ಈ ಪುಟವನ್ನು ಪ್ರಕಟಿಸಲಾಗಿದೆ

82/ ಕೇದಗೆ

ಯಾ ಕಪ್ಪು ಬಣ್ಣವಿರುತ್ತದೆ. ಹನುಮಂತನ ಮುಖದ ಬರಹವೂ ಒಂದು ಬಗೆಯ ಬಣ್ಣದವೇಷದ ಭೇದವೆನ್ನಬಹುದು. ಅದಕ್ಕೆ ವಿಶಿಷ್ಟವಾದ ಸುಳಿಗಳು ಮತ್ತು ಕಪಿಮುಖದ ವರ್ಣಿಕೆ ಇದೆ. ಬಣ್ಣದ ವೇಷಗಳಿಗೆ ಬಡಗುತಿಟ್ಟಿನಲ್ಲಿ ಪ್ರಾಧಾನ್ಯ ಮೊದಲಿಂದಲೂ ಕಡಿಮೆ. ಈಗಲಂತೂ ಬಹಳ ಗೌಣ. ತಿಟ್ಟಿನಲ್ಲಿ ಚುಟ್ಟಿಯ ವಿನ್ಯಾಸದಲ್ಲಿ ಕತ್ತರಿಸಿದ ಹಾಳೆ ಯಾ ನವಿಲಿನ ಗರಿಯ ಕಡ್ಡಿಗಳನ್ನು ಚುಟ್ಟಿಯ ಬದಲು ಬಳಸುವ ಕ್ರಮವಿದೆ. ತೆಂಗಿನ ಬಣ್ಣದ ವೇಷಗಳಿಗೂ ಈ ಪ್ರದೇಶದ (ಹಾಗೂ ಕೇರಳದ) ಭೂತಗಳ ವರ್ಣಿಕೆಗಳಿಗೂ ಸಾಮ್ಯವಿದೆ.

ಉಳಿದ ವೇಷಗಳಲ್ಲಿ, ರಾಜವೇಷಗಳು (ವಗಡಿ ಅಥವಾ ಕಿರೀಟ ಧರಿಸುತ್ತವೆ) ಪುಂಡುವೇಷ (ಚಿಕ್ಕಪಗಡಿ - ಸಿರಿಮುಂಡಿ) ಗಳೆರಡಕ್ಕೂ, ಹಣೆಯ ನಾಮ, ಮುಖ ದಲ್ಲಿನ ರೇಖೆಗಳು, ಮುದ್ರೆಗಳೆಲ್ಲ ಇವೆ. ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ. ಮೀಸೆ ಇರಿಸುವ ವೇಷಗಳು ಮಸಿಯಲ್ಲಿ ಗಡ್ಡವನ್ನು ಗೆರೆಯಾಗಿ ಸಂಕೇತಿಸು ವಂತೆ ಬರೆಯುತ್ತವೆ. ಪುಂಡು ವೇಷಗಳಿಗೆ ಮೀಸಗಡ್ಡಗಳಿಲ್ಲ.

ರಾಜವೇಷಗಳಲ್ಲಿ - ಪೀಠಿಕೆ ವೇಷ (ನಾಯಕ ಪಾತ್ರ, ಅರ್ಜುನ, ದೇವೇಂದ್ರ, ಶ್ರೀರಾಮ)ದ ಮುಖವರ್ಣಿಕೆ ಸೌಮ್ಯ, ಇದಿರುವೇಷ - ಎರಡನೇ ವೇಷ (ಕರ್ಣ, ಕೌರವ, ಕಾತ್ಯವೀರ) ಗಳ ಮುಖವರ್ಣಿಕೆ ಪ್ರಖರ. ನಾಮಗಳೂ ಎದ್ದು ಕಾಣುವ ವರ್ಣರೇಖೆಗಳೂ ಇರುತ್ತವೆ. ಇಂದ್ರ, ಅರ್ಜುನ ಇತ್ಯಾದಿಗಳಿಗೆ ಕಣ್ಣಿನ ಕೆಳಗಡೆ ಹಸಿರು ವರ್ತುಲ ಇರುತ್ತದೆ. ಧೀರೋದ್ಧತ ಪಾತ್ರಗಳಿಗೆ ಕೆಂಪು, ಬಿಳಿ ರೇಖೆಗಳನ್ನು ಎಳೆದು ರೇಖೆಗಳು ಸಂಧಿಸುವಲ್ಲಿ ಚಿಕ್ಕ ಚುಟ್ಟಿಗಳನ್ನಿಡುವರು. ಶಿಶುಪಾಲ, ವೀರವರ್ಮ, ಅತಿಕಾಯ, ಕೌಂಡ್ಳಿಕ ಮುಂತಾದ ಪಾತ್ರಗಳಿಗೆ ಮುಖವರ್ಣ ಹಸುರು.

ಇಂದ್ರಜಿತುವಿಗೆ ಹಣೆಯಲ್ಲಿ ತ್ರಿದಳ ಯಾ ವಜ್ರಾಕೃತಿ ಬರೆದು, ಕಣ್ಣು ಹುಬ್ಬುಗಳ ಸುತ್ತ ಪ್ರಖರ ರೇಖೆಗಳನ್ನೆಳೆಯುವರು. ಭಾನುಕೋಪ, ಹಿರಣ್ಯಾಕ್ಷ, ಭಗದತ್ತಾದಿ ಪಾತ್ರಗಳು ಇದೇ ಬಗೆಯ ಮುಖವರ್ಣಿಕೆಯವು. ತಾಮ್ರಧ್ವಜ, ದ್ರೋಣ, ಬಲರಾಮ, ಕರ್ಣ, ಕೌರವಾದಿಗಳಿಗೆ ಹಣೆಯಲ್ಲಿ ಚಕ್ರ, ಗೀರು ಗಂಧಗಳಿರುತ್ತವೆ. ರಾಜವೇಷಗಳ ನಾಮ, ಗಲ್ಲದ ಮುದ್ರೆಗಳಲ್ಲಿ ಹಲವು ವಿನ್ಯಾಸ ಗಳಿವೆ. ಹಿರಣ್ಯಾಕ್ಷ ಸುಲೋಚನರಿಗೆ ಕಣ್ಣಿನ ಕೆಳಗೆ ಹಳದಿ ರೇಖೆ ಇರುತ್ತದೆ. ಶ್ರೀಕೃಷ್ಣ, ಪ್ರದ್ಯುಮ್ಮನಂತಹ ವೇಷಗಳ ಮುಖವರ್ಣ ಪಚ್ಚೆ - ಹಸುರು. ಬಡಗಿನಲ್ಲಿ ಕೃಷ್ಣನಿಗೆ ನಸುಗೆಂಪಿನ ಮುಖವೇ ಇರುವುದು ಸಂಪ್ರದಾಯ. ಈಗ ಬಳಸಲಾಗುವ ನೀಲ (Blue) ಬಣ್ಣ ಸಂಪ್ರದಾಯದಲ್ಲಿ ಇರಲಿಲ್ಲ.