ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕಾಶಕರ ನುಡಿ

"ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆ ತೆರೆಗಳಿಗಂಜಿದೊಡೆಂತಯ್ಯ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದಡೆಂತಯ್ಯ? ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯ, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು."

ಅಕ್ಕನ ಈ ವಚನ ಇಂದು ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಖಿನ್ನತೆ ಕಾಯಿಲೆಯ ನಿವಾರಣೆಗೆ ಒಂದು ಅತ್ಯುತ್ತಮ ಪರಿಹಾರೋಪಾಯದ ದಿವ್ಯ ಮಂತ್ರೌಷಧಿಯಾಗಿದೆ. ಜನಪ್ರಿಯ ಸಮುದಾಯ ಮನೋವೈದ್ಯರೆಂದೇ ಪ್ರಖ್ಯಾತಿ ಹೊಂದಿರುವ ಡಾ. ಸಿ. ಆರ್. ಚಂದ್ರಶೇಖರ ಅವರು ರಚಿಸಿರುವ “ಖಿನ್ನತೆ: ಬನ್ನಿ ನಿವಾರಿಸೋಣ” ಈ ಕಿರು ಪುಸ್ತಕ ಎಲ್ಲ ವರ್ಗದ, ಎಲ್ಲ ವಯೋಮಾನದ ಓದುಗರಿಗೆ ಕೈ ದೀವಿಗೆಯಾಗಿದೆ. ತಮ್ಮ ಈ ಕೃತಿಯನ್ನು ಪ್ರಕಟಿಸಲು ಅನುವು ಮಾಡಿಕೊಟ್ಟ ಅವರಿಗೆ ನಮ್ಮ ಅನಂತ ಪ್ರಣಾಮಗಳು.

"ಖಿನ್ನತೆ: ಬನ್ನಿ ಮಾತನಾಡೋಣ" (Depression: Let's Talk) ಎಂಬ ಘೋಷವಾಕ್ಯವನ್ನು ಹೊಂದಿರುವ ಪ್ರಸಕ್ತ 2017ನೆಯ ಸಾಲಿನ ವಿಶ್ವ ಆರೋಗ್ಯ ದಿನಾಚರಣೆಯ ನಿಮಿತ್ತವಾಗಿ ಈ ಪುಸ್ತಕವನ್ನು ಕಡಿಮೆ ಬೆಲೆಗೆ ಕೊಡಬೇಕೆಂಬ ನಮ್ಮ ಸದಾಶಯಕ್ಕೆ ನೀರೆರೆದವರು ಮಾತೋಶ್ರೀ ಗುರಮ್ಮಾ ಎಸ್. ಸಿದ್ದಾರೆಡ್ಡಿ, ಶ್ರೀ ಬಿ. ಎಸ್. ದೇಸಾಯಿ ಹಾಗೂ ಅವರ ಸ್ನೇಹಬಳಗ ಡಾ. ಎಸ್. ಎಸ್. ಗುಬ್ಬಿ, ಹಾಗೂ ಡಾ. ರಾಜೇಶ್ವರಿ ಸಿದ್ದಾರೆಡ್ಡಿ ಅವರು. ಇವರೆಲ್ಲರಿಗೂ ನಮ್ಮ ವಿಶ್ವಾಸ ಪೂರ್ವಕ ವಂದನೆಗಳು, ಹಾಗೆಯೇ, ಅರ್ಥಪೂರ್ಣ ಮುಖಪುಟ ರಚಿಸಿರುವ ಶ್ರೀ ಸುಧಾಕರ ದರ್ಬೆ ಅವರಿಗೆ, ಋಟ ವಿನ್ಯಾಸಗೊಳಿಸಿದ ಶ್ರೀ ಆರ್. ಎಸ್. ಶ್ರೀಧರ ಅವರಿಗೆ ಮತ್ತು ಅಚ್ಚುಕಟ್ಟಾಗಿ ಮುದ್ರಣ ಕಾರ್ಯ ನಿರ್ವಹಿಸಿರುವ ಲಕ್ಷ್ಮೀ ಮುದ್ರಣಾಲಯದ ಸಿಬ್ಬಂದಿಗೆ ಪ್ರೀತಿಪೂರ್ವಕ ನೆನಹುಗಳು.

ಕಲಬುರಗಿ

-ಮಹಾನಂದಾ ಡಿಗ್ಗಾಂವಕರ

ಏಪ್ರಿಲ್ 7, 2017

-ಎಸ್. ಎಸ್. ಹಿರೇಮಠ


6 / ಖಿನ್ನತೆ: ಬನ್ನಿ ನಿವಾರಿಸೋಣ