ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೫೨೭

      (' ಇವರೆಲ್ಲರ ಚೌಕಮಣೆ ಆಟದಲ್ಲಿ ನೀರಾನೆ ಪ್ರಾಂತ ಒಂದು ಕಾಯಿ ಅಲ್ಲವೆ ? ನಾನೇ ಆ ಕಾಯಿ. ಆದರೆ ಉಸಿರಾಡುವ ಕಾಯಿ, ಮಾತನಾಡುವ ಕಾಯಿ. ನಾವೆಲ್ಲ ಗೆದ್ದೆವು ಎನ್ನುತ್ತಿರುವ ಆಟಗಾರರಿಗೆ ಈ ದಿನ ಕಾಯಿ ಸವಾಲು ಹಾಕ್ತದೆ.')
      ಆಮೆರಬ್ ಹೇಪಾಟ್ನನ್ನು ಕೇಳುತ್ತಿದ್ದಾನೆ:
      “ ಇನ್ನು ಶುರು ಮಾಡೋಣ, ಅಲ್ಲವೆ?”
      ಸ್ನೇಹ, ವಿನಯ ಬೆರೆತ ಧ್ವನಿ:
      ತಲೆಯಲುಗಿಸಿ ಒಪ್ಪಿಗೆ ಸೂಚನೆ.
      ಎಲ್ಲರ ದೃಷ್ಟಿಗಳೂ ತನ್ನ ಮೇಲೆ ನೆಟ್ಟರುವುದನ್ನು ನ್ಯಾಯಮೂರ್ತಿ ಆಮೆರಬ್ ಗಮನಿಸಿದ. ಆತ್ಮವಿಶ್ವಾಸ. ತಣುಪು ನೋಟ. ('ನಿಮ್ಮ ಸ್ಪರ್ಶ ದಿಂದ ಅವನು ಮಣ್ಣಾಗ್ತಾನೋ ಬಂಗಾರವಾಗ್ತಾನೋ ನೋಡೋಣ.'ಪೆರೋ ಆಡಿದ್ದ ಈ ಮಾತು ಅಮಾತ್ಯನಿಗೆ ನೆನಪಾಯಿತು. ಐಗುಪ್ತದ ಪ್ರಜೆಗಳ ಬದುಕನ್ನು ನಿಯಂತ್ರಿಸುವ ರೂಪಿಸುವ ವರಿಷ್ಠಾಧಿಕಾರಿ ತಾನು. ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆ. ಇನ್ನು ವಿಳಂಬ ಸರಿಯಲ್ಲ.)
     “ ದೇವಸಮಾನರಾದ ಪೆರೋ ಪೇಪಿಯವರ ದೈವಿಕ ಅಧಿಕಾರದ ವಿರುದ್ಧ ಬಂಡಾಯವೆದ್ದ ನೀರಾನೆ ಪ್ರಾಂತದ ನಾಯಕ ಮೆನೆಪ್ಟಾನ ವಿಚಾರಣೆಗಾಗಿ, ಹಿರಿಯ ನ್ಯಾಯಸ್ಥಾನದ ವಿಶೇಷ ಅಧಿವೇಶನ ಇಲ್ಲಿ ಸೇರಿದೆ. ಮಹಾಪ್ರಭು ಮತ್ತು ಮಹಾರಾಣಿ ವಿಚಾರಣೆಯ ವೀಕ್ಷಣೆಗಾಗಿ ಇಲ್ಲಿಯ ತನಕ ಪಾದ ಬೆಳೆಸಿದ್ದಾರೆ. ಮಹಾ ಅರ್ಚಕ ಹೇಪಾಟ್ ಧಾರ್ಮಿಕ ಮಹತ್ವವಿರುವ ಈ ವಿಚಾರಣೆಯಲ್ಲಿ ಆಸ್ಥೆವಹಿಸಿ ಇಲ್ಲಿಗೆ ಆಗಮಿಸಿದ್ದಾರೆ."
      ಕಿರಿಯ ಲಿಪಿಕಾರರ ಕಡೆಗೊಮ್ಮೆ ದೃಷ್ಟಿ ಬೀರಿ ಅವರು ಬರೆದುಕೊಳ್ಳುತ್ತಿರುವುದನ್ನು ಗಮನಿಸಿ, ತೃಪ್ತನಾಗಿ, ಆಮೆರಬ್ ಮುಂದುವರಿದ:
      “ ಗುರುತರವಾದ ಆರೋಪ. ಆದರೆ ಅದನ್ನು ರುಜುವಾತುಪಡಿಸುವ ಪುರಾವೆಗಳು ಅಸಂಖ್ಯ. ಈ ಮನುಷ್ಯನ ವಿರುದ್ಧ ದೂರು ಇತ್ತಿರುವವರು ಪ್ರತಿಪ್ಠಿತರು. ಹಿರಿಯ ಕಂದಾಯ ಅಧಿಕಾರಿ ಟೆಹುಟಿ, ಪ್ರಾಂತಪಾಲ ಗೇಬು, ಹೆಸರಾಂತ ಭೂಮಾಲಿಕರಾದ ನುಟ್ಮೋಸ್, ಸೆತೆಕ್ ನಖ್ತ್, ಸೆನ್ ಉಸರ್ಟ್... ಎಸಗಿರುವ ಅಪರಾಧಕ್ಕಾಗಿ ವಿಚಾರಣೆ ಇಲ್ಲದೆಯೇ ಶಿಕ್ಷೆ ವಿಧಿಸಬಹುದು. ಅದು