ಕರಾವಳಿ ಯಕ್ಷಗಾನದ ನೃತ್ಯಶೈಲಿ, ನಾಗಮಂಡಲದ ನೃತ್ಯ, ಭೂತದ ಕುಣಿತಗಳಿಂದ ಸ್ಫೂರ್ತಿ ಪಡೆದದ್ದು, ಖಚಿತವಾದ ಲಯ, ತೀವ್ರವಾದ ದೊಡ್ಡ ಜೀಸು ಇರುವ ಹೆಜ್ಜೆ ಚಲನಗಳಿಂದ ಅದು ಸೃಷ್ಟಿಸುವ ಭ್ರಮಾಲೋಕ ವಿಶಿಷ್ಟವಾದದ್ದು. ಬಡಗಿನ ಕುಣಿತ ಮುಖ್ಯವಾಗಿ 'ನೃತ್ಯ' ಪ್ರಧಾನ ಲಾಸ್ಯ ಪ್ರವೃತ್ತಿಯದು. ತೆಂಕಣ ನೃತ್ಯ ತಾಂಡವದ ಪ್ರಕೃತಿಯದು; ವೇಷಗಳ ಪ್ರವೇಶ, ಯುದ್ಧ, ಬೇಟೆ, ರಾಕ್ಷಸನ ತೆರೆಕುಣಿತಗಳು, ಜಲಕೇಳಿ, ಮಲ್ಲಯುದ್ಧ ಮುಂತಾದ ಸನ್ನಿವೇಶಗಳಿಗೆ ವಿಶಿಷ್ಟವಾದ ಕುಣಿತಗಳಿದ್ದು ಪಾತ್ರಾನುಗುಣವಾಗಿಯೂ ವೈವಿಧ್ಯವಿದೆ. ಯಕ್ಷಗಾನದ ವಾದ್ಯ, ನೃತ್ಯ, ಮಾತು, ವಸ್ತು ವಿನ್ಯಾಸ ಇದೆಲ್ಲ ಒಟ್ಟು ಒಂದು ಸಮಷ್ಟಿಯಾಗಿ ಎತ್ತರದ ಕಲಾನಿರ್ಮಿತಿಯಾಗಿ ಬೆಳೆದು ಬಂದಿದೆ.
ಯಕ್ಷಗಾನದ ಹಾಸ್ಯಗಾರನ ನೃತ್ಯ ಹಾಸ್ಯರಸಕ್ಕೆ ನೃತ್ಯದ ಬಳಕೆ ಹೇಗೆ ಎಂಬುದಕ್ಕೆ ಒಳ್ಳೆಯ ಮಾದರಿ. ಹಾಗೆಯೇ ಹಿಂದೆ ಹಾಸ್ಯಗಾರನೆಂಬವನು ಇಡಿಯ ರಾತ್ರಿ ರಂಗಸ್ಥಳದಲ್ಲಿರಬೇಕಾದ ವ್ಯಕ್ತಿಯಾಗಿದ್ದು ಈಗ ಕಥಾಪಾತ್ರಗಳಲ್ಲಿ ಮಾತ್ರ ಕಾಣಿಸುತ್ತಿದ್ದಾನೆ. ಹಾಸ್ಯದಲ್ಲಿದ್ದ ಹಗುರ ಮಾತು, ಅಶ್ಲೀಲಗಳು ಮರೆಯಾಗಿ ಮಾತಿನ ಮೊನಚು ಹೆಚ್ಚಿದೆ. ವಿಟ್ಲ ಗೋಪಾಲಕೃಷ್ಣ ಜೋಶಿಯವರಂತಹ ಹಾಸ್ಯಗಾರರು ಪಾತ್ರಚಿತ್ರಣ. ಹಾಸ್ಯದ ವೇಷ ಮುಖವರ್ಣಿಕೆಗಳಲ್ಲಿ ಶ್ರೇಷ್ಟ ಮಟ್ಟದ ಸೃಷ್ಟಿಕಾರ ಮಾಡಿದ್ದರೆ ಮಿಜಾರು ಅಣ್ಣಪ್ಪ ಹಾಸ್ಯಗಾರ ತುಳುಭಾಷೆಯ ಬಣ್ಣವನ್ನೆಲ್ಲ ಸೂರೆಗೊಂಡ ತುಳು ವಿದೂಷಕವರ.
ತೆಂಕುತಿಟ್ಟು ಬಡಗುತಿಟ್ಟುಗಳ ನೃತ್ಯ ಮುಖ್ಯವಾಗಿ ಸೂಚಕ (Suggestive) ರೂಪದ್ದು, ವಿವರವಾದ ಅಭಿವ್ಯಕ್ತಿ (Expresive descriptive) ರೂಪದ್ದಲ್ಲ. ಅಭಿನಯ ಮಿತವಾದದ್ದು, ಕೆಲವೊಂದು ಕೈಕರಣಗಳು ಸಾಂಕೇತಿಕ ಚಲನಗಳು ಮತ್ತು ನೃತ್ಯಗಳಿಂದ ಭಾವಾಭಿವ್ಯಕ್ತಿ ಕೊಡುವಂತಹುದು. ಆದರೆ ಉತ್ತರಕನ್ನಡ ತಿಟ್ಟಿನ ನೃತ್ಯ ನಿಧಾನವಾದ ಲಯದಿಂದ, ವಿವರವಾಗಿ ಪದ್ಯವನ್ನು ಪದಾಭಿನಯವಾಗಿ ನಿರೂಪಿಸುತ್ತದೆ. ನೃತ್ಯ, ಹಿಮ್ಮೇಳ ಈ ಎರಡರಲ್ಲೂ ಉತ್ತರಕನ್ನಡದ ಪದ್ಧತಿ ಅಪೂರ್ವ ಸಿದ್ಧಿ ಪಡೆದಿದೆ. ಉತ್ತರಕನ್ನಡದ ಕಲಾವಿದರ ನೃತ್ಯದ ಪ್ರಭಾವ ಇದೀಗ ಬಡಗು — ತೆಂಕು ಶೈಲಿಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದು ಪ್ರತಿಯೊಬ್ಬ ಕಲಾವಿದನೂ ಅಭಿನಯಕ್ಕಾಗಿ ಪ್ರಯತ್ನ ಮಾಡುತ್ತಾನೆ. ಬಡಗುತಿಟ್ಟಿನ ಮೇಳಗಳ ಇತ್ತೀಚಿನ ಪುನರುತ್ಥಾನಪರ್ವದಲ್ಲಿ ಉತ್ತರಕನ್ನಡದ ಕಲಾವಿದರ ಪಾತ್ರ ಬಹುಮುಖ್ಯ. ಕೆರೆಮನೆ ಬಂಧುಗಳು, ಚಿಟ್ಟಾಣಿ ರಾಮಚಂದ್ರ ಹೆಗ್ಡೆ ಮುಂತಾದ ವೇಷಧಾರಿಗಳು ನೃತ್ಯಾಭಿನಯಗಳಿಂದಲೂ ಕಡತೋಕರಂತಹ ಭಾಗವತರು ಭಾಗವತಿಕೆಯಲ್ಲೂ ಈ ಹೊಸಲೋಕವನ್ನು ತೆರೆದು ತೋರಿದ್ದಾರೆ.