ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಲೆಯ ಮಾತುಗಾರಿಕೆ /49

ಸಹಕಲಾವಿದನ ಒಂದು ಮಾತು, ನಾವು ಕಲ್ಪಿಸಿದ ಇಡಿಯ ಚಿತ್ರವನ್ನು ಬದಲಾಯಿಸಬಹುದು, 'ಅಪಹರಿಸಬಹುದು' ಅಥವಾ ಎತ್ತರಕ್ಕೆ ಒಯ್ಯಬಹುದು. ಸಹಕಲಾವಿದನ ಪ್ರತಿಭೆಯ ಮಟ್ಟವನ್ನು ಅವನ ದೃಷ್ಟಿಯನ್ನು ಬಳಸಿ ಪಾತ್ರವನ್ನು ನಿರ್ಮಿಸುವುದು ಸುಗಮಪ್ರದರ್ಶನಕ್ಕೆ ಮುಖ್ಯ. ಇಂತಹ ಒಂದು ಸಲೀಸಾದ ಹೊಂದಾಣಿಕೆ (Flexibility) ಅರ್ಥಗಾರನಲ್ಲಿರಬೇಕು. ಸಮರ್ಥ ಅರ್ಥಗಾರನಲ್ಲಿರುತ್ತವೆ.

ಅರ್ಥ ಮಾತಾಡುವವನು ಪ್ರಸಂಗದ ಸೀಮೆಯಲ್ಲಿರುತ್ತಾನೆ ಎಂದೆವು. ಅದು ಅವನ ಚೌಕಟ್ಟು ಎನ್ನುತ್ತೇವೆ. "ಪ್ರಸಂಗವನ್ನು ಬಿಟ್ಟು ಅರ್ಥ ಹೇಳ ಬಾರದು" ಎಂಬುದೊಂದು ಅಂಗೀಕೃತತತ್ವ, ಪ್ರಸಂಗಕ್ಕೆ ಅರ್ಥಗಾರ ನಿಷ್ಠನಾಗಿರಬೇಕು ಎಂದು ಕೇಳುತ್ತದೆ. ಹೊಸಕಲ್ಪನೆ ಹೊಸದ್ರವ್ಯಗಳನ್ನು ಅರ್ಥದಲ್ಲಿ ತಂದವರು ಪ್ರಸಂಗಗಳನ್ನು ಮೀರುತ್ತಾರೆ ಎಂಬ ಆಕ್ಷೇಪಕ್ಕೆ ಒಳಗಾಗುವುದುಂಟು. ಪ್ರಸಂಗದ ಚೌಕಟ್ಟೆಂಬುದು ಸಾಮಾನ್ಯ ಔಚಿತ್ಯದೃಷ್ಟಿಯಿಂದ ಒಪ್ಪಿಕೊಳ್ಳಬೇಕಾದ ನಿಯಮ. ಕತೆ ಸಾಗುವ ದೃಷ್ಟಿಯಿಂದ, ಇದಿರಾಳಿಗೆ ಬೇಕಾದ ಸಂದರ್ಭ (ಎತ್ತುಗಡೆ) ಕೊಡುವ ದೃಷ್ಟಿಯಿಂದ, ಪ್ರಸಂಗದಲ್ಲಿರುವ ಭಾವ, ನಾಟಕೀಯತೆಗಳನ್ನು ಅಭಿವ್ಯಕ್ತಿಸುವ ದೃಷ್ಟಿಯಿಂದ ಅದು ಸರಿ. ಆದರೆ ಪ್ರಸಂಗದ ಚೌಕಟ್ಟನ್ನು ಮೀರುವ, ಮಿರದಿರುವ ವಿಷಯ ಅಷ್ಟು ಸರಳವಲ್ಲ. ಇದು ಆಳವಾದ ಪರಿಶೀಲನೆಗೆ ಒಳಗಾಗಬೇಕಾದ ವಿಚಾರ.

ಅರ್ಥಗಾರನು ಪ್ರಸಂಗಕ್ಕೆ ಎಷ್ಟು ಜವಾಬ್ದಾರ? ಪ್ರಸಂಗದಲ್ಲಿರುವುದನ್ನು ವಿವರಿಸಿ ಪ್ರಕಾಶಿಸುವುದಷ್ಟೆ ಅವನ ಕೆಲಸವೆ? ಅಲ್ಲಿ ಅವನು ಅದಕ್ಕೆ ಅರ್ಥವನ್ನು ಹುಡುಕಬೇಕೇ? ಎಂಬುದೀಗ ಮುಖ್ಯ ವಿಚಾರ. ತಾಳಮದ್ದಳೆಯ ಮಾತುಗಾರಿಕೆಯ ಹೆಸರೇ 'ಅರ್ಥ' ಎಂದು. ಅರ್ಥ ಎಂದರೆ ಕಲಾವಿದನಿಗೆ ಆಗುವ ಅರ್ಥ ಅವನ ಲೋಕಪರಿಶೀಲನೆ, ಪಾಂಡಿತ್ಯ, ಪ್ರತಿಭೆಗಳ ಬೆಳಕಿನಲ್ಲಿ ಅವನು ಮಾಡುವ ಅರ್ಥವೂ ಹೌದು. ಪ್ರಸಂಗ ಅವನ ಮೂಲದ್ರವ್ಯ (Raw Material) ಅಷ್ಟೆ. ಅದು ಹಂದರ, ಅದಕ್ಕೆ ರಕ್ತ, ಮಾಂಸ ಜೀವ ತುಂಬುವುದು ಅವನೇ. ಪ್ರಸಂಗ ಅವನಿಗೆ ತಿಳಿಯುವುದು ಅವನ ಅಭ್ಯಾಸ ಸಂಸ್ಕಾರಬಲದಿಂದಲೇ ಹೊರತು ಕವಿಯ ಮನಸ್ಸೇನೆಂಬ ಯಥಾರ್ಥತೆ ಸಂಸ್ಕಾರ ದಿಂದ ಅಲ್ಲ. ರವಿ ಕಾಣದುದನ್ನು ಕವಿ ಕಾಣುತ್ತಾನೆ, ಕವಿ ಕಾಣದುದನ್ನು ವಿಮರ್ಶಕ ಕಾಣುತ್ತಾನೆ ಎಂಬ ಪ್ರಸಿದ್ಧವಾದ ಮಾತಿದೆ. ಅದನ್ನೇ ಬೆಳೆಸುವುದಾದರೆ ಪ್ರಸಂಗಕರ್ತ ಕಾಣದುದನ್ನು ಅರ್ಥಧಾರಿ ಕಾಣುತ್ತಾನೆ, ಕಾಣಲೇಬೇಕು.