ಈ ಪುಟವನ್ನು ಪ್ರಕಟಿಸಲಾಗಿದೆ

130

ಸೇತುವೆ

ಕಂಬಳಿ ಹುಳಕ್ಕೆ ಸಂಬಂಧಿಸಿದ ಮೊದಲ ಆರ್ತನಾದದ ಕೀರ್ತಿ ಈ ವರ್ಷ ಕಾಮಾ
ಕ್ಷಿಗೆ ಸಂದಿತು. ಮೆಲಿನಿಂದ ಬಿದ್ದ ಕಂಬಳಿ ಹುಳು ಆಕೆಯ ಕಿವಿಯನ್ನು ಸವರಿಕೊಂಡು
ಕೆಳಕ್ಕೆ ಉರುಳಿತು. ಐದು ನಿಮಿಷಗಳೂ ಆಗಿರಲಿಲ್ಲ. ತುರಿಸುತ್ತಲಿದ್ದಂತೆ ಕಿವಿ
ದಪ್ಪಗಾಯಿತು; ಮರದ ತುಂಡಿನಂತಾಯಿತು.
"ಅಯ್ಯಯ್ಯೊ-ಇನ್ನೇನು ಗತಿ?" ಎಂದು ಆಕೆ ಕೂಗಾಡಿದಳು.
ಅದರಿಂದೇನೂ ಅಪಾಯವಿಲ್ಲವೆಂದು ರಂಗಮ್ಮ ವಿವರಿಸಿದರು.
"ಒಂದಿಷ್ಟು ಬಿಸಿನೀರಿನ ಶಾಖ ಕೊಟ್ಟು ಕೊಬರಿ ಎಣ್ಣೆ ಸವರು, ಸರಿ
ಹೋಗುತ್ತೆ." ಎಂದು ಅವರು ಗೃಹವೈದ್ಯ ಹೇಳಿಕೊಟ್ಟರು.
ಅಷ್ಟರಲ್ಲಿ ಬೇರೆ ಹುಡುಗರೂ ಕಿರಿಚಿಕೊಂಡರು. ಹುಡುಗರಿಗೆ, ಹುಳಗಳ ಹರಿ
ದಾಟವನ್ನಷ್ಟೆ ಕಂಡು ತೃಪ್ತಿಯಾಗಿರಲಿಲ್ಲ. ಕೋಲುಗಳಿಂದ ಅವುಗಳನ್ನು ಮುಟ್ಟಿ
ಕೆದಕಿದರು. ಬೆರಳುಗಳಿಂದ ಪರೀಕ್ಷಿಸಿ ನೋಡಿದರು. ಪರಿಣಾಮ_ಕೋಲಾಹಲ.
ಚಂಪಾ ತನ್ನ ಪುಟ್ಟ ಕಂದನನ್ನು ಕಂಬಳಿ ಹುಳಗಳಿಂದ ಜೋಪಾನವಾಗಿಡಲು
ತುಂಬಾ ಶ್ರಮಪಡಬೇಕಾಯಿತು.
ಇತರರ ಗದ್ದಲ ಕಡಮೆಯಾದ ಮೇಲೂ ಕಾಮಾಕ್ಷಿಯ ಸ್ವರ ಕೇಳಿಸುತ್ತಿತ್ತು.
"ಅವರು ಬರ್ಲಿ. ನಾನಿನ್ನು ಒಂದು ಘಳಿಗೇನೂ ಈ ಮನೇಲಿ ಇರೋದಿಲ್ಲ,
ಇವತ್ತೇ ನನ್ನ ತವರೂರಿಗೆ ಹೊರಟ್ಹೋಗ್ತೀನಿ...."
ಕಕ್ಕಸಿಗೆಂದು ತಂಬಿಗೆ ಹಿಡಿದು ಹೊರಟು ಬಂದು ಜಯರಾಮು ಓಣಿಯಲ್ಲಿ
ನಿಂತು, ರಂಗಮ್ಮನವರನ್ನು ನೋಡುತ್ತ ಹೇಳಿದ:
"ವಠಾರ ಕೆಟ್ಹೋಯ್ತು ರಂಗಮ್ನೋರೇ, ವಠಾರ ಕೆಟ್ಟು ಹೋಯ್ತು."
"ಏನೋ ಅದು?"
"ಈ ಮಳೆ_ಕಂಬಳಿ ಹುಳ ಥೂ ಥೂ ಥೂ."
ರಂಗಮ್ಮ, ಹಲ್ಲುಗಳು ಕಡಮೆಯಾಗಿದ್ದ ಒಸಡನ್ನು ಅಮುಕುತ್ತಾ, ಜಯ
ರಾಮುವನ್ನು ದುರುಗುಟ್ಟಿ ನೋಡಿದರು. ಜಯರಾಮು ಆ ನೋಟವನ್ನು ಲೆಕ್ಕಿಸದೆಯೇ
ಮಾತನಾಡಿದ:
"ಕಂಬಳಿ ಹುಳ ಬಂದು ಜನರೂ ಕೆಟ್ಹೋದ್ರು..."
"ಸಾಕು ಕಣೋ."
"ನಾನ್ಹೇಳ್ತೀನಿ ರಂಗಮ್ನೋರೆ. ಈ ವಠಾರಾನ ರಿಪೇರಿ ಮಾಡಿಸೋಕೆ ಆಗೋದೇ
ಇಲ್ಲ."
"ಆಗದಿದ್ರೆ ಅಷ್ಟೇ ಹೋಯ್ತು."
"ಇದಕ್ಕಿರೋದು ಒಂದೇ ಉಪಾಯ ರಂಗಮ್ನೋರೆ. ಈ ಮನೆಗಳ್ನೆಲ್ಲಾ ಕಿತ್ತು
ಹಾಕಿಸಿ, ಈ ಹದಿನಾಲ್ಕು ಹದಿನೈದರ ಬದಲು ನಾಲ್ಕು ಮನೆ ತಾರಸೀದು ಸೊಗಸಾಗಿ

ಕಟ್ಟಿಸಿ."