10/ ಕೇದಗೆ
ಆದರೆ ರೂಪ ಮತ್ತು ವಸ್ತು ಈ ದೃಷ್ಟಿಯಿಂದ 1950 ರ ನಂತರದ ಅವಧಿಯಲ್ಲಿ ಕಾಣಿಸಿದ ಬಹುಮುಖಿಯಾದ ಬದಲಾವಣೆಯಿಂದ ಯಕ್ಷಗಾನದ ಶೈಲಿ. ರೂಪಗಳು ದಿಕ್ಕಾಪಾಲಾಗಿ ರೂಪದ ದೃಷ್ಟಿಯಿಂದ ಅವನತಿಯ ದುರಂತಕ್ಕೊಳಗಾದವೆನ್ನಬೇಕು. ಆದರೆ ವಿಚಿತ್ರ ವಿರೋಧಾಭಾಸ ವೆಂಬಂತೆ ಇದೇ ಅವಧಿಯಲ್ಲಿ ಯಕ್ಷಗಾನದ ಶೈಲಿಯ ಸಂರಕ್ಷಣೆಗೆ ಗಂಭೀರವಾದ ಪ್ರಾಯೋಗಿಕ ನೂತನ ಪ್ರಯತ್ನಗಳಿಗೆ ಶೈಲಿಯನ್ನು ಬಿಡದ ನಾವೀನ್ಯಕ್ಕೆ ಕೂಡ ಇದೆ ಕಾಲದಲ್ಲಿ ಗಮನಾರ್ಹ ಪ್ರಯತ್ನಗಳು ನಡೆದವು. ಸಮಷ್ಟಿಯಾಗಿ ರೂಪ (From) ದೃಷ್ಟಿಯಿಂದ ಯಕ್ಷಗಾನವು ವಿಘಟಿತವಾಗಿ ಅನ್ಯ ಶೈಲಿಗಳ ಪ್ರಭಾವಕ್ಕೆ ಒಳಗಾದ ಇದೇ ಕಾಲದಲ್ಲಿ ವೈಯಕ್ತಿಕ ನೆಲೆಯಲ್ಲಿ ಪ್ರಚಂಡ ಪ್ರತಿಭಾವಂತರೆನಿಸಿದ ಕೆಲವು ಜನ ಕಲಾಕಾರರೂ ರಂಗದಲ್ಲಿ ಕಾಣಿಸಿಕೊಂಡುದು ಇನ್ನೊಂದು ಮಹತ್ವದ ಬೆಳವಣಿಗೆ. ಹಾಗಾಗಿ ರೂಪರಚನಾವಿಧಾನದಲ್ಲಿ ಯಕ್ಷಗಾನ ಈ ಅವಧಿಯಲ್ಲಿ ಗೊಂದಲಕ್ಕೆ ಒಳಗಾದರೆ ವೈಯಕ್ತಿಕ ಪ್ರತಿಭೆ, ವೈವಿಧ್ಯ, ಪ್ರಚಾರ, ಪ್ರಸಾರ, ಆರ್ಥಿಕ ಯಶಸ್ಸು, ಸಾಹಿತ್ಯಾಂಶದ ನಯ - ನಾಜೂಕುಗಳಲ್ಲಿ ಬಹಳಷ್ಟು ಪ್ರಗತಿಯನ್ನು ಸಾಧಿಸಿತು.
ಸಂಗೀತ, ಚಿತ್ರ, ರಂಗವಿಧಾನ, ಸಂಘಟನೆ, ಪಾತ್ರ ಪ್ರಕಾರ ಇವುಗಳಲ್ಲೆಲ್ಲ ತೆಂಕು, ಬಡಗು ಇವು ಇಂದಿಗೂ ಒಂದೇ. ಈ ನೆಲೆಯಲ್ಲೆ ಇಲ್ಲಿ - ಎರಡು ತಿಟ್ಟುಗಳ ಸಾಮ್ಯ - ವೈಷಮ್ಯಗಳನ್ನು ಸೂಚಿಸುತ್ತೇನೆ.
ಸಂಗೀತದಲ್ಲಿ ತೆಂಕು - ಬಡಗು ಒಂದೇ ಆಗಿದ್ದು, ಹತ್ತಾರು ಮುಖ್ಯ ರಾಗಗಳಂತೂ ಪೂರ್ತಿ ಒಂದೇ ರೀತಿ ಇವೆ. ಪದ್ಯಗಳ ಎತ್ತುಗಡೆ, ನಿಲುಗಡೆ, ಗಮಕಗಳಲ್ಲಿ ಒಂದಿಷ್ಟು ವ್ಯತ್ಯಾಸಗಳೂ ಇವೆ. ತೆಂಕಣ ಭಾಗವತ ಜಾಗಟೆ ಧರಿಸುತ್ತಾನೆ. ಬಡಗಿನವನು ತಾಳಧಾರಿ, ಬಡಗಣ ಚೆಂಡೆ, ಮದ್ದಳೆ ವಾದ್ಯಗಳು ಆಕಾರದಲ್ಲಿ ಚಿಕ್ಕವು, ತೆಂಕಣ ವಾದ್ಯಗಳಲ್ಲಿ ಝೇಂಕಾರ ಹೆಚ್ಚು. ತೆಂಕಿನ ಚೆಂಡೆ ಒಂದು ಅಸಾಧಾರಣ ಪರಿಷ್ಕಾರವಾದ ವೈಭವದ ವಾದ್ಯ. ಯಕ್ಷಗಾನ ಸಂಗೀತ ಸಾಧಿಸಿರುವ ಭಾವಾಭಿವ್ಯಕ್ತಿಯ ಸಿದ್ಧಿ, ಉತ್ಕೃಷ್ಟ ಮಟ್ಟದ್ದು. ತೀವ್ರವೂ ಸಶಕ್ತವೂ ಆಗಿರುವ ಈ ಸಂಗೀತದ ಸಾಧ್ಯತೆಯನ್ನು ಉತ್ತರಿಸುವ ಕೆಲಸವನ್ನು ದಿ| ಬಲಿಪ ನಾರಾಯಣ ಭಾಗವತ, ಮಂಜುನಾಥ ಭಾಗವತ, ನಾರಾಯಣ ಉಪ್ಪೂರರಂತಹ ಭಾಗವತರೂ, ದಿ। ತಿಮ್ಮಪ್ಪ ನಾಯಕ, ದುರ್ಗಪ್ಪ ಗುಡಿಗಾರ, ದಿ| ಕುದ್ರೆ ಕೂಡ್ಳು ರಾಮ ಭಟ್ಟರಂತಹ ಮದ್ದಲೆ ವಾದಕರೂ ಯಶಸ್ವಿಯಾಗಿ ಮಾಡಿದ್ದಾರೆ. ತೆಂಕು ತಿಟ್ಟಿನಲ್ಲಿ ಕರ್ನಾಟಕ ಸಂಗೀತವನ್ನು ಬಳಸಿ ಭಾಗವತಿಕೆ ಮಾಡುವ ಕ್ರಮವೂ ಬಳಕೆಗೆ ಬಂದಿದೆ.