ಈ ಪುಟವನ್ನು ಪರಿಶೀಲಿಸಲಾಗಿದೆ

ಪ್ರಸಂಗರಚನೆ : ರಂಗದೃಷ್ಟಿ /41

ಮೌಲ್ಯ ಮಾಪನ ಇಲ್ಲಿ ಪ್ರಸ್ತುತವಲ್ಲ.) ಹಿಂದಿನ ಪ್ರಸಂಗಗಳೇ ಎಲ್ಲ ದೃಷ್ಟಿಗಳಿಂದ ಉತ್ತಮ. ಇಂದಿನವು ಸಾಮಾನ್ಯ ಎಂಬ ಅಭಿಪ್ರಾಯವನ್ನು ಪ್ರಚುರಪಡಿಸುವವರು ನಿಷ್ಪಕ್ಷ ದೃಷ್ಟಿಯಿಂದ ಹಿಂದಿನ ಇಂದಿನ ಪ್ರಸಂಗಗಳನ್ನ ಪರಿಶೀಲಿಸಬೇಕು. ಹೊಸಪ್ರಸಂಗಗಳ ಬಾಳ್ವೆ ಕಿರಿದೆಂಬ ಒಂದು ಮಾತನ್ನು ಕೇಳುತ್ತೇವೆ. ಇದು ಅವಸರದ ತೀರ್ಮಾನ. ಇಂದಿನ ಒಟ್ಟು ಸನ್ನಿವೇಶದಿಂದ ಆ ಅಭಿಪ್ರಾಯಕ್ಕೆ ಕಾರಣವಾಗುವ ಪರಿಸ್ಥಿತಿ ಇದೆ. ಪ್ರಸಂಗದ ಬಾಳ್ವೆ ಕಿರಿದಾಗಬೇಕಾದರೆ, ಅದಕ್ಕೆ ಸತ್ವ ಕಡಿಮೆಯಾದುದೇ ಕಾರಣವಾಗಬೇಕಿಲ್ಲ. ಬಹುವಾಗಿ ಬೆಳೆದಿರುವ ವ್ಯವಸಾಯ ರಂಗಭೂಮಿ ಇಂದು ಪ್ರತಿವರ್ಷವೂ ಹೊಸ ಹೊಸ ಪ್ರಸಂಗ ಗಳನ್ನು ಬಯಸುತ್ತಿದೆ. ಹೀಗಾಗಿ, ಸತ್ವಯುತವಾದ ಉತ್ತಮ ಪ್ರಸಂಗಗಳೂ ಕೂಡ ಒಂದೇ ವರ್ಷದಲ್ಲಿ ಮರೆಯಾಗಿ, ಬೇರೆ ಪ್ರಸಂಗಗಳು ಬಳಕೆಗೆ ಬರುತ್ತದೆ. ಹಿಂದಿನ ಪ್ರಸಂಗಗಳಿಗೆ ಸತತವಾದ ರಂಗಪ್ರಯೋಗಗಳ ಸೌಲಭ್ಯವಿತ್ತು. ಜನರಿಗೆ ಪರಿಚಿತವಾಗಿದ್ದ ಪುರಾಣಗಳು, ಪಾತ್ರಗಳು ಅವುಗಳಲ್ಲಿ ಇರುವುದರಿಂದ ಆ ಪ್ರಸಂಗಗಳು ಬಹುಕಾಲ ಉಳಿದು, ರಂಗದಲ್ಲಿ ಬೆಳೆದುಬಂದುವು, ಹರಿಶ್ಚಂದ್ರ, ಕರ್ಣ, ಕೃಷ್ಣ ಇವರ ಕತೆಯೊಂದು ರಂಗದಲ್ಲಿ ಬರುವಾಗ ಪ್ರಸಂಗದ ಸರ್ವಾಂಗೀಣ ಸತ್ತ್ವ ಪ್ರಸ್ತುತವಾಗುವುದೇ ಇಲ್ಲ. ಆದುದರಿಂದ ಪ್ರಸಂಗಗಳ ಸತ್ಯವೇ ಹಿಂದಿನ ಪ್ರಸಂಗಗಳು ಉಳಿದು ಬರಲು ಕಾರಣವೆಂದು ತಿಳಿಯಬೇಕಿಲ್ಲ.

ಯಕ್ಷಗಾನ ರಂಗಭೂಮಿಗೆ ಹೊಸ ಅಭಿಪ್ರಾಯಗಳನ್ನು ಹೊಸ ಆಶಯಗಳನ್ನು = ವಸ್ತು, ತಂತ್ರ ಎರಡರಲ್ಲೂ ತರುವ ಯತ್ನ ಹಿಂದೆಯೂ ನಡೆದುದಿದೆ. ಯಕ್ಷಗಾನ ಪ್ರಸಂಗವು ಹೆಚ್ಚು ಲೌಕಿಕವಾಗಿ (Secular) ವರ್ತಮಾನಕ್ಕೆ ಪ್ರಸ್ತುತಗೊಳಿಸುವ ಆವಶ್ಯಕತೆ ಬಹಳಷ್ಟು ಇದೆ. ಇಂತಹ ಪ್ರಯೋಗಗಳು ಹಿಂದೆ ನಡೆದುದರ ಫಲವಾಗಿಯೇ ಕರಿಭಂಟನ ಕಾಳಗ, ಮಾನಸಚರಿತ್ರೆ, ರತ್ನಾವತಿ ಕಲ್ಯಾಣ ಮುಂತಾದ ಪ್ರಸಂಗಗಳು ರಚಿತವಾದುವು. ಆದರೆ ಯಕ್ಷಗಾನವು ಒಂದು ರಮ್ಯಾಮೃತಪ್ರಕಾರವಾದುದರಿಂದಲೂ, ಪುರಾಣಗಳನ್ನೇ ಆಶ್ರಯಿಸಿ ದುದರಿಂದಲೂ ಅಂತಹ ಪ್ರಯೋಗದೃಷ್ಟಿ ಸಾಕಷ್ಟು ಪ್ರಮಾಣದಲ್ಲಿ ಬೆಳೆದು ಬರಲಿಲ್ಲ. ಇಂದು ಅಂತಹ ಒಂದು ಒತ್ತಡ, ವರ್ತಮಾನಕ್ಕೆ ಪ್ರಸ್ತುತ (Relevant) ಆಗುವ ಚಡಪಡಿಕೆ ಈ ರಂಗದಲ್ಲಿ ನಡೆದಿದೆ.

ಸಂಸ್ಕೃತ ನಾಟಕಗಳನ್ನು ಪ್ರಸಂಗರೂಪದಲ್ಲಿ ರಚಿಸಿದ್ದು ಯಶಸ್ವಿ ರಂಗ ಪ್ರಯೋಗಗಳಾಗಿವೆ. (ವಸಂತಸೇನೆ, ವಾಸವದತ್ತ, ನಾಗಾನಂದ, ಮಧ್ಯಮ ವ್ಯಾಯೋಗ) ಕಿಂಗ್‌ಲಿಯರ್, ಹ್ಯಾಮ್ಮೆಟ್‌ಗಳ ರೂಪಾಂತರಗಳು ಪ್ರಸಂಗಗಳಾಗಿವೆ. ತುಳು ಜಾನಪದಸಾಹಿತ್ಯದಲ್ಲಿ ಪ್ರಸಿದ್ಧವಾದ ಕೋಟಿಚೆನ್ನಯ, ಸಿರಿ,