ಈ ಪುಟವನ್ನು ಪ್ರಕಟಿಸಲಾಗಿದೆ

50/ ಕೇದಗೆ

ಇಲ್ಲಿ ಕತೆ, ಆಶಯ ಎರಡರ ಪ್ರಶ್ನೆಗಳೂ ಇವೆ. ಪ್ರಸಂಗ ಪ್ರತಿಪಾದಿಸುವ ಆಶಯವನ್ನು ನಾವು ಹಾಗೆಯೇ ಬಿಂಬಿಸಬೇಕೆಂಬ ವಾದವು ಇಂದಿನ ಅರ್ಥಧಾರಿಗೆ ಸಮ್ಮತವಾಗುವ ಸಂಭವವಿಲ್ಲ. ಬೇಕೆಂದೇ ಪ್ರಸಂಗದ ಆಶಯವನ್ನು ಮುರಿದು ಗೊಂದಲವುಂಟುಮಾಡಬೇಕೆಂದು ಇದರ ಅರ್ಥವಲ್ಲ. ಆದರೆ ಅರ್ಥ ಬರಿಯ ವಿವರಣ (to explain) ಅಲ್ಲ. ಅದು ಶೋಧನ (to explore) ಕೂಡಾ ಆಗಿರುತ್ತದೆ, ಆಗಿರಬೇಕು. ಸ್ವತಂತ್ರ ಆಶುಭಾಷಣದ ಅರ್ಥಗಾರಿಕೆಯಲ್ಲಿ ಪ್ರಸಂಗ ನಿಷ್ಠೆಯ ಪ್ರಶ್ನೆ ತುಂಬ ಜಟಿಲವಾದದ್ದು.

ಪ್ರಸಂಗಗಳು ಪ್ರತಿಪಾದಿಸುವ ತೀರ ಸರಳವಾದ ಮಧ್ಯಯುಗೀನ ಆಶಯ ಪ್ರಪಂಚವನ್ನು ಹಾಗೆಯೇ ಅಂಗೀಕರಿಸಲು ಪ್ರಜ್ಞಾವಂತ ಅರ್ಥಧಾರಿಗೆ ಸಾಧ್ಯವಾಗುವುದಿಲ್ಲ. ಕೆಲವು ಕಡೆ ಪ್ರಸಂಗ ಸರಳವಾದ ಹೇಳುವಿಕೆ narration ಮಾತ್ರ ಆಗಿರುವುದರಿಂದ ಅರ್ಥಧಾರಿ ತನ್ನದಾದ ಅರ್ಥವನ್ನು ತುಂಬಿಸಲು ಅವಕಾಶವಿದೆ.

ಲಿಖಿತನಾಟಕದ ಲೇಖಕರ ಆಶಯವನ್ನು ನಾಟಕದ ನಿರ್ದೇಶಕನು ಅಂಗೀಕರಿಸಿ ಪ್ರಕಾಶಿಸಬೇಕೇ? ಅಲ್ಲ ಆ ನಿರ್ದೇಶಕನ ಕಲಾಕೃತಿಯಾಗಿ ನಾಟಕರಂಗದಲ್ಲಿ ಮೂಡಿ ಬರಬೇಕೇ? ಎಂಬುದು ನಾಟಕದ ಸಂದರ್ಭದಲ್ಲಿ ಪರಿಶೀಲಿಸಬರುವ ಒಂದು ವಿವಾದ, ನಿರ್ದೇಶಕನಿಗೆ ಆ ಒಂದು ಸಂದರ್ಭದಲ್ಲಿ ಸ್ವಾತಂತ್ರವಿದೆ ಎಂದು ನಾಟಕರಂಗದಲ್ಲಿ ಅಂಗೀಕೃತವಾದ ಒಂದು ತತ್ತ್ವ. ನಿಶ್ಚಿತವಾದ ಬರಹ ಇರುವ ನಾಟಕದಲ್ಲೇ ನಟರಿಗೆ, ನಿರ್ದೇಶಕನಿಗೆ ಸ್ವಾತಂತ್ರವಿರುವುದಾದರೆ ಪ್ರಸಂಗದ ಪದ್ಯಗಳನ್ನು ಆಶ್ರಯಿಸಿ ತನ್ನದೇ ಮಾತನ್ನಾಡುವ ಅರ್ಥಧಾರಿ ಪ್ರಸಂಗಕ್ಕೆ ನಿಷ್ಠನಾಗಿ ಅದರ ದಾರಿಯನ್ನು ಆಶ್ರಯಿಸಿ ಅಭಿವ್ಯಕ್ತಿಸಬೇಕೆಂದು ಹೇಳುವುದು ಸಾಧುವಲ್ಲ. ಅರ್ಥಧಾರಿಯ ಸ್ವಾತಂತ್ರ ಬಹಳ ಹೆಚ್ಚಿನದು, ಅವನ ಹೊಣೆಯೂ ಹೆಚ್ಚಿನದು. ಸಮಾನಾರ್ಥದಲ್ಲಿ ಅವನು ಪ್ರಸಂಗವನ್ನು ವಿರಬಾರದು ನಿಜ, ಆದರೆ ಇನ್ನೊಂದು ಮಟ್ಟದಲ್ಲಿ ಪ್ರಸಂಗದ ಆಶಯ ಪಾತ್ರ ಪ್ರಪಂಚಗಳನ್ನು ಮೀರಿ ಅರ್ಥವನ್ನು ಸಾಧಿಸುವವನೇ ಸಮರ್ಥ ಕಲಾವಿದ.

ಅರ್ಥಗಾರಿಕೆ ಪ್ರಸಂಗದ ಸ್ವತಂತ್ರ ಪುನಃಸೃಷ್ಟಿ. ಅರ್ಥಗಾರಿಕೆಯ ಅದ್ಭುತ ಸಾಧಿತವಾಗಿರುವುದಕ್ಕೆ ಕಾರಣವೇ ಅದರಲ್ಲಿರುವ ಸ್ವಾತಂತ್ರ ಪಾತ್ರಪ್ರವೇಶದ ಪೀಠಿಕೆಯಲ್ಲಂತೂ ಈ ಸ್ವಾತಂತ್ರ್ಯ ಗರಿಷ್ಠ ಪ್ರಮಾಣದ್ದು. ಪಾತ್ರದ ಮನಃಸ್ಥಿತಿ, ಧೋರಣೆಗಳನ್ನು ಬಿಂಬಿಸಲು ಇದು ಉತ್ತಮ ಅವಕಾಶ, ಉಳಿದೆಡೆಯೂ ಅರ್ಥಧಾರಿಗೆ ಬೇಕಷ್ಟು ಸ್ವಾತಂತ್ರವಿದೆ. ಈ ಸ್ವಾತಂತ್ರವೇ ಈ ಕಲೆಯ ದೌರ್ಬಲ್ಯವೂ ಹೌದು. ಕತೆಯ ನಡೆ ಸಂಭಾಷಣೆ ಗಳು ಎತ್ತೆತ್ತಲೋ ಸಾಗುವುದು ಅರ್ಥಧಾರಿಯ ಸ್ವಂತ ಮಾತುಗಳ ಸೃಷ್ಟಿಯ ಉದ್ದಕ್ಕೂ ಕೆಲಸ ಮಾಡುವ ಸ್ವಪ್ರಜ್ಞೆ ಮುಂದಾಗಿ ಬರುವ ಘರ್ಷಣೆಗಳು,