ಈ ಪುಟವನ್ನು ಪ್ರಕಟಿಸಲಾಗಿದೆ

ಕರಾವಳಿಯ ಯಕ್ಷಗಾನ /9

3. ಕಾಸರಗೋಡು ಬಳಿಯ ಮಧೂರು ದೇವಸ್ಥಾನದ ಮುಖಮಂಟಪದಲ್ಲಿ ಇರುವ ಯಕ್ಷಗಾನಶೈಲಿಯ ಮರದ ಕೆತ್ತನೆ—ಪುತ್ರಕಾಮೇಷ್ಟಿ ಕತೆಯ ದೃಶ್ಯಗಳು. ಮಧೂರಿನ ದೇವರು ಶಿವ ಮತ್ತು ಗಣಪತಿ. ಇಲ್ಲಿ ರಾಮಾಯಣದ ಈ ದೃಶ್ಯಗಳು ಹೇಗೆ ಮಹತ್ವ ಪಡೆದವು ಎಂಬುದು ಕುತೂಹಲಕಾರಿ. ಪಾರ್ತಿಸುಬ್ಬನ ಮೊದಲ ಪ್ರಸಂಗ 'ಪುತ್ರಕಾಮೇಷ್ಟಿ'. ಅದನ್ನು ಅವನು ಮಧೂರಿನಲ್ಲಿ ರಚಿಸಿದನೆಂಬುದಕ್ಕೆ ಬಲವಾದ ಆಧಾರ.

4. 1700 ರ ಸುಮಾರಿಗೆ ಕುಂಬಳೆ, ಕೂಡುಗಳಲ್ಲಿ ಮೇಳಗಳಿದ್ದವೆಂಬ ಪ್ರತೀತಿ.

5. 1812 ಕ್ಕೆ ಮೊದಲೇ ಮೈಸೂರಿನ ಆಸ್ಥಾನಕ್ಕೆ ಧರ್ಮಸ್ಥಳದಿಂದ ಮೇಳವು ಹೋಗಿತ್ತೆಂಬ ಉಲ್ಲೇಖ. ಈ ಮೇಳವು ತೆಂಕುತಿಟ್ಟಿನದೇ ಆಗಿರಬೇಕು.

ಒಟ್ಟು ಕರಾವಳಿಯ ಯಕ್ಷಗಾನದ ವೇಷಗಳು ಸು. ಕ್ರಿ.ಶ. 1700 ರ ಕಾಲಕ್ಕೆ ಹಿಂದೆಯೇ ಇಂದು ಕಾಣುವ ಕ್ರಮಕ್ಕೆ ಬೆಳೆದಿದ್ದಾವು ಎಂಬುದಕ್ಕೆ ಕುಮಟಾ ಬಳಿ ದೊರೆತ, ಸದ್ಯ ಮೈಸೂರು ವಿ. ವಿ. ಜಾನಪದ ಸಂಗ್ರಹಾಲಯದಲ್ಲಿ ಒಂದು ರಥದ ಮೇಲಿನ ಚಿತ್ರಗಳು ಸ್ಪಷ್ಟ ಸಾಕ್ಷಿ. ಕುಂದಾಪುರದ ಉಪ್ಪಿನಕುದ್ರು ಕಾಮತ್ ಮನೆತನದ ಗೊಂಬೆಯಾಟಕ್ಕೂ ಮುನ್ನೂರು ವರ್ಷಗಳ ಖಚಿತ ಇತಿಹಾಸವಿದೆ. (ಶ್ರೀ ಕೆ. ಎಸ್. ಉಪಾಧ್ಯಾಯರು ನೀಡಿದ ಮಾಹಿತಿ.) ಪದ್ಯಗಳ ಬಂಧ ಮತ್ತು ಯಕ್ಷಗಾನಪ್ರಸಂಗಗಳ ರಚನಾವಿಧಾನಗಳ ಅಧ್ಯಯನದಿಂದ ಯಕ್ಷಗಾನದ ಉಗಮ—ವಿಕಾಸಗಳನ್ನು ಅರಿಯಲು ಸಾಧ್ಯವೆಂದು ವಿದ್ವಾಂಸರು ಸೂಚಿಸಿದ್ದಾರೆ. ಪ್ರಮುಖ ಲಭ್ಯ ಆಧಾರಗಳಿಗೆ, ಐತಿಹ್ಯಗಳಿಗೆ ಸಂವಾದಿಯಾಗಿ ತರ್ಕಿಸಿ ಯಕ್ಷಗಾನವು ಕರಾವಳಿಯಲ್ಲಿ 1500 ರ ಸುಮಾರಿಗೆ ಸಾಕಷ್ಟು ಪ್ರಚಲಿತವಾಗಿತ್ತೆಂದೂ 1600—1700 ರ ಮಧ್ಯೆ ಅದರ ವೇಷ, ಗಾನಗಳು ಇಂದು ಕಾಣುವ ರೂಪದ ಹತ್ತಿರಕ್ಕೆ ಬಂದಿದ್ದು ಎಂದೂ ಊಹಿಸಬಹುದು.

ಯಕ್ಷಗಾನ ಎರಡೂ ತಿಟ್ಟುಗಳ ಸ್ವರೂಪದ ಇತಿಹಾಸದಲ್ಲಿ 1925 ರ ವರೆಗಿನ ಅವಧಿ ಒಂದು. ಸುಮಾರು 1925 ರಿಂದ 1950 ರ ವರೆಗಿನ ಕಾಲ ಮತ್ತು ನಂತರದ ಈ ಮೂರು ದಶಕಗಳು, ಈ ಮೂರು ಕಾಲ ಖಂಡಗಳು ಬಹುಮುಖ್ಯವಾದುವು. 1925 ರ ಸುಮಾರಿಗೆ ಯಕ್ಷಗಾನದ ಚಿತ್ರ, ಗಾನ, ರಂಗತಂತ್ರ ಇವುಗಳಲ್ಲಿ ಒಂದು ಸ್ವರೂಪಶೈಲಿ ಸಿದ್ಧವಾಗಿತ್ತು ಮತ್ತು ಸಾಕಷ್ಟು ಪ್ರಬುದ್ಧವಾಗಿ ಬೆಳೆದಿತ್ತು. 1950 ರ ವರೆಗೆ ಅದರಲ್ಲಿ ಹಲವು ಬದಲಾವಣೆಗಳಾದವು. ಆದರೂ ಅದರ ಮೂಲಸ್ವರೂಪವನ್ನು ಅಲುಗಾಡಿಸುವಷ್ಟು ಅಲ್ಲ.