ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

131

ರಂಗಮ್ಮ ಕೋಪ-ಸಂಕಟಗಳನ್ನು ತಡೆಯಲಾರದೆ, ಜಯರಾಮುವಿನ ಕಿವಿ
ಹಿಂಡಲೆಂದು ಧಾವಿಸಿ ಬಂದರು. ಆದರೆ ಆತ ಕಕ್ಕಸಿಗೆ ಓಡಿಹೊದ.
ರಂಗಮ್ಮ ಗಟ್ಟಿಯಾಗಿ ಕೂಗಾಡಿದರು:
"ತಾರಸಿ ಮನೆ ಕಟ್ಟಿಸೋಕೆ ನನ್ಹತ್ರ ದುಡ್ಡಿಲ್ಲ. ನಾನು ಯಾರನ್ನೂ ವಠಾರ
ದಲ್ಲಿ ಕಟ್ಟಿ ಹಾಕಿಲ್ಲ. ಬೇಕಾದೋರು ಇರಿ-ಬೇಡವಾದೋರು ಹೋಗಿ!... ನಾನು
ಮಾತ್ರ ಬಂಗ್ಲೇಲಿದೀನೇನು? ನಿಮ್ಮ ಹಾಗೆ ನಾನೂ ಇಲ್ವೇನು ಈ ವಠಾರದಲ್ಲೇ?"
ಯಾರೂ ಮಾತನಾಡಲಿಲ್ಲ. ರಂಗಮ್ಮ ಹಾಗೆ ಕೂಗಾಡತೊಡಗಿದನ್ನು ಕಂಡು
ಎಲ್ಲರಿಗೂ ಸಂತೋಷವಾಯಿತು. ಅವರೆಲ್ಲ ಕೋಲುಗಳಿಗೆ ಪೊರಕೆ ಕಟ್ಟಿ ಕಂಬಳಿ
ಹುಳಗಳನ್ನು ಗುಡಿಸಲು ಮುಂದಾದರು.
ಕತ್ತಲಾಯಿತು. ಇನ್ನು ಒಂದು ಕ್ಷಣವೂ ಇಲ್ಲಿ ಇರಲಾರೆನೆಂದು ಕೂಗಾಡಿದ
ಕಾಮಾಕ್ಷಿ ಗಂಡನ ಮುಖ ನೋಡಿದ ಮೇಲೆ ತೆಪ್ಪಗಾದಳು. ಕಿವಿಯೂ ತುಸು ಮೃದು
ವಾದಂತೆ ಕಂಡಿತು. ಗಂಡ ಅದನ್ನು ಮುಟ್ಟಿದ ಮೇಲೆ ಆಕೆಗೆ ಸ್ವಲ್ಪ ಹಾಯೆನಿಸಿತು. ಆ
ಸಂಜೆ ಆತನೇ ಅಡುಗೆಯ ಕೆಲಸಕ್ಕಿಳಿದ. ಕುದಿಯುತ್ತಿದ್ದ ಸಾರಿಗೆ ಕಂಬಳಿ ಹುಳ ಬೀಳ
ಬಹುದೆಂಬ ಹೆದರಿಕೆಯಿಂದ ಅದನ್ನು ಮುಚ್ಚಿಯೇ ಇಡಬೇಕಾಯಿತು. ಆದರೆ ಕೊತ
ಕೊತ ಎನ್ನುತ್ತಿದ್ದ ಬಿಸಿ ನೀರು ಮತ್ತು ಬೇಳೆ ಮುಚ್ಚಳವನ್ನು ನೂಕಿಕೊಂಡು ಪ್ರತಿ
ಬಾರಿಯೂ ಹೊರಕ್ಕೆ ಹರಿಯುತ್ತಿದ್ದುವು.
"ಇದರ ಮನೆ ಹಾಳಾಯ್ತು!" ಎಂದು ನಾರಾಯಣ ಶಪಿಸಿದ. ಆದರೆ ನಿರ್ದಿಷ್ಟ
ವಾಗಿ ಯಾವುದನ್ನು ಕುರಿತು ತಾನು ಶಪಿಸಿದ್ದೆಂಬುದು ಆತನಿಗೇ ಗೊತ್ತಿರಲಿಲ್ಲ.
ಮಳೆ ಬಿಸಿಲುಗಳ ನಡುವೆ ನೆಗಡಿ, ಕೆಮ್ಮು, ಜ್ವರಗಳು ವಠಾರಕ್ಕೆ ಭೇಟಿ
ಕೊಟ್ಟುವು. ಮಕ್ಕಳು ಮಲಗಿದರು. ದೊಡ್ಡವರನ್ನೂ ಆ ಕಾಯಿಲೆಗಳು ಕಾಡಿದುವು.
ವಠಾರದ ಜನ ಔಷಧಿಗಾಗಿ ಮ್ಯುನಿಸಿಪಲ್ ಆಸ್ಪತ್ರೆಗೆ ಹೋಗಿ ಬಂದರು.
ಸ್ವತಃ ರಂಗಮ್ಮನೂ ಒಂದೆರಡು ದಿನ ಮಲಗಿದ್ದರು.
"ಮಗನಿಗೆ ಕಾಗದ ಬರೀಬೇಕೇ?" ಎಂದು ಅವರನ್ನು ಕೇಳಿದ್ದಾಯ್ತು.
"ಏನೂ ಬೇಡ. ಇದೆಲ್ಲಾ ಎರಡು ದಿವಸದ ಕಾಹಿಲೆ. ಎದ್ಬಿಡ್ತೀನಿ," ಎಂದು
ರಂಗಮ್ಮ ಆತ್ಮವಿಶ್ವಾಸದಿಂದ ಹೇಳಿದರು.
ಕಮಲಮ್ಮ, ಪದ್ಮಾವತಿ, ಮೀನಾಕ್ಶಮ್ಮ, ಪದ್ಮನಾಭಯ್ಯನ ಹೆಂಡತಿ, ಅಹಲ್ಯೆಯ
ತಾಯಿ-ಯಾರಾದರೊಬ್ಬರು ರಂಗಮ್ಮನ ಬಳಿಯಲ್ಲೇ ಇದ್ದು ಸೇವೆ ಮಾಡಿದರು.
ಬಂದು ವಿಚಾರಿಸಿಕೊಂಡು ಹೋಗುವ ವಿಷಯದಲ್ಲಿ ವಠಾರದ ಯಾರೂ ಹಿಂದಾಗಲಿಲ್ಲ.
ರಾಜಮ್ಮ ತನ್ನ ಕಂಪೌಂಡರ್ ಮಗನಿಗೆ ಹೇಳಿ ರಂಗಮ್ಮನಿಗೆ ಔಷಧಿ ತರಿಸಿದಳು,
ಆದರೆ ಆ ಸೀಮೆ ಔಷಧಿಯನ್ನು ರಂಗಮ್ಮ ಕುಡಿಯಲಿಲ್ಲ.

ತಾವೇ ಹೇಳಿದ್ದಂತೆ, ಎರಡು ದಿವಸ ಕಳೆದು ಮೂರನೆಯ ದಿನವೇ ಅವರು
ಎದ್ದು ಕುಳಿತರು. ರಂಗಮ್ಮ ನಕ್ಕಾಗ, ಎಲ್ಲರಿಗೂ ಸಂತೋಷವಾಯಿತು.