ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

97

ಮೀನಾಕ್ಷಮ್ಮ ಹೊರಗೆ ಬಂದು ಒಂದು ನಿಮಿಷ ಅಹಲ್ಯೆಯ ಹಾಡಿಗೆ ಕಿವಿಗೊಟ್ಟಳು.
ಹಾಡು ಮುಗಿದೊಡನೆ,ಕೆಂಪೇರಿದ್ದ ಮುಖದಿಂದ ಅಹಲ್ಯಾ ಚಂಪಾವತಿ
ಯನ್ನು ನೋಡಿದಳು.
"ಸೊಗಸಾಗಿತ್ತು ಅಹಲ್ಯಾ. ಎಷ್ಟು ಚೆನ್ನಾಗಿ ಹಾಡ್ತೀಯಾ ನೀನು! ನನಗೆ
ಗೊತ್ತೇ ಇರ್ಲಿಲ್ಲ."
ಅಹಲ್ಯೆಯ ಹೃದಯ ಹಿಗ್ಗಿತು. ಚಂಪಾವತಿಗೆ ಆ ಹಾಡಿನ ಸಾಲುಗಳು ಅರ್ಥ
ವಾಗಿದ್ದುವು. ಅಹಲ್ಯೆಗೆ ಅವೆಲ್ಲಾ ತಿಳಿದಿದೆಯೋ ಇಲ್ಲವೋ ಎಂದು ಚಂಪಾ ಶಂಕಿಸಿ
ದಳು. ಅಹಲ್ಯೆಯನ್ನು ಉದ್ದೇಶಿಸಿ ಆಕೆಯೆಂದಳು:
"ರಾಗ ಭಾವಗಳು ಬೆರೆತಾಗ ಹಾಡು ಯಾವಾಗ್ಲೂ ಚೆನ್ನಾಗಿರುತ್ತೆ, ಅಲ್ವಾ?"
ಚಂಪಾವತಿ ಹೇಳಿದುದು ಪೂರ್ತಿಯಾಗಿ ಅರ್ಥವಾಗದೆ ಹೋದರು ಅಹಲ್ಯಾ
'ಹೂಂ'ಗುಟ್ಟಿದಳು. ಆದರೆ,ಕಿವಿಗೆ ಇಂಪಾಗಿದ್ದ ಹೊಗಳಿಕೆಯ ಬಲೆಯಲ್ಲಿ, ಚಂಪಾ
ಹಾಡಲು ಒಪ್ಪಿದ್ದುದನ್ನು ಅಹಲ್ಯಾ ಮರೆಯಲಿಲ್ಲ.
"ಇನ್ನು ನಿಮ್ಮದು."
"ಹಾಡ್ಲೆಬೇಕೇನು?"
"ಹೂಂ ಮತ್ತೆ."
ಚಂಪಾವತಿ ಮಗುವನ್ನು ಪಕ್ಕದಲ್ಲಿ ತನ್ನ ತೊಡೆಗೆ ಒರಗಿಸಿ ಕುಳ್ಳುರಿಸಿ ಮುಗು
ಳ್ನಕ್ಕಳು. ಹುಬ್ಬುಗಳು ಚಲಿಸಿದುವು. ಕಣ್ಣುಗಳು ಮಾತನಾಡಿದುವು. ತುಟಿಗಳು
ತೆರೆದುಕೊಂಡವು.
"ತಲ್ಲಣಿಸದಿರು ಕಂಡ್ಯ ತಾಳು ಮನವೇ..."

ಅಹಲ್ಯಾ ಹೊತ್ತಿಸಿದ ಕಿರುಹಣತೆಯಿಂದ ಸೊಡರು ಅಂಟಿಸಿಕೊಂಡು ದೊಡ್ಡ
ಹಣತೆಯೊಂದು ಶೋಭಾಯಮಾನವಾಗಿ ಉರಿಯತೊಡಗಿತು. ಎಷ್ಟೋ ದಿನಗಳಿಂದ
ಪೂರೈಸದೆ ಇದ್ದ ಬಕೆಯನ್ನು ಈಡೇರಿಸುವವಳ ಹಾಗೆ ಚಂಪಾ ಹಾಡಿದಳು. ಹಿಂದೆ
ಶಂಕರನಾರಾಯಣಯ್ಯನೆದುರು ಹಾಡಿದಾಗಲೆಲ್ಲ ಆತನ ಮುಗುಳುನಗು ಆಕೆಯ
ಹೃದಯವನ್ನು ಅರಳಿಸುತ್ತ ಉತ್ತೇಜನವೀಯುತ್ತಿತ್ತು. ಈ ದಿನ ಆತ ಎದುರಿಗಿರಲಿಲ್ಲ.
ಅಹಲ್ಯಾ ಕುಳಿತಿದ್ದಳು. ಆದರೂ ಮುಗುಳ್ನಗುತ್ತಿದ್ದ ತನ್ನ ಪ್ರೀತಿಪಾತ್ರ ಮುಖವನ್ನೇ
ತನ್ನೆದುರು ಕಲ್ಪಿಸಿಕೊಳ್ಳುತ್ತ ಚಂಪಾ ಮೈಮರೆತು ಹಾಡಿದಳು. ಹಾಡುತ್ತಿದ್ದಾಗ,
ಯಾವುದೋ ನೆರಳು ಓಣಿಯಲ್ಲಿ ಚಲಿಸಿದ ಹಾಗೆ ಅಸ್ಪಷ್ಟವಾಗಿ ಆಕೆಗೆ ಭಾಸವಾ
ಯಿತು. ಆದರೆ ಅದೊಂದರ ಗೊಡವೆಯೂ ಇಲ್ಲದೆ ಚಂಪಾ ಹಾಡಿದಳು. ಹಾಡು
ಮುಗಿದು ಆಕೆ ಅಹಲ್ಯೆಯತ್ತ ನೋಡಿದಳು. ಅಹಲ್ಯೆಯ ದೃಷ್ಟಿಯನ್ನೇ ಹಿಂಬಾಲಿಸಿ,
ಬಾಗಿಲಿನತ್ತ ಮುಖ ತಿರುವಿದಳು. ಆಗ ಚಂಪಾವತಿಗೆ ಗಲಿಬಿಲಿಯಾಯಿತು.
"ಅಯ್ಯೋ ಇದೇನು!"

13