ಋಷಿಮುನಿಗಳಿಗೆ ಹೆಚ್ಚಾಗಿ ಅಡ್ಡನಾಮ. ಅವರಲ್ಲಿ ಉಗ್ರರೆನಿಸಿದ ದುರ್ವಾಸ, ಜಮದಗ್ನಿ ಮುಂತಾದವರಿಗೆ ಕಣ್ಣ ಕೆಳಗಡೆ ಕೆಂಪು ಬರೆಯುತ್ತಾರೆ.
ವಿಶಿಷ್ಟ ವೇಷಗಳೆನಿಸುವ ವರಾಹ, ನರಸಿಂಹ, ಗರುಡ, ಜಟಾಯು, ಶುಕ ಮುಂತಾದವನ್ನೂ ವಾಸ್ತವಿಕವಾಗಿ ಚಿತ್ರಿಸುವ ಕ್ರಮವಿಲ್ಲ. ಮುಖದಲ್ಲಿ ಸಾಂಕೇತಿಕವಾದ ಬರವಣಿಗೆಯಿಂದ ಇವನ್ನು ಚಿತ್ರಿಸುತ್ತಾರೆ. ನರಸಿಂಹ, ವೀರಭದ್ರರಿಗೆ ಸಿಂಹ ಲಲಾಟವನ್ನು ಬರೆದು, ಕೆಂಪು ನಾಲಿಗೆಯನ್ನು ಇರಿಸುತ್ತಾರೆ. ಮೃತ್ಯು ದೇವತೆಯ ಮುಖ ಕಡು ಕೆಂಪು. ವರಾಹನಿಗೆ ಹಂದಿಯ ಮುಖ ಬರೆದು, ಉಗ್ರರೇಖೆಯ ಕಿರಣಗಳಂತಹ ಬರಹವಿರುತ್ತದೆ. ಪುರುಷಾಮೃಗವು ನರಸಿಂಹನಂತೆ ಉಗ್ರರೇಖೆಗಳಿಂದ ಕೂಡಿರುತ್ತದೆ. ಮತ್ಸ್ಯ ವಾನರನಿಗೆ ಕಪಿಯ ಮುಖ ಉದ್ದ ಮೂಗು ಬರೆಯುವ ಕ್ರಮವಿದೆ. ಮಾರೀಚ, ವಿದ್ಯುಜ್ಜಿಹ್ವ ಮುಂತಾದ ಪಾತ್ರಗಳಿಗೆ ಬಣ್ಣ ಬಣ್ಣದ ಪಟ್ಟಿಗಳನ್ನು ಮುಖದಲ್ಲಿ ಬರೆಯುವರು. ಇದಕ್ಕೆ ಜಮಖಾನೆ ಬಣ್ಣ ಎನ್ನುವರು. ಕಿರಾತ, ಗಂಧರ್ವ ಮುಂತಾದ ಪಾತ್ರಗಳ ಉತ್ಸಾಹ ತೀವ್ರತೆಗಳ ಸಂಕೇತವಾಗಿ ಮುಖದಲ್ಲಿ ವರ್ಣರೇಖೆಗಳು ತೀಕ್ಣವಾಗಿರುತ್ತವೆ.
ಸ್ತ್ರೀ - ಪುರುಷ ಪಾತ್ರಗಳೆರಡಕ್ಕೂ ಹಣೆಯು ಬೋಳಾಗಿ ಕಾಣದಂತೆ ಕಪ್ಪು ಕುರುಳುಗಳನ್ನು ಮಸಿಯಿಂದ ಬರೆಯುತ್ತಾರೆ. ಹೆಣ್ಣು ಬಣ್ಣ, ರಾಜ, ಪುಂಡು, ಸ್ತ್ರೀ, ಋಷಿ ಈ ವೇಷಗಳು ಹುಬ್ಬುಗಳನ್ನು ಮಸಿಯಿಂದ ಬೇಕಾದ ಆಕೃತಿಗೆ ತಿದ್ದುತ್ತವೆ.
ವೇಷಭೂಷಣ, ಮುಖವರ್ಣಿಕೆಗಳಲ್ಲಿ ಸಂಪ್ರದಾಯದಿಂದ ತೀರ ದೂರ ವಾಗಿರುವ ವೇಷವೆಂದರೆ ವೇಷ, ಅದು ಈಗ ಸಮಕಾಲದ ಸ್ತ್ರೀವೇಷದ ಪ್ರತಿರೂಪದಂತಿದೆ. (ಅದನ್ನು ಪುರಾಣ ಕಾಲದ್ದಾಗಿಸುವ ಯತ್ನವು ಇದೀಗ ಪುನಃ ನಡೆದಿದೆ.) ಸಂಪ್ರದಾಯದಂತೆ ಸ್ತ್ರೀವೇಷಕ್ಕೆ ನಸು ಹಳದಿಗೆಂಪು ಬಣ್ಣದ ಮುಖ, ಗದ್ದ (Chin) ಕೈ ಕೆಂಪು ಬೊಟ್ಟು, ಸುತ್ತ ಮುತ್ತರಿಗಳು, ಹಣೆಗೆ ಕೆಂಪ ಉದ್ದ ನಾಮ. ಅದರ ಹೊರಗಿಂದ ಮುತ್ತರಿಗಳ ಎರಡು ಸಾಲುಗಳು. ಹುಬ್ಬುಗಳನ್ನು ತಿದ್ದಿ, ತಲೆಗೂದಲವರೆಗೆ ದೀರ್ಘವಾಗಿ ಎಳೆಯುತ್ತಿದ್ದರು. ಹುಬ್ಬಗಳ ಮೇಲೆ ಮುತ್ತರಿಗಳ ಸಾಲು. ಇದು ಪುರುಷವೇಷಕ್ಕೆ ಅನುರೂಪ ವಾದ ಸ್ತ್ರೀವೇಷವಾಗಿತ್ತು. ಪ್ರಮೀಳೆಯಂತಹ ರಾಜಸ ಸ್ತ್ರೀಪಾತ್ರಕ್ಕೆ ಕಣ್ಣ ರೆಪ್ಪೆ ಗಳಿಗೆ ನಸುಗೆಂಪು ವರ್ಣ ಹೆಚ್ಚುತ್ತಿದ್ದರು. ಸ್ತ್ರೀವೇಷಗಳ ಹಣೆಗೆ ಉರುಟು ಬೊ ' ಇಡುವ ಕ್ರಮ ಸಂಪ್ರದಾಯದಲ್ಲಿ ಇರಲಿಲ್ಲ.