ಈ ಪುಟವನ್ನು ಪ್ರಕಟಿಸಲಾಗಿದೆ



೮೬

ಮೃತ್ಯುಂಜಯ

ನೋಡಿದ. ಸಮೀಪಿಸುತ್ತಿದ್ದ ಜನಜಂಗುಳಿಯನ್ನು ದಿಟ್ಟಿಸಿದ.
" ಸಹಸ್ರಾರು ಜನ ?"
ಹೌದು ಎಂದು ತಲೆಯಾಡಿಸಿದ ಗೇಬು.
" ಬಕಿಲನನ್ನು ಕರೀರಿ !"
ಮೇಲೆ ಬಂದು ಕೈಕಟ್ಟಿ ತಲೆ ಬಗ್ಗಿಸಿ ನಿಂತ ಬಕಿಲನಿಗೆ ಟೆಹುಟಿ
ಆದೇಶವಿತ್ತ :
" ಈ ಅರ್ಚಕರನ್ನು ಮಹಾದ್ವಾರದ ಮುಂದೆ ಜನರೆದುರು ನಿಲ್ಲಿಸು.
ಇವರು ಆ ಜನರಿಗೆ ಬುದ್ಧಿವಾದ ಹೇಳ್ತಾರೆ."
" ಅಪ್ಪಣೆ."
ಕಿರುನಗೆಯನ್ನು ಆತ ಹತ್ತಿಕ್ಕಿದಂತೆ ಕಂಡಿತು.
" ಬುದ್ಧಿಮಾತು ನಾಟದೇ ಇದ್ದಾಗ ಅಗತ್ಯವಿರೋದನ್ನು ನೀನು
ಮಾಡು."
ಮತ್ತೊಮ್ಮೆ ಬಕಿಲನೆಂದ :
" ಅಪ್ಪಣೆ."
ಪ್ರಾಕಾರದ ಹೊರಗಿನಿಂದ ಜನಸ್ತೋಮದ ಕರೆ ಕೇಳಿಸಿತು :
" ಓ ಮೆನೆಪ್ಟಾ ! ಓ ಮೆನೆಪ್ಟಾ !"
ಬಕಿಲ ಅರ್ಚಕನೆಡೆಗೆ ನೋಡಿದ. ಅಪೆಟ್ ಮೌನವಾಗಿ ಅವನನ್ನು
ಹಿಂಬಾಲಿಸಿದ.

****

ರಾಜಗೃಹದತ್ತ ಸಾಗಿ ಬಂದ ಜನರನ್ನು ಸಂದೇಹಗಳು ಬಾಧಿಸಿದ್ದುವು.
ಒಬ್ಬ ಪ್ರಶ್ನಿಸಿದ್ದ :
" ಅವರು ನಮ್ಮ ಮೇಲೆ ಬಾಣ ಪ್ರಯೋಗಿಸಿದರೆ ?"
ಇನ್ನೊಬ್ಬ ಆ ಪ್ರಶ್ನೆಯನ್ನು ತುಂಡರಿಸಿದ್ದ :
"ನಾವೇನೂ ಕಾಡುಪ್ರಾಣಿಗಳಲ್ಲವಲ್ಲ."
ಮೂರನೆಯವನು :
" ಗದೆಯಿಂದ ಅವರು ಚಚ್ಚಬಹುದು ಅಲ್ಲವಾ ?"