ಈ ಪುಟವನ್ನು ಪ್ರಕಟಿಸಲಾಗಿದೆ

42/ ಕೇದಗೆ

ಕಾಂತಾಬಾರೆ - ಇಂತಹ ಕತೆಗಳ ಜತೆ 'ಕಾಲ್ಪನಿಕ ಜಾನಪದ' ಶೈಲಿಯ ನೂರಾರು ಪ್ರಸಂಗಗಳು ಬಂದಿವೆ. ಪುರಾಣವನ್ನು ವಸ್ತುವಿನಲ್ಲಿ ಹೋಲುವ ಕಾಲ್ಪನಿಕ ಕತೆಗಳ ಪ್ರಸಂಗಗಳ ರಚನೆ (ಯಕ್ಷಲೋಕವಿಜಯ, ರಾಜಮುದ್ರಿಕಾ, ನಾಗಶ್ರೀ, ಪ್ರತಾಪನ ಪ್ರತಾಪ) ಆಗಿದೆ. ಪೌರಾಣಿಕ ಪ್ರಸಂಗಗಳನ್ನೇ ಜೋಡಿಸಿ, ಸಮಗ್ರವಾದ ಒಂದು ಕತೆಯನ್ನಾಗಿ ಹೆಣೆದು ತಯಾರಿಸಿದ ಸಂಪಾದಿತ ಪ್ರಸಂಗಗಳ ಬಳಕ ಜನಪ್ರಿಯವಾಗಿದೆ. (ಭೀಷ್ಮ, ಸಂಪೂರ್ಣ ರಾಮಾಯಣ, ಮಾರುತಿ, ಅರ್ಜುನ) ಅದೇ ರೀತಿ ಒಂದು ಪಾತ್ರವನ್ನು ಕೇಂದ್ರವಾಗಿ ಇರಿಸಿ ಹೊಸತಾಗಿ ಪ್ರಸಂಗ ರಚನೆಗಳಾಗಿವೆ. (ಗುರುದ್ರೋಣ, ಕಡುಗಲಿ ಕೌರವ, ಮಹಾರಥಿಕರ್ಣ, ಮಗಧೇಂದ್ರ, ಭೌಮಾಸುರ) ಪ್ರಧಾನವಲ್ಲದೆ ವಸ್ತುವಿಗೆ ಪ್ರಾಮುಖ್ಯ ನೀಡಿದ ರಚನೆಗಳಿವೆ. (ರಘುವಂಶ, ಪರೀಕ್ಷಿತ) ಹಿಂದಿನ ಪ್ರಸಂಗಗಳ ಮಾದರಿಯಲ್ಲೇ ವಸ್ತುವಿನ್ಯಾಸಗಳೆರಡರಲ್ಲ ಅದೇ ಹಾಡನ್ನು ಹಿಡಿದು ರಚಿಸಿದ ಪ್ರಸಂಗಗಳು ಸಾಕಷ್ಟು ಬಂದಿರುತ್ತವೆ. [ಇವೆಲ್ಲವೂ ಸಾಂಪ್ರದಾಯಿಕ ಕಲೆಯಲ್ಲಿ ನವಚೇತನವನ್ನು ತುಂಬಿಸುವ ಯತ್ನಗಳು.]

ಇವುಗಳ ಜತೆಗೆ ಆಶಯ, ಸಂದೇಶಗಳ ಮಟ್ಟದಲ್ಲಿ ನಾವೀನ್ಯವನ್ನು ತಂದು, ಮಾನವಜೀವನದ ವಾಸ್ತವವನ್ನು, ಸಂಘರ್ಷಗಳನ್ನು, ಯಕ್ಷಗಾನ ರಂಗ ಭೂಮಿಯ ಸ್ವರೂಪದ ನೆಲೆಯಲ್ಲಿ ಬಿಂಬಿಸುವ ಶ್ಲಾಘ್ರ ಪ್ರಯತ್ನವನ್ನು ಕೆಲವರು ಮಾಡಿದ್ದಾರೆ. ತ್ರಿಪುರಮಥನ, ಅಮರೇಂದ್ರಪದವಿಜಯ, ಅಮರವಾಹಿನಿ, ಪ್ರಸಂಗಗಳಲ್ಲಿ ಹೊಸ ಯುಗದ ಧ್ವನಿ ಸ್ಪಷ್ಟವಾಗಿದೆ. ಈ ಪ್ರಯೋಗಗಳು ಇನ್ನಷ್ಟು ಪುಷ್ಪವಾಗಿ ಬೆಳೆಯಬೇಕು. ಯಕ್ಷಗಾನರಂಗ ತನ್ನ ರೂಪವೈಶಿಷ್ಟ್ಯವನ್ನುಳಿಸುವುದರೊಂದಿಗೆ, ಹೊಸಯುಗಕ್ಕೆ ಸ್ಪಂದಿಸಬೇಕು. ಪುರಾಣಗಳು ಪ್ರತಿಪಾದಿಸುವ ಮೌಲ್ಯಗಳಲ್ಲಿ, ಭಕ್ತಿಯುಗದ ಸರಳ ಆದರ್ಶಗಳಲ್ಲಿ ಅದು ಬಂದಿಯಾಗಬಾರದು.