಂಬ ಹೇಳಿಕೆಗಳು, ಕೂಡು ಮೇಳಕ್ಕೆ ನಾಲ್ಕು ಶತಮಾನಗಳೆಂಬ ಹೇಳಿಕೆ.

5. 1600 ರ ನಂತರ ವಿಪುಲವಾಗಿ ಪ್ರಸಂಗಸಾಹಿತ್ಯ ದೊರೆಯುವುದನ್ನು ಕಂಡರೆ ಅದಕ್ಕೆ ನೂರು ವರ್ಷಗಳಿಗೆ ಪೂರ್ವದಲ್ಲಾದರೂ ಯಕ್ಷಗಾನವೆಂಬ ರಂಗ ಪ್ರಕಾರ ಸಾಕಷ್ಟು ಬೆಳೆದು ಪ್ರಸಾರವಾಗಿರಬೇಕೆಂಬುದು ಊಹಿಸಲವಕಾಶವಿದೆ.

ಶಿಷ್ಟವೆನಿಸಿದ ಕಾವ್ಯ, ಶಿಲ್ಪ, ಚಿತ್ರ, ಕೆತ್ತನೆಗಳಲ್ಲಿ ಯಕ್ಷಗಾನದ ಉಲ್ಲೇಖವಾಗಲಿ, ಪ್ರಭಾವವಾಗಲಿ ಬಹಳವಾಗಿ ಕಾಣದಿರಲು ಮುಖ್ಯ ಕಾರಣ ಈ ಶಿಷ್ಟ ಪ್ರಕಾರಗಳ ಕರ್ತೃಗಳು ಯಕ್ಷಗಾನಸಂಪರ್ಕದಿಂದ ದೂರ ಉಳಿದುದು. ಅದನ್ನು ದೂರವಿಟ್ಟುದೇ ಕಾರಣ. ಈಗಲಾದರೂ ಕರಾವಳಿಯಲ್ಲಿ ಇರುವ ಯಕ್ಷಗಾನದ ಆಸಕ್ತಿ, ಮೇಳಗಳ ಸಂಖ್ಯೆ, ಅದು ಹೊಂದುವ ಪ್ರಸಾರವ್ಯಾಪ್ತಿಯ ಮಾನದಂಡದಿಂದ, ಚಿತ್ರಕಾರರಾಗಲಿ, ಶಿಲ್ಪಿಗಳಾಗಲಿ, ಕೆತ್ತನೆ ಕೆಲಸಗಾರರಾಗಲಿ ಆ ಕಡೆ ಗಮನ ಹರಿಸಿ ಅಳವಡಿಸಿದ್ದು ತೀರ ಕಡಿಮೆ. ನಮ್ಮ ಚಿತ್ರಶಿಲ್ಪ—ಕಲಾವಿದರು ಯಕ್ಷಗಾನದಂತಹ ಒಂದು ಸಮೃದ್ಧ ಶೈಲಿಯಲ್ಲಿ ಕೆಲಸ ಮಾಡುವ ಬಗ್ಗೆ ಯೋಚಿಸದಿದ್ದುದು ನನಗೊಂದು ವಿಚಿತ್ರವಾಗಿ ಕಾಣುತ್ತದೆ. ಬಹಳಷ್ಟು ಮಳೆ ಬೀಳುವ, ಗಾಳಿಯಲ್ಲಿ ಸದಾ ತೇವ ಇರುವ ಕರಾವಳಿ ಮತ್ತು ಮಲೆನಾಡು ಪ್ರಾಂತ್ಯಗಳಲ್ಲಿ ಹಳೆ ತಾಳೆವಾಲೆಗಳಾಗಲಿ, ಕಡತಗಳಾಗಲಿ ನಾಲ್ಕು ನೂರು ವರ್ಷ ಉಳಿದು ಬಂದರೆ ಹೆಚ್ಚು. ಹಾಗಾಗಿ ದಾಖಲೆಗಳ ಉಳಿವು ಕಷ್ಟವೆ.

ಸದ್ಯ ಕರಾವಳಿಯ ಯಕ್ಷಗಾನದಲ್ಲಿ ಮೂರು ತಿಟ್ಟುಗಳಿವೆ—ತೆಂಕು, ಬಡಗು ಮತ್ತು ಉತ್ತರಕನ್ನಡ. (ಅಥವಾ ಹೊನ್ನಾವರ ತಿಟ್ಟು) ತೆಂಕು—ಬಡಗೆಂದು ಸ್ಕೂಲವಾಗಿ ಎರಡಾಗಿಯೇ ಹೇಳುವುದು ಕ್ರಮವಾದರೂ ಉತ್ತರಕನ್ನಡದ ಯಕ್ಷಗಾನವು ಅಭಿನಯ, ಹಿಮ್ಮೇಳ. ರಂಗತಂತ್ರ ಇವುಗಳಲ್ಲಿ ಬಡಗಿಗಿಂತ ಭಿನ್ನವಾಗಿದ್ದು ಒಂದು ಬೇರೆಯೇ ತಿಟ್ಟು.